ಕೊಡಗಿನಲ್ಲಿ ಎಐಎಡಿಎಂಕೆಯ 16 ಮಂದಿ ಭಿನ್ನಮತೀಯ ಶಾಸಕರ ವಾಸ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

Paniswamy--01

ಚನ್ನೈ, ಸೆ.8- ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಬಂಡೆದ್ದಿರುವ ಆಡಳಿತಾರೂಢ ಎಐಎಡಿಎಂಕೆಯ 16 ಮಂದಿ ಭಿನ್ನಮತೀಯ ಶಾಸಕರು ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಪಡೆದಿರುವ ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪುದುಚೇರಿಯ ರೆಸಾರ್ಟ್‍ನಲ್ಲಿದ್ದ 16 ಮಂದಿ ಶಾಸಕರನ್ನು ಕಳೆದ ಮಧ್ಯರಾತ್ರಿ ಕೊಡಗಿಗೆ ಕರೆತರಲಾಗಿದ್ದು, ಇಲ್ಲಿನ ಐಷಾರಾಮಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಈಗಾಗಲೇ ಎಐಎಡಿಎಂಕೆಯಿಂದ ಅಮಾನತುಗೊಂಡಿರುವ ಟಿ.ಟಿ.ವಿ.ದಿನಕರನ್ ಬೆಂಬಲಿಗರಾದ ಈ 16 ಮಂದಿ ಶಾಸಕರಿಗೆ ಮುಖ್ಯಮಂತ್ರಿ ಪಳನಿಸ್ವಾಮಿ ತಮ್ಮ ಬಣಕ್ಕೆ ಸೆಳೆಯಲು ಕೆಲವು ಆಮಿಷಗಳನ್ನು ಒಡ್ಡಿದ್ದರು.

ಈ ಮೊದಲು ದಿನಕರನ್ ಗುಂಪಿನಲ್ಲಿ 18 ಮಂದಿ ಶಾಸಕರು ಗುರುತಿಸಿಕೊಂಡಿದ್ದರು. ಇದರಲ್ಲಿ ಎಸ್.ಟಿ.ಕೆ.ಜಕ್ಕಯ್ಯನ್ ಹಾಗೂ ಮತ್ತೋರ್ವ ಶಾಸಕ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಕುಂಟು ನೆಪ ಹೇಳಿ ರೆಸಾರ್ಟ್‍ನಿಂದ ಹೊರ ಬಂದು ಸಿಎಂ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ ತಮ್ಮ ಬಣದ ಶಾಸಕರನ್ನು ಪಳನಿಸ್ವಾಮಿ ಸೆಳೆಯಬಹುದೆಂಬ ಭೀತಿ ಹಿನ್ನೆಲೆಯಲ್ಲಿ ದಿನಕರನ್ ತಮ್ಮ ನಂಬಿಕಸ್ಥ ಶಾಸಕ ಪಿ.ವೆಟ್ರಿವೆಲ್ ನೇತೃತ್ವದಲ್ಲಿ ರೆಸಾರ್ಟ್‍ನಲ್ಲಿದ್ದ ಎಲ್ಲಾ ಶಾಸಕರನ್ನು ಕೊಡಗಿಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಪುದುಚೇರಿಯಲ್ಲಿದ್ದ 16 ಶಾಸಕರು ಕೂರ್ಗ್‍ನಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ನಿನ್ನೆಯಷ್ಟೇ ದಿನಕರನ್ ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಪಳನಿಸ್ವಾಮಿ ಬಹುಮತ ಕಳೆದುಕೊಂಡಿರುವುದರಿಂದ ತಕ್ಷಣವೇ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು. ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು. ಇಲ್ಲವೇ ರಾಜ್ಯಪಾಲರು ತಮಗಿರುವ ಪರಮಾಧಿಕಾರವನ್ನು ಮುಖ್ಯಮಂತ್ರಿಯನ್ನು ವಜಾಗೊಳಿಸುವುದು ಸೇರಿದಂತೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಡೆಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

Facebook Comments

Sri Raghav

Admin