1993ರ ಮುಂಬೈ ಸರಣಿ ಸ್ಫೋಟ ಪ್ರಕರಣ : ಫಿರೋಜ್-ತಾಹಿರ್‍ಗೆ ಗಲ್ಲು, ಅಬುಸಲೇಂಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Mumbai-Blast--01

ಮುಂಬೈ, ಸೆ.7- ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಆಪಾದಿತರಾಗಿದ್ದ ಕುಖ್ಯಾತ ಭೂಗತ ಪಾತಕಿಗಳಾದ ತಾಹಿರ್‍ಮರ್ಚೆಂಟ್ ಹಾಗೂ ಫಿರೋಜ್ ಅಬ್ದುಲ್ ರಸೀದ್‍ಖಾನ್‍ಗೆ ಇಲ್ಲಿನ ಟಾಡಾ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳಾದ ಅಬುಸಲೇಂ, ಕರೀಂಉಲ್ಲಾಖಾನ್, ರಿಯಾಜ್‍ಸಿದ್ದಿಕಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೋರ್ವ ಆರೋಪಿ ಮುಸ್ತಾಪದೋಸ ಜೈಲಿನಲ್ಲಿದ್ದಾಗಲೇ ಸಾವನ್ನಪ್ಪಿದ್ದ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ತಲಾ 2ಲಕ್ಷ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡದ ಹಣವನ್ನು ಪಾವತಿಸಲು ವಿಫಲವಾದರೆ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವುದಾಗಿ ಮುಂಬೈ ಟಾಡಾ ವಿಶೇಷ ನ್ಯಾಯಾಧೀಶರಾದ ದೀಪಕ್ ಸಾಳ್ವೆ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಯಾಕೂಬ್‍ಮೆನನ್‍ಗೆ ಮರಣದಂಡನೆ ಶಿಕ್ಷೆ ವಿಧಿಸಿ ಆತನನ್ನು ಕಳೆದ 2015ರ ಜುಲೈ ತಿಂಗಳಿನಲ್ಲಿ ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

1993ರಂದು ಮುಂಬೈನಲ್ಲಿ ಸಂಭವಿಸಿದ ಸರಳಿ ಬಾಂಬ್ ಸ್ಪೋಟ ಪ್ರಕರಣದಲ್ಲಿ 257 ಮಂದಿ ಸಾವನ್ನಪ್ಪಿ, 713 ಮಂದಿ ಗಾಯಗೊಂಡಿದ್ದರು. ಈ ಘಟನೆಗೆ ಸುಮಾರು 24 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಈ ಘಟನೆಗೆ ಭೂಗತಪಾತಕಿ ದಾಹುದ್‍ಇಬ್ರಾಹಿಂನ ಬಲಗೈ ಬಂಟರಾದ ದೋಸಾ, ಮರ್ಚೆಂಟ್, ಫಿರೋಜ್ ಅವರುಗಳೇ ಪ್ರಮುಖ ಸೂತ್ರಧಾರಿಗಳು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಇದೊಂದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅಮಾಯಕ ಜನರನ್ನು ಬಲಿ ಪಡೆದ ಆರೋಪಿಗಳಿಗೆ ಗಲ್ಲು ಶಿಕ್ಷೆ ಏಕೆ ವಿಧಿಸಬಾರದು ಎಂದು ಇವರ ಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಸರ್ಕಾರದ ಪರ ವಾದ ಮಂಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಎಲ್ಲ ಆರೋಪಿಗಳಿಗೆ ಮರಣ ದಂಡನೆ ಸರಿಯಾದ ಶಿಕ್ಷೆ ಎಂದು ವಾದ ಮಂಡಿಸಿದ್ದರು.

ತಾವು ಈಗಾಗಲೇ ಸಾಕಷ್ಟು ಶಿಕ್ಷೆ ಅನುಭವಿಸಿರುವುದರಿಂದ ನಮ್ಮ ಕುಟುಂಬ ಮತ್ತು ಮಕ್ಕಳ ಜತೆ ಸಮಯ ಕಳೆಯಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸದಂತೆ ಆರೋಪಿಗಳು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ನ್ಯಾಯಾಲಯ ಫಿರೋಜ್‍ಖಾನ್ ಹಾಗೂ ತಾಹಿರ್‍ಮರ್ಚೆಂಟ್‍ಗೆ ಮರಣದಂಡನೆ ವಿಧಿಸಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಆರೋಪಿಗಳ ವಿರುದ್ಧ ವಿವಿಧ ಕೊಲೆ ಆರೋಪ, ಪಿತೂರಿ, ಅಮಾಯಕರ ಕಗ್ಗೊಲೆ, ಸಾರ್ವಜನಿಕರ ಆಸ್ತಿ ನಷ್ಟ ಸೇರಿದಂತೆ ವಿವಿಧ ರೀತಿಯ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸಿದ ಸಿಬಿಐ ಕೂಡ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರಿದ್ದರು. ಪ್ರಕರಣದಲ್ಲಿ ಈಗಾಗಲೇ ಯಾಕೂಬ್‍ಮೆನನ್ ಗಲ್ಲಿಗೇರಿದ್ದರೆ, ವಿದೇಶಕ್ಕೆ ಪರಾರಿಯಾಗಿದ್ದ ಪಾತಕಿ ಅಬುಸಲೇಂನನ್ನು ಪೋರ್ಚುಗಲ್‍ನಲ್ಲಿ ಬಂಧಿಸಿ ಸ್ವದೇಶಕ್ಕೆ ಕರೆತರಲಾಗಿತ್ತು.

ತೀರ್ಪಿನ ಹಿನ್ನೆಲೆ:

1993ರಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೇ ದಿನ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 257 ಮಂದಿ ಸಾವನ್ನಪ್ಪಿ, 713 ಸಾರ್ವಜನಿಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಭೂಗತ ಪಾತಕಿ ದಾಹುದ್‍ಇಬ್ರಾಹಿಂ, ಆತನ ಬಲಗೈ ಬಂಟ ಟೈಗರ್ ಮೆನನ್ ಸೇರಿದಂತೆ ಅನೇಕರು ಬಾಗಿಯಾಗಿ ಈ ದುಷ್ಕøತ್ಯವನ್ನು ನಡೆಸಿದ್ದರು.

ಅಂದಿನಿಂದ ತಲೆ ಮರೆಸಿಕೊಂಡಿರುವ ದಾಹುದ್ ಇಬ್ರಾಹಿಂ, ಟೈಗರ್ ಮೆನನ್ ಸೇರಿದಂತೆ ಮತ್ತಿತರ ಆರೋಪಿಗಳ ಪತ್ತೆಗಾಗಿ ಭಾರತ ವಿವಿಧ ದೇಶಗಳ ಜತೆ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಮಾಡಿದೆ. ದುಬೈ, ಪಾಕಿಸ್ತಾನ, ಆಪ್ಘಾನಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಲ್ಲಿ ರಕ್ಷಣೆ ಪಡೆಯುತ್ತಿರುವ ದಾಹುದ್ ಬೇಟೆಗಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ರಣತಂತ್ರ ರೂಪಿಸಿದ್ದಾರೆ.

Facebook Comments

Sri Raghav

Admin