ಬಿಬಿಎಂಪಿಯಲ್ಲಿ ಅಧಿಕಾರಿಗಳ ತುಘಲಕ್ ದರ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಸೆ.7- ಬಿಬಿಎಂಪಿಯಲ್ಲಿ ಅಧಿಕಾರಿಗಳದ್ದೇ ದರ್ಬಾರ್. ಸ್ಥಾಯಿ ಸಮಿತಿಗಳಿಗಾಗಲಿ, 198 ಚುನಾಯಿತ ಜನಪ್ರತಿನಿಧಿಗಳಿಗಾಗಲಿ ಯಾವುದೇ ಮನ್ನಣೆ ಇಲ್ಲ. ಅವರನ್ನು ಇದೇ ರೀತಿ ಬಿಟ್ಟರೆ ಇಡೀ ಪಾಲಿಕೆಯನ್ನೇ ನುಂಗಿ ನೀರು ಕುಡಿಯುತ್ತಾರೆ ಎಂದು ಲೆಕ್ಕಪತ್ರ ಸ್ಥಾಯಿ ಸಮಿತಿ ಆರೋಪಿಸಿದೆ.
ಪಾಲಿಕೆ ಬೊಕ್ಕಸಕ್ಕೆ ಆಗುತ್ತಿರುವ ಕೋಟ್ಯಂತರ ರೂಪಾಯಿ ಸೋರಿಕೆಯನ್ನು ತಡಗಟ್ಟಲು ನಮ್ಮ ಲೆಕ್ಕಪತ್ರ ಸ್ಥಾಯಿ ಸಮಿತಿ ಹೊಸ ಲೆಕ್ಕಪತ್ರ ವ್ಯವಸ್ಥೆ ಜಾರಿಗೆ ತರಲು ಮುಂದಾದರೆ.

ಅಧಿಕಾರಿಗಳು ನಮ್ಮನ್ನು ಮೀರಿಸಿ ಅವರೇ ಬೇಕಾಬಿಟ್ಟಿ ಅಕೌಂಟ್ ಗೈಡ್‍ಲೈನ್ಸ್ ತರಲು ಮುಂದಾಗಿದ್ದಾರೆ. ಇದಕ್ಕೆಲ್ಲ ಆಯುಕ್ತರು, ಹಣಕಾಸು ವಿಭಾಗದ ವಿಶೇಷ ಆಯುಕ್ತರೇ ನೇರ ಕಾರಣ ಎಂದು ಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿಂದು ವಾಗ್ದಾಳಿ ನಡೆಸಿದರು. ಬಿಬಿಎಂಪಿಯಲ್ಲಿ ಬೇಕಾಬಿಟ್ಟಿ ನೇಮಕ ಮಾಡಲಾಗಿದೆ. ಯಾರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ ಎಂಬ ಲೆಕ್ಕ ಇಲ್ಲ. ಮನಬಂದಂತೆ ವೇತನ ಕೊಡುತ್ತಿದ್ದಾರೆ. ಪಿಡಬ್ಲ್ಯೂಡಿ, ರಾಜ್ಯ ಹಣಕಾಸು ಇಲಾಖೆಯಿಂದ ಮಾತ್ರ ಎರವಲು ಸೇವೆ ಮೇಲೆ ಪಾಲಿಕೆಗೆ ಬರಬೇಕು. ಆದರೆ, ಬಿಬಿಎಂಪಿಯಲ್ಲಿ ಕೆಎಸ್‍ಎಫ್‍ಸಿ, ಕೆಆರ್‍ಐಡಿಎಲ್, ಡಿಎಂಎ, ಕೆಪಿಟಿಸಿಎಲ್, ಹುಡ್ಕೋ ಸೇರಿದಂತೆ ಇನ್ನಿತರ ಸಂಸ್ಥೆಗಳಿಂದಲೂ ಬಂದಿದ್ದಾರೆ. ಅವರು ಪಡೆಯುವ ವೇತನ ಆಯುಕ್ತರಿಗೂ ಬರುವುದಿಲ್ಲ ಎಂದು ದೂರಿದರು.

ಲೆಕ್ಕ ಪರಿಶೋಧನೆಯಲ್ಲಿ 1200 ಕೋಟಿ ರೂ. ವಸೂಲಿ ಮಾಡಬೇಕು. ಆದರೆ, ಯಾವುದೇ ಅಧಿಕಾರಿಗಳು ವಸೂಲಿಗೆ ಮುಂದಾಗಿಲ್ಲ. ಏನಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ಆಡಿಟರೇ ಇಲ್ಲ. ಕೇವಲ ಡಾಟಾ ಎಂಟ್ರಿಯವರು ಮಾತ್ರ ಇದ್ದಾರೆ. ಇವರಿಗೆ 73 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಹೊಸ ಲೆಕ್ಕಪತ್ರ ವ್ಯವಸ್ಥೆ ಜಾರಿಗೆ ತರಲು ನಮ್ಮ ಸಮಿತಿ ಮುಂದಾಗಿತ್ತು ಎಂದು ಹೇಳಿದರು. ನಮ್ಮ ಸಮಿತಿ ಕೆಪಿಟಿಸಿಎಲ್‍ನಲ್ಲಿ ಹಣಕಾಸು ವ್ಯವಸ್ಥೆ ನೋಡಿ ಬಂದಿತ್ತು. ಮುಂಬೈನಲ್ಲಿ ಡಿಜಿಟಲ್ ಲೆಕ್ಕ ವ್ಯವಸ್ಥೆ ಜಾರಿಗೆ ತಂದ ಮೇಲೆ 50 ಸಾವಿರ ಕೋಟಿ ಉಳಿತಾಯ ಆಗಿದೆ. ಇದನ್ನು ನೋಡಲು ನಮ್ಮ ಸಮಿತಿ ನಿರ್ಧರಿಸಿತ್ತು. ಆದರೆ, ಹಣಕಾಸು ವಿಭಾಗದ ವಿಶೇಷ ಆಯುಕ್ತ ಮನೋರಂಜನ್ ಅವರು ನಮ್ಮನ್ನು ದಾರಿ ತಪ್ಪಿಸಿದರು. ತಮ್ಮ ಮೂಗಿನ ನೇರಕ್ಕೆ ಹೊಸ ಗೈಡ್‍ಲೈನ್ ತರಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪಾಲಿಕೆ ಅಕೌಂಟ್‍ಗಳಿಗೆ ಹ್ಯಾಕ್ ಪ್ರೂಫೇ ಇಲ್ಲ. ಯಾರಾದರೂ ಇವುಗಳನ್ನು ಹ್ಯಾಕ್ ಮಾಡಿದರೆ ಕೋಟ್ಯಂತರ ರೂಪಾಯಿ ಮಂಗಮಾಯ ಆಗಿಬಿಡುತ್ತದೆ. ಇಂತಹ ಹೀನಾಯ ಸ್ಥಿತಿಯಲ್ಲಿ ಪಾಲಿಕೆ ಇದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಹೊಸ ಗೈಡ್‍ಲೈನ್‍ಅನ್ನು ನಮ್ಮ ಸ್ಥಾಯಿ ಸಮಿತಿ ಗಮನಕ್ಕೆ ತಂದೇ ಇಲ್ಲ. ನಮಗೆ ಅದು ಹೇಗೋ ಗೊತ್ತಾಗಿ ಈ ಬಗ್ಗೆ ಆಯುಕ್ತರನ್ನು ಕೇಳಿದೆವು. ಅವರು ಏನೇನೋ ಸಬೂಬು ಹೇಳಿ ನಾಮಕಾವಸ್ಥೆಗೆ ಗೈಡ್‍ಲೈನ್ ಕಳುಹಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಜನಪ್ರತಿನಿಧಿಗಳನ್ನು ಅಧಿಕಾರಿಗಳು ಲೆಕ್ಕೆಕ್ಕೆ ತೆಗೆದುಕೊಳ್ಳುತ್ತಿಲ್ಲ. ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2001ರಿಂದ ಬಿಬಿಎಂಪಿಯಲ್ಲಿ ಹೊಸ ಲೆಕ್ಕಪತ್ರ ಪದ್ಧತಿ ಜಾರಿಗೆ ಬಂದಿಲ್ಲ. ಹಾಗಾಗಿ ನಮ್ಮ ಸಮಿತಿ ಡಿಜಿಟಲೀಕರಣ ಮಾಡಲು ಮುಂದಾಗಿತ್ತು. ನಮ್ಮ ಈ ಉದ್ದೇಶಕ್ಕೆ ಅಧಿಕಾರಿಗಳು ಅಡ್ಡಿ ಉಂಟುಮಾಡಿದ್ದಾರೆ ಎಂದು ದೂರಿದರು. ಭಾರತೀಯ ಅರಣ್ಯ ಸೇವೆಯಿಂದ ಇಲ್ಲಿಗೆ ಬಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿರುವ ಮನೋರಂಜನ್ ಅವರೇ ನೂತನ ಲೆಕ್ಕ ನೀತಿ ಸಮಿತಿ ಅಧ್ಯಕ್ಷ ತಾವೇ ಎಂದು ಘೋಷಿಸಿಕೊಂಡಿದ್ದಾರೆ. ಅವರೇ ಮಾರ್ಗಸೂಚಿಯನ್ನು ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಅದರಲ್ಲಿ ಡಿಜಿಟಲೀಕರಣದ ಪ್ರಸ್ತಾಪವನ್ನೇ ಮಾಡಿಲ್ಲ. ಅವರ ಈ ಧೋರಣೆ ಗಮನಿಸಿದರೆ ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುವುದೇ ಅವರ ಉದ್ದೇಶವಾಗಿದೆ ಎಂದು ನೇತ್ರಾ ನಾರಾಯಣ್ ಗಂಭೀರ ಆರೋಪ ಮಾಡಿದರು.
ನಮ್ಮ ಲೆಕ್ಕಪತ್ರ ಸ್ಥಾಯಿ ಸಮಿತಿಗೇ ಬಿಬಿಎಂಪಿಯಲ್ಲಿ ಎಷ್ಟು ಅಕೌಂಟ್‍ಗಳಿವೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ನಾವು ಸಭೆ ಕರೆದರೂ ಯಾರೂ ಬರುವುದಿಲ್ಲ. ಇದು ಹೀಗೇ ಮುಂದುವರಿದರೆ ಈ ಅಧಿಕಾರಿಗಳು ಬಿಬಿಎಂಪಿಯನ್ನು ಪಾಪರ್ ಚೀಟಿ ಮಾಡಿಬಿಡುತ್ತಾರೆ ಎಂದು ಎಚ್ಚರಿಸಿದರು.

ಅಧಿಕಾರಿಗಳ ಈ ಧೋರಣೆಯನ್ನು ಮೇಯರ್ ಪದ್ಮಾವತಿಯವರ ಗಮನಕ್ಕೆ ತಂದಿದ್ದೇವೆ. ಅವರು ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಅಧಿಕಾರಿಗಳ ಧೋರಣೆಯನ್ನು ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳೂ ಒಂದಾಗಿ ಖಂಡಿಸಬೇಕು. ಅವರ ಆಟಾಟೋಪಗಳಿಗೆ ಕಡಿವಾಣ ಹಾಕಬೇಕು ಎಂದು ನೇತ್ರಾ ನಾರಾಯಣ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಎಂ.ಗೌತಮ್‍ಕುಮಾರ್, ಶಾಮಲಾ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin