ಕೊಲೆಗಡುಕರ ಬೆನ್ನಟ್ಟಿದ ಎಸ್‍ಐಟಿ, ಗೌರಿ ಲಂಕೇಶ್ ಹತ್ಯೆ ಸ್ಥಳ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

SIT--01

ಬೆಂಗಳೂರು, ಸೆ.7- ಇಂದಿನಿಂದಲೇ ಕಾರ್ಯಾಚರಣೆ ಆರಂಭಿಸಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‍ನಲ್ಲಿರುವ ಗೌರಿ ಲಂಕೇಶ್ ಅವರ ನಿವಾಸಕ್ಕೆ ತೆರಳಿದ ಎಸ್‍ಐಟಿ ತಂಡ ಘಟನೆ ಕುರಿತು ಹಲವು ಮಾಹಿತಿಗಳನ್ನು ಕಲೆ ಹಾಕಿತು. ಇದಕ್ಕೂ ಮುನ್ನ ಎಸ್‍ಐಟಿ ಮುಖ್ಯಸ್ಥ, ಐಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಸಿಐಡಿ ಸಭಾಂಗಣದಲ್ಲಿ ಪ್ರಕರಣ ಸಂಬಂಧ ಮಹತ್ವದ ಸಭೆ ಇಂದು ಬೆಳಗ್ಗೆ ನಡೆಯಿತು.

ತನಿಖೆ ಹಿನ್ನೆಲೆಯಲ್ಲಿ ಎಸ್‍ಐಟಿ ತಂಡಕ್ಕೆ ನೇಮಕವಾಗಿರುವ ಇಬ್ಬರು ಡಿಸಿಪಿಗಳು, ಎಸಿಪಿಗಳು, ಇನ್ಸ್‍ಪೆಕ್ಟರ್‍ಗಳು ಹಾಗೂ ಇತರ ಸಿಬ್ಬಂದಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಎಸ್‍ಐಟಿ ರಚನೆಯಾದ ಮೇಲೆ ನಡೆದ ಮೊದಲ ಸಭೆ ಇದಾಗಿದೆ. ಗೌರಿ ಲಂಕೇಶ್ ಅವರು ಹತ್ಯೆ ಘಟನೆ ನಡೆದಾಗಿನಿಂದ ಈವರೆಗೆ ಆಗಿರುವ ತನಿಖೆಯ ಪ್ರಗತಿ ಬಗ್ಗೆ ಬಿ.ಕೆ.ಸಿಂಗ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಂಗಳವಾರ ರಾತ್ರಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಾಗಿನಿಂದ ಯಾವ ಯಾವ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ ಎಂಬ ವಿವರಗಳನ್ನು ಪಡೆದ ಬಿ.ಕೆ.ಸಿಂಗ್ ಅವರು ಮುಂದೆ ನಡೆಸಬೇಕಾದ ತನಿಖೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಯಾವ ಯಾವ ಅಧಿಕಾರಿಗಳು ಯಾವ ಕೆಲಸ ಮಾಡಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು. ಹತ್ಯೆ ಘಟನೆ ಸಂಬಂಧ ಸಿಸಿಟಿವಿ ಫುಟೇಜ್‍ಗಳನ್ನು ವೀಕ್ಷಿಸಿ ಮುಂದೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ನೀಡಿದರು.

Facebook Comments

Sri Raghav

Admin