ಭೂಕಬಳಿಕೆದಾರರಿಂದ ವಶಪಡಿಸಿಕೊಂಡ ಒತ್ತುವರಿ ಜಮೀನಿನ ಮಾಹಿತಿ ಬಹಿರಂಗಪಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

doreswamy

ಬೆಂಗಳೂರು, ಸೆ.8- ಭೂಕಬಳಿಕೆದಾರರಿಂದ ವಶಪಡಿಸಿಕೊಂಡಿರುವ ಒತ್ತುವರಿ ಆಸ್ತಿ ಮಾಹಿತಿ, ಒತ್ತುವರಿದಾರರು ಯಾರ್ಯಾರು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಟಾನ ಆಗ್ರಹಿಸಿದೆ. ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶಿವರಾಮೇಗೌಡ, ನಮ್ಮ ಬೆಂಗಳೂರು ಪ್ರತಿಷ್ಟಾನದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಒತ್ತಾಯಿಸಿದರು.

ಎ.ಟಿ.ರಾಮಸ್ವಾಮಿ ಅವರು ಮಂಡಿಸಿರುವ ವರದಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಇದರ ಒಟ್ಟು ಮೌಲ್ಯ 2ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 27,336 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ 15,833 ಎಕರೆ ಭೂಮಿ ಒತ್ತುವರಿಯಾಗಿದುದ್ದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಯಾರಿಂದ ವಶಪಡಿಸಿಕೊಂಡಿದೆ, ಅದರ ಒಟ್ಟು ಮೌಲ್ಯ ಎಷ್ಟು? ಮತ್ತೆ ಸಾರ್ವಜನಿಕರಿಗೆ ಈ ಭೂಮಿಯನ್ನು ಯಾವ ರೀತಿ ಹಂಚಲಾಗುತ್ತೆ ಎಂಬುದರ ಬಗ್ಗೆ ಸರ್ಕಾರ ಗುಟ್ಟು ಬಿಟ್ಟಿಲ್ಲ. ಸರ್ಕಾರದ ಈ ಧೋರಣೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ತಿಳಿಸಿದರು.

ವಶಪಡಿಸಿಕೊಂಡಿರುವ ಭೂಮಿಯನ್ನು ಸರ್ಕಾರ ಹರಾಜು ಹಾಕುವುದಾಗಿ ಹೇಳಿತ್ತು. ಹರಾಜು ಪ್ರಕ್ರಿಯೆಯಲೇ ಅಕ್ರಮ ಇದೆ. ಒತ್ತುವರಿದಾರರು ಹಾಗೂ ಬಿಲ್ಡರ್‍ಗಳು ಹರಾಜಿನಲ್ಲಿ ಪಾಲ್ಗೊಂಡು ಮತ್ತೆ ಭೂಮಿ ಪಡೆಯುತ್ತಿದ್ದಾರೆ. ಮೊದಲು ಸರ್ಕಾರ ಈ ಅಕ್ರಮ ತಡೆಯಬೇಕು ಎಂದು ಆಗ್ರಹಿಸಿದರು.
ಇದುವರೆಗೆ ಒಟ್ಟು ಎಷ್ಟು ಭೂಮಿ ವಶಕ್ಕೆ ಪಡೆಯಲಾಗಿದೆ. ಮೌಲ್ಯ ಎಷ್ಟು, ಅದನ್ನು ಯಾವ ರೀತಿ ಜನರಿಗ ಹಂಚುತ್ತೀರ ಎಂಬ ಬಗ್ಗೆ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು. ಹೀಗೆ ಮಾಡದೆ ಹೋದರೆ ಜನರಿಗೆ ಸರ್ಕಾರದಮೇಲೆ ವಿಶ್ವಾಸ ಬರಲ್ಲ ಎಂದ ಅವರು, ಎ.ಟಿ.ರಾಮಸ್ವಾಮಿಯವರು ಎರಡನೇ ವರದಿಯಲ್ಲಿ ನೀಡಿರುವ ಮಾಹಿತಿಯಂತೆ ವಶಪಡಿಸಿಕೊಂಡಿರುವ ಭೂಮಿಯನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

ಅತಿ ಭ್ರಷ್ಟ ಬಿಬಿಎಂಪಿ:

ನಗರದಲ್ಲಿ ಕೆರೆ ಒತ್ತುವರಿ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಬಿಬಿಎಂಪಿ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ದೊರೆಸ್ವಾಮಿ ಅವರು, ಬಿಬಿಎಂಪಿ ಎಂಬುದು ಭ್ರಷ್ಟಾತಿಭ್ರಷ್ಟ ಸಂಸ್ಥೆ. ಅದರಲ್ಲಿರುವ 198 ಸದಸ್ಯರು ಭಷ್ಟರೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆರೆ ಒತ್ತುವರಿ ಆದರೂ ಕಣ್ಮುಚ್ಚಿ ಕುಳಿತಿದ್ದಾರೆ. ಒತ್ತುವರಿ ಮಾಡಿ ಕಟ್ಟಡ ಕಟ್ಟಿ ಬಾಡಿಗೆಗೆಕೊಡುತ್ತಾರೆ. ಕೆರೆ ಉಳಿಸೋ ಇಚ್ಛೆ ಇಲ್ಲದೆ ಇದ್ದರೆ ನಮಗೆ ಇದೆಲ್ಲ ಆಗಲ್ಲ ಎಂದು ಹೊರಗೆ ಬನ್ನಿ. ಕೆರೆ ಸಂರಕ್ಷಣೆಗಾಗಿಯೇ ಪ್ರತ್ಯೇಕ ಸಮಿತಿ ರಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಬಿಡಿಎ ಕೂಡಾ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಇಂತಹ ಸಂಸ್ಥೆಗಳಿಂದಲೇ ಇಂದು ಕೋಟ್ಯಂತರ ಮೌಲ್ಯದ ಭೂಮಿ ಭೂಗಳ್ಳರ ಪಾಲಾಗುತ್ತಿದೆ ಎಂದು ಹೇಳಿದ ಅವರು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ತೆರವು ಮಾಡಿದ ಭೂಮಿಯನ್ನು ಸಾರ್ವಜನಿಕ ಬಳಕೆಗೆ ಬಳಸಬೇಕು. ಇಲ್ಲದೇ ಹೋದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್.ಎಸ್.ದೊರೆಸ್ವಾಮಿ ಎಚ್ಚರಿಸಿದರು.

Facebook Comments

Sri Raghav

Admin