ರೇಪಿಸ್ಟ್ ಬಾಬಾನ ಡೇರಾಸೌಧದ ಸರ್ಚ್ ಆಪರೇಷನ್ ಶುರು, ರಹಸ್ಯ ಗುಹೆಯತ್ತ ಎಲ್ಲರ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

Dera-Saccha-Soudha

ಸಿರ್ಸಾ(ಹರಿಯಾಣ), ಸೆ.8- ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ಗುರ್ಮಿತ್ ರಾಮ್‍ರಹೀಂ ಸಿಂಗ್ ನೇತೃತ್ವದ ಡೇರಾಸಚ್ಚಾಸೌಧ(ಡಿಎಸ್‍ಎಸ್) ಕೇಂದ್ರ ಕಚೇರಿಯಲ್ಲಿ ಭಾರೀ ಭದ್ರತೆಯೊಂದಿಗೆ ಪೊಲೀಸರು ತೀವ್ರ ಶೋಧ ಮತ್ತು ತೆರವು ಕಾರ್ಯಾಚರಣೆಯನ್ನು ಇಂದಿನಿಂದ ತೀವ್ರಗೊಳಿಸಿದ್ದಾರೆ. ಇಲ್ಲಿರುವ ರಹಸ್ಯ ಗುಹೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಆಶ್ರಮದಲ್ಲಿ ಭಾರೀ ಅಕ್ರಮ ಅವ್ಯವಹಾರಗಳು ನಡೆದಿರುವ ದೂರುಗಳ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಪೊಲೀಸರು ಇಂದು ಬೆಳಗ್ಗೆಯಿಂದ ಶೋಧ ಆರಂಭಿಸಿದ್ದಾರೆ.
ಡೇರಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಈ ಶೋಧ ಕಾರ್ಯಾಚರಣೆ ಮತ್ತು ಆಶ್ರಮ ತೆರವು ಪ್ರಕ್ರಿಯೆ ಬಿರುಸುಗೊಂಡಿದೆ.

ಬಾಬಾ ಬಂಧನದ ನಂತರ ತೀವ್ರ ವಿವಾದಕ್ಕೆ ಗುರಿಯಾಗಿರುವ ಡಿಎಸ್‍ಎಸ್ ಆಶ್ರಮದಲ್ಲಿ ಎರಡು ದಿನಗಳ ಹಿಂದಷ್ಟೇ ಭಾರೀ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಭದ್ರತಾ ಪಡೆಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಭಾರೀ ಬಿಗಿ ಬಂದೋಬಸ್ತ್‍ನಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಶೋಧ ಮತ್ತು ತೆರವು ಕಾರ್ಯಾಚರಣೆ ಇಡೀ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ನಡೆಸಲಾಗುವುದು. ನಿವೃತ್ತ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎ.ಕೆ.ಎಸ್.ಪವಾರ್ ನೇತೃತ್ವದ ಈ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ.

ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳ ನೆರವು ಪಡೆಯಲಾಗಿದ್ದು, ಶೋಧ ಕಾರ್ಯಾಚರಣೆಯಲ್ಲಿ ಅಡ್ಡಿಯಾಗುವ ಅಡೆ-ತಡೆಗಳನ್ನು ಭೇದಿಸಲು ಕಮ್ಮಾರರು(ಕೀ ತಯಾರಾಕರು) ಮತ್ತು ತಂತ್ರಜ್ಞರ ತಂಡವನ್ನು ನಿಯೋಜಿಸಲಾಗಿದೆ. ಆಶ್ರಮದೊಳಗೆ ಇರುವ ಗುಪ್ತ ಕೋಣೆಗಳು ಮತ್ತು ರಹಸ್ಯ ಗುಹೆಗಳನ್ನು ತೀವ್ರ ಶೋಧ ನಡೆಸಲಿದ್ದು, ಎಲ್ಲರ ಕುತೂಹಲ ಕೆರಳಿಸಿದೆ. ಪೊಲೀಸ್ ಬಸ್‍ಗಳು, ಅರೆ ಸೇನಾಪಡೆ ವಾಹನಗಳು, ಕ್ಷಿಪ್ರ ಪ್ರಕ್ರಿಯೆ ತಂಡದ ವಾಹನಗಳು, ಜೆಸಿಬಿ ವಾಹನಗಳು ಭಾರೀ ಸಂಖ್ಯೆಯಲ್ಲಿ ಆಶ್ರಮದ ಹೊರಗೆ ಜಮಾಯಿಸಿವೆ.

Facebook Comments

Sri Raghav

Admin