ಹಿರಿಯ ನಟ ಆರ್. ಎನ್. ಸುದರ್ಶನ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Sudarshan--00014

ಬೆಂಗಳೂರು, ಸೆ. 8- ಹಿರಿಯ ನಟ, ಕಂಠದಾನ ಕಲಾವಿದ , ನಿರ್ಮಾಪಕರಾಗಿದ್ದ ಬಹುಭಾಷಾ ನಟ ಆರ್.ಎನ್.ಸುದರ್ಶನ್ (78) ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದ್ದು ಮೂಳೆ ಮುರಿತಕ್ಕೊಳಗಾಗಿದ್ದ ಸುದರ್ಶನ್ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು.ತೀವ್ರ ಅನಾರೋಗ್ಯದಿಂದಲೂ ಬಳಲುತ್ತಿದ್ದು , ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಲಾಗಿತ್ತು.
ಮೇ 2, 1939ರಲ್ಲಿ ಜನಿಸಿದ ರಟ್ಟಿಹಳ್ಳಿ ನಾಗೇಂದ್ರ ಸುದರ್ಶನ್ ಬಾಲ್ಯದಿಂದಲೂ ತಮ್ಮ ತಂದೆ ದಿವಂಗತ ಆರ್.ಎನ್.ನಾಗೇಂದ್ರರಾವ್ ಅವರಿಂದ ಪ್ರಭಾವಿತರಾಗಿ ಸಿನಿಮಾ ಮತ್ತು ನಾಟಕದ ಬಗ್ಗೆ ಅಪಾರ ಒಲವು ಹೊಂದಿದ್ದರು. ಇವರ ಇಬ್ಬರು ಸೋದರರಾದ ಆರ್.ಎನ್.ಜಯಗೋಪಾಲ್ ಹಾಗೂ ಆರ್.ಎನ್.ಪ್ರಸಾದ್ ಅವರು ಚಿತ್ರರಂಗಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ.

ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಆರ್.ಎನ್.ಸುದರ್ಶನ್ ವಿಜಯನಗರದ ವೀರಪುತ್ರ , ನಗುವ ಹೂವು, ಮರೆಯದ ದೀಪಾವಳಿ ಮುಂತಾದ 60 ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಲ್ಲದೆ ಚಾಣಕ್ಯ, ಕರ್ತವ್ಯ, ಬ್ರಹ್ಮ ವಿಷ್ಣು ಮಹೇಶ್ವರ ಮುಂತಾದ ಚಿತ್ರಗಳಲ್ಲಿ ಖಳನಟನಾಗಿಯೂ ಗಮನ ಸೆಳೆದಿದ್ದ ಸುದರ್ಶನ್ ಅವರು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಮಿಂಚಿದ್ದರು. ಸುದರ್ಶನ್ ಅವರ ಪತ್ನಿ ಶೈಲಜಾ ಅವರು ಕೂಡ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿ ಗಮನ ಸೆಳೆದಿದ್ದರು.

ಈಗ ಪ್ರಸ್ತುತ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸ್ವಾಮೀಜಿಯ ಪಾತ್ರದಲ್ಲಿ ನಟಿಸುತ್ತಿದ್ದ ಸುದರ್ಶನ್‍ರ ನಿಧನಕ್ಕೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಂದನವನದ ಖ್ಯಾತ ನಟ, ನಟಿಯರು, ತಂತ್ರಜ್ಞರು ಅವರ ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin