ಕರಾವಳಿಯಲ್ಲಿ ಸಿದ್ದು ವಿರುದ್ಧ ಕೆಂಡ ಉಗುಳಿದ ಬಿಜೆಪಿ ಪಡೆ, ರಾಜ್ಯ ಸರ್ಕಾರದ ವಿರುದ್ಧ ರಣ ಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

Mangaluru---01

ಮಂಗಳೂರು,ಸೆ.7-ಕೆಎಫ್‍ಡಿ, ಎಸ್‍ಎಫ್‍ಐ ಹಾಗೂ ಎಸ್‍ಜಿಡಿಪಿಐ ಸಂಘಟನೆಗಳನ್ನು ನಿಷೇಧಿಸುವುದು, ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯ, ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಯುವ ಮೋರ್ಚಾ ರ್ಯಾಲಿ ರಾಜ್ಯ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಲು ವೇದಿಕೆಯಾಗಿ ಪರಿಣಮಿಸಿತು.  ಪೊಲೀಸರ ಅನುಮತಿಯ ನಿರಾಕರಣೆ ಹಾಗೂ ಭಾರೀ ಬಿಗಿ ಭದ್ರತೆ ನಡುವೆ ಕರಾವಳಿ ಹೆಬ್ಬಾಗಿಲು, ಮಂಗಳೂರಿನಲ್ಲಿ ಕಮಲ ಪಡೆ ಶಕ್ತಿ ಪ್ರದರ್ಶಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದರು.

ಕಾನೂನು ಸುವ್ಯವಸ್ಥೆ ಮುಂದಿಟ್ಟುಕೊಂಡು ಪೊಲೀಸರು ಬೈಕ್ ರ್ಯಾಲಿ ನಡೆಸಲು ಅನುಮತಿ ನೀಡಲಿಲ್ಲ. ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದಲ್ಲೆಡೆ 144 ಸೆಕ್ಷನ್ ವಿಧಿಸಲಾಗಿತ್ತು.  ಬಳಿಕ ಇಲ್ಲಿನ ಜ್ಯೋತಿ ವೃತ್ತದ ಬಳಿ ಜಮಾವಣೆಗೊಂಡ ಸಾವಿರಾರು ಕಾರ್ಯಕರ್ತರು ಇಲ್ಲಿಂದ ಸಮಾವೇಶ ನಡೆಯುವ ಮಂಗಳ ಕ್ರೀಡಾಂಗಣದವರೆಗೆ ಬೈಕ್ ರ್ಯಾಲಿ ನಡೆಸಲು ಅನುಮತಿ ನೀಡಬೇಕೆಂದು ಪಟ್ಟು ಹಿಡಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

ಸಿದ್ದು ಸರ್ಕಾರದ ವಿರುದ್ಧ ಬೆಂಕಿ ಉಗುಳಿದ ಕಮಲ ಪಡೆ:

11 ಗಂಟೆಗೆ ಸರಿಯಾಗಿ ಜ್ಯೋತಿ ವೃತ್ತದ ಬಳಿ ಸಮಾವೇಶಗೊಂಡ ಯುವ ಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.  ಬೇಕೆ ಬೇಕು ನ್ಯಾಯ ಬೇಕು, ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಕಾರ್ಯಕರ್ತರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಂಕಿ ಉಗುಳಿದರು.   ಸಭೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಮುಖಂಡರಾದ ಅರ್.ಅಶೋಕ್, ಅರವಿಂದ ಲಿಂಬಾವಳಿ, ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್‍ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಶಾಸಕರಾದ ನಾರಾಯಣ ಸ್ವಾಮಿ, ಮುನಿರಾಜು, ಅಂಗಾರ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮಾಜಿ ಸಚಿವರು, ಮಾಜಿ ಶಾಸಕರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರಾರಂಭದಲ್ಲಿ ಮಾತನಾಡಿದ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.  ಸಿದ್ದರಾಮಯ್ಯ ಹಿಟ್ಲರ್‍ನಂತೆ ವರ್ತನೆ ಮಾಡುತ್ತಿದ್ದಾರೆ. ರಾಷ್ಟ್ರ ಭಕ್ತರನ್ನು ಬಂಧಿಸುವುದು, ಭಯೋತ್ಪಾದಕ ಸಂಘಟನೆಗಳಂತಿರುವ ಕೆಎಫ್‍ಡಿ, ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳ ಸಮಾಜಘಾತುಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ ಈ ಮುಖಂಡರನ್ನು ಸರ್ಕಾರವೇ ರಕ್ಷಣೆ ಮಾಡುತ್ತದೆ ಎಂದು ದೂರಿದರು.

ಹಿಂದೆ ಮಂಗಳೂರು ಎಂದರೆ ರಾಣಿ ಅಬ್ಬಕ್ಕ , ಶಿವರಾಮ್ ಕಾರಂತ ಅವರಂತಹ ಶ್ರೇಷ್ಠ ದಿಗ್ಗಜರ ಹೆಸರು ನೆನಪಿಸುತ್ತಿತ್ತು. ಇಂದು ಕರಾವಳಿ ಎಂದರೆ ಯಾಸೀನ್ ಭಟ್ಕಳ್, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಇ-ತೋಯ್ಬದಂತಹ ಸಂಘಟನೆಗಳು ನೆನಪಾಗುತ್ತವೆ ಎಂದು ವ್ಯಂಗ್ಯವಾಡಿದರು.  ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕೊಲೆ ಪಾತಕರಿಗೆ ಬೆಂಬಲ ನೀಡುತ್ತಿದ್ದಾರೆ. ಕೂಡಲೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಹೋರಾಟವನ್ನು ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್‍ಕುಮಾರ್ ಕಟೀಲ್ ಮಾತನಾಡಿ, ಭಯೋತ್ಪಾದನೆ ಸಂಘಟನೆಗಳಲ್ಲಿ ತೊಡಗಿರುವ ಕೆಲವು ಸಂಘಟನೆಗಳನ್ನು ಸರ್ಕಾರ ತಕ್ಷಣವೇ ನಿಷೇಧ ಏರಿ ಅವುಗಳ ಮುಖಂಡರನ್ನು ಟಾಡಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದರು.  ಕರಾವಳಿ ಜಿಲ್ಲೆಗಳಲ್ಲಿ ಗೋ ರಕ್ಷಣೆ, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡುವವರ ಮೇಲೆ ಸುಫಾರಿ ಕೊಟ್ಟು ಕಗ್ಗೊಲೆ ಮಾಡಲಾಗುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 13ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಹತ್ಯೆಗೈಯ್ಯಲಾಗಿದೆ. ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದೆಯೇ ಎಂದು ಪ್ರಶ್ನಿಸಿದರು.

ರಾಷ್ಟ್ರ ಭಕ್ತರನ್ನು ಬಂಧಿಸುವುದು, ಕೊಲೆಗಡುಕರನ್ನು ರಕ್ಷಿಸುವ ಕೆಲಸ ಸರ್ಕಾರದಿಂದಲೇ ನಡೆಯುತ್ತಿದೆ. ನೀವು ಎಷ್ಟೇ ನಿರ್ಬಂಧ ಹಾಕಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸಮಾಜಘಾತುಕ ಶಕ್ತಿಗಳು ನಿರ್ಮೂಲವಾಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆ ಮಾತನಾಡಿ, ಕರಾವಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ವ್ಯವಸ್ಥಿತ ಷಡ್ಯಂತರ ನಡೆಸಿದೆ. ಪೆÇಲೀಸರ ಮೂಲಕ ಕಾರ್ಯಕರ್ತರನ್ನು ಬಂಧಿಸುವ ಹುನ್ನಾರ ನಡೆದಿದೆ.

ಸಿದ್ದರಾಮಯ್ಯ ಹೆಚ್ಚೆಂದರೆ ಇನ್ನು ಆರು ತಿಂಗಳು ಆಡಳಿತ ನಡೆಸಬಹುದು. ಅವರ ಹಿಟ್ಲರ್ ಆಡಳಿತ ಕೊನೆಗೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಎಫ್‍ಡಿ, ಎಸ್‍ಎಫ್‍ಐ ಹಾಗೂ ಎಸ್‍ಜಿಡಿಪಿಐ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಹೇಳಿದರು.   ರಾಜ್ಯದಲ್ಲಿ ಇಂತಹ ಹೇಡಿ ಸರ್ಕಾರವನ್ನು ನಾವು ಎಂದೂ ನೋಡಿರಲಿಲ್ಲ. ನೀವು ಎಷ್ಟೇ ಕಾರ್ಯಕರ್ತರನ್ನು ಬಂಧಿಸಿದರೂ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಗುಡುಗಿದರು.
ಇನ್ನು ಮುಖಂಡರಾದ ಅಶೋಕ್ ಲಿಂಬಾವಳಿ ಸೇರಿದಂತೆ ಮತ್ತಿತರರು ಮಾತನಾಡಿದರು.

ಭಾರೀ ಭದ್ರತೆ:

ಬಿಜೆಪಿ ಇಂದು ಮಂಗಳೂರು ಚಲೋ ಹಮ್ಮಿಕೊಂಡ ಕಾರಣ ನಗರದಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಬೆಳಗ್ಗೆಯಿಂದ ಎಲ್ಲೆಡೆ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಾರ್, ಪಬ್, ರೆಸ್ಟೋರೆಂಟ್‍ಗಳನ್ನು ಮುಚ್ಚಲಾಗಿತ್ತು. ಆದರೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.  ಯಾವುದೇ ಅಹಿತಕರ ಘಟನೆ ನಡೆಯದಂತೆ ಆರ್‍ಎಎಫ್, ಕೆಎಸ್‍ಆರ್‍ಪಿ ಸೇರಿದಂತೆ ವಿವಿಧ ಹಂತದ ಭದ್ರತೆಯನ್ನು ನಿಯೋಜಿಸಲಾಗಿತ್ತು.

Facebook Comments

Sri Raghav

Admin