ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವು : ಸಚಿವ ಕೆ.ಜೆ.ಜಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

KJ-George

ಬೆಂಗಳೂರು, ಸೆ.8- ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಮೂಲಕ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 1700 ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಲಾಗಿದೆ. 700 ಒತ್ತುವರಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ತೆರವು ಮಾಡಲಾಗುವುದು ಎಂದು ಹೇಳಿದರು.

ರಾಜಕಾಲುವೆ ಒತ್ತುವರಿ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳಿದ್ದು, ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಒತ್ತುವರಿ ಮಾಡಿರುವ ಹಲವು ಪ್ರಭಾವಿಗಳೇ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಒತ್ತುವರಿಯಾಗಿರುವುದನ್ನು ಸರ್ಕಾರ ಒಡೆಯುವುದಿಲ್ಲ. ಎಂಜಿನಿಯರ್‍ಗಳಿಗೆ ಆದೇಶ ನೀಡುತ್ತದೆ. ನಾವು ಯಾವುದೇ ಪ್ರಭಾವಕ್ಕೆ ಮಣಿಯದೆ ಒತ್ತುವರಿ ತೆರವು ಮಾಡುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದ್ದಕ್ಕೆ ಅನಾಹುತಗಳು ಸಂಭವಿಸಿವೆ. ರಾಜಕಾಲುವೆಯ ಹೂಳು ತೆಗೆಯಲು ತಡೆಗೋಡೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ 800 ಕೋಟಿ ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 300 ಕೋಟಿ ಬಿಡುಗಡೆಗೆ ಅನುಮತಿ ಪಡೆಯಲಾಗಿದೆ. ನೀರು ಸರಾಗವಾಗಿ ಹರಿದು ಹೋಗದೆ ಇರುವ ಕಡೆ ಗುರುತ್ವಾಕರ್ಷಣೆಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದ ವಿವಿಧೆಡೆ 7500 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, 2500 ಕೋಟಿ ಕಾಮಗಾರಿಗಳು ಮುಗಿದಿವೆ. 5000 ಕೋಟಿ ಕಾಮಗಾರಿಗಳು ನಡೆಯಬೇಕಾಗಿದೆ ಎಂದು ಹೇಳಿದ ಅವರು, ಮಳೆ ನಿಂತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಗುಂಡಿ ಮುಚ್ಚುವುದು, ರಸ್ತೆ ಡಾಂಬರೀಕರಣ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ನಗರಕ್ಕೆ 1400 ಎಂಎಲ್‍ಡಿ ನೀರು ಬಳಕೆಗೆ ಬೇಕಾಗುತ್ತದೆ. 1 ಸಾವಿರ ಲೀಟರ್ ನೀರು ಹೊರಗೆ ಬರುತ್ತದೆ. ಈ ನೀರನ್ನು ಸಂಪೂರ್ಣವಾಗಿ ಸಂಸ್ಕರಿಸಿ ಕ್ರಮ ಕೈಗೊಂಡರೆ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕಾಗಿ 12 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin