ಗೌರಿ ಕುಟುಂಬದವರು ಬಯಸಿದರೆ ಪ್ರಕರಣ ಸಿಬಿಐಗೆ ಒಪ್ಪಿಸುತ್ತೇವೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಬೆಂಗಳೂರು, ಸೆ.7- ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಕುಟುಂಬದವರು ಒತ್ತಾಯಿಸಿದರೆ ಮುಕ್ತ ಮನಸ್ಸಿನಿಂದ ಒಪ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಕುಟುಂಬದವರು ಒತ್ತಾಯ ಮಾಡಿದರೆ ಸಿಬಿಐಗೆ ವಹಿಸಲಾಗುವುದು ಎಂದರು.
ಗೌರಿ ಲಂಕೇಶ್ ಅವರು ಸಂಘ ಪರಿವಾರದ ಅವಹೇಳನ ಮಾಡದೇ ಹೋಗಿದ್ದರೆ ಹತ್ಯೆ ಆಗುತ್ತಿರಲಿಲ್ಲ ಎಂಬ ಶಾಸಕ ಜೀವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಸಕರ ಈ ಹೇಳಿಕೆಯ ಅರ್ಥವೇನು ? ಹತ್ಯೆ ಹಿಂದೆ ಯಾರಿದ್ದಾರೆ ಎಂಬುದು ಇದರಿಂದ ಅರ್ಥವಾಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ನಾನು ಮುಕ್ತ ಮನಸ್ಸು ಹೊಂದಿದ್ದೇನೆ. ಆದರೆ, ಬಿಜೆಪಿಯವರ ಒತ್ತಾಯಕ್ಕೆ ಸೊಪ್ಪು ಹಾಕುವುದಿಲ್ಲ. ನಿನ್ನೆ ಗೌರಿ ಅವರ ತಾಯಿ, ಸೋದರ ಇಂದ್ರಜಿತ್, ತಂಗಿ ಕವಿತಾ ಲಂಕೇಶ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಸಿಬಿಐ ತನಿಖೆಗೆ ಒತ್ತಾಯಿಸಿಲ್ಲ. ಒಂದು ವೇಳೆ ಕುಟುಂಬದವರು ಸಿಬಿಐ ತನಿಖೆಗೆ ಒಪ್ಪಿಸಲು ಹೇಳಿದರೆ ಸಿಬಿಐಗೆ ವಹಿಸಲಾಗುವುದು ಎಂದರು. ಗೌರಿ ಲಂಕೇಶ್ ಹತ್ಯೆಯ ವರದಿ ನೀಡುವಂತೆ ಕೇಂದ್ರ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಮಾವೇಶಕ್ಕೆ ಅಡ್ಡಿಪಡಿಸುವುದಿಲ್ಲ:

ಬಿಜೆಪಿಯವರು ಅನುಮತಿ ಸಿಕ್ಕಿರುವ ಜಾಗದಲ್ಲಿ ಸಮಾವೇಶ ನಡೆಸುವುದಕ್ಕೆ ಸರ್ಕಾರ ಯಾವುದೇ ಅಡ್ಡಿಪಡಿಸುವುದಿಲ್ಲ. ಈ ಹಿಂದೆ ಬೈಕ್ ರ್ಯಾಲಿ ಮಾಡಲು ಮುಂದಾಗಿದ್ದಾಗ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಹೀಗಾಗಿ ಸಮಾವೇಶ ನಡೆಸಲು ಸರ್ಕಾರ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದರು. ನಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದಾಗ ಶಾಂತಿ ಕದಡುವ ಪ್ರಯತ್ನ ಮಾಡಿರಲಿಲ್ಲ. ಬಿಜೆಪಿ ಸೌಹಾರ್ದ ಮತ್ತು ಶಾಂತಿ ಹಾಳು ಮಾಡುತ್ತಿದೆ. ನಾವು ಶಾಂತಿ ಕಾಪಾಡುತ್ತಿದ್ದೇವೆ. ಬಿಜೆಪಿಯವರು ಪಾದಯಾತ್ರೆ ಮಾಡುವ ಬದಲು ಬೈಕ್ ರ್ಯಾಲಿ ಮಾಡುತ್ತಿದ್ದು, ಇದಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದರು.

ಮಂಗಳೂರಿನಲ್ಲಿ ರ್ಯಾಲಿ ಮತ್ತು ಸಮಾವೇಶ ನಡೆಸಲು ಸರ್ಕಾರದ ಅನುಮತಿ ಕೇಳಬೇಕಿತ್ತು. ಇದೀಗ ಅವರು ಏಕಾಏಕಿ ಅನುಮತಿ ಕೊಡುವಂತೆ ಕೇಳುತ್ತಿದ್ದಾರೆ ಎಂದು ಹೇಳಿದರು. ಕಾಪ್ಸ್ ಸಂಸ್ಥೆ ನಡೆಸಿರುವ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಸರಳ ಬಹುಮತ ಬರಲಿದೆ ಎಂಬ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರು ಏನೇ ಮಾಡಿದರೂ ಗೆಲ್ಲುವುದಿಲ್ಲ. ಅಧಿಕಾರದ ಮೋಹ ಅವರಿಗೆ ನೆತ್ತಿಗೇರಿದೆ. ಈ ಮೊದಲು ಸಿ4 ಸಂಸ್ಥೆ ಸಮೀಕ್ಷೆ ನಡೆಸಿದ್ದು, ಅದು ಬಹಿರಂಗವಾಗಿದೆ. ಜನರಿಗೆ ತಪ್ಪು ಮಾಹಿತಿ ನೀಡುವ ಸಲುವಾಗಿ ಮತ್ತೊಂದು ಸಮೀಕ್ಷೆ ನಡೆಸಲಾಗಿದೆ ಎಂದು ಅವರು ಲೇವಡಿ ಮಾಡಿದರು.

Facebook Comments

Sri Raghav

Admin