ಗೌರಿಲಂಕೇಶ್ ಹತ್ಯೆ ಪ್ರಕರಣ : ಹೊರರಾಜ್ಯಗಳಲ್ಲೂ ಎಸ್‍ಐಟಿ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಸೆ.9- ಕರ್ನಾಟಕವನ್ನೇ ತಲ್ಲಣಗೊಳಿಸಿದ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಎಸ್‍ಐಟಿಯ ತಂಡಗಳು ಹೊರ ರಾಜ್ಯಗಳಿಗೆ ತೆರಳಿವೆ. ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಮಹಾರಾಷ್ಟ್ರಕ್ಕೆ ತೆರಳಿರುವ ತನಿಖಾ ತಂಡಗಳು ಕೆಲವು ಬಲಪಂಥೀಯ ಹಾಗೂ ಎಡ ಪಂಥೀಯ ಸಂಘಟನೆಗಳ ಪ್ರಮುಖ ನಾಯಕರ ಬಗ್ಗೆ ಮಾಹಿತಿ ಕಲೆಹಾಕುತ್ತಿವೆ.ನಿನ್ನೆ ಮಧ್ಯಾಹ್ನವೇ ತನಿಖಾ ತಂಡಗಳು ಹೊರ ರಾಜ್ಯಗಳಿಗೆ ತೆರಳಿದ್ದು, ಎಡ ಹಾಗೂ ಬಲ ಪಂಥೀಯರಿಂದಲೂ ಗೌರಿಲಂಕೇಶ್‍ಗೆ ಪ್ರಾಣ ಬೆದರಿಕೆ ಇತ್ತೇ ಎಂಬುದನ್ನು ಪರಿಶೀಲಿಸುತ್ತಿವೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ವಿಚಾರವಾದಿಗಳಾದ ದಾಭೋಲ್ಕರ್, ಗೋವಿಂದ್ ಪಾನ್ಸರೆ, ಧಾರವಾಡದಲ್ಲಿ ಎಂ.ಎಂ.ಕಲಬುರ್ಗಿ ಅವರುಗಳನ್ನು ಹತ್ಯೆ ಮಾಡಿದವರೇ ಗೌರಿಯನ್ನು ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದಲೂ ಮಾಹಿತಿ ಕಲೆ ಹಾಕುತ್ತಿವೆ.
ಮೇಲ್ನೋಟಕ್ಕೆ ಒಂದಕ್ಕೊಂದು ಪ್ರಕರಣಗಳಲ್ಲಿ ಸಾಮ್ಯತೆ ಕಂಡು ಬರುತ್ತಿರುವುದರಿಂದ ಮತ್ತು ಗೌರಿಯನ್ನು ನಿರ್ದಿಷ್ಟ ಗುಂಪು ಕೊಲೆ ಮಾಡಿರುವ ಸಾಧ್ಯತೆಗಳಿರುವುದರಿಂದ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಪ್ರಾರಂಭವಾಗಿದೆ.

ಎಂ.ಎಂ.ಕಲಬುರ್ಗಿಗೆ ಹಂತಕರು ಹಣೆ ಮತ್ತು ಎದೆ ಭಾಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕಳೆದ ಬುಧವಾರ ರಾತ್ರಿ ಗೌರಿಯನ್ನು ಕೂಡ ದುಷ್ಕರ್ಮಿಗಳು ಹಣೆ ಹಾಗೂ ಎದೆಯ ಮಧ್ಯ ಭಾಗಕ್ಕೆ ಗುಂಡು ಹಾರಿಸಿ ಕಗ್ಗೊಲೆ ಮಾಡಿದ್ದರು. ಎಡಪಂಥೀಯ ವಿಚಾರಧಾರೆಗಳನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಬಲಪಂಥೀಯ ಗುಂಪಿನ ಸಂಘಟನೆಯ ಕೈವಾಡ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಕೆಲವು ಅನಾಮಧೇಯ ವ್ಯಕ್ತಿಗಳ ಚಲನ-ವಲನಗಳ ಬಗ್ಗೆ ತನಿಖಾ ತಂಡಗಳು ಹದ್ದಿನ ಕಣ್ಣಿಟ್ಟಿವೆ.

ಇನ್ನು ಗೌರಿಯನ್ನು ವಿರೋಧಿಸುತ್ತಿದ್ದ ಕಟ್ಟಾ ನಕ್ಸಲೀಯರ ಒಂದು ಬಣದ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಕ್ರಿಯವಾಗಿರುವ ಕೆಲವು ಕೆಂಪು ಮಾವೋವಾದಿಗಳನ್ನು ವಶಕ್ಕೆ ಪಡೆದು ಮಾಹಿತಿಯನ್ನು ಸಂಗ್ರಹಿಸಲು ತಂಡಗಳು ಪ್ರಯತ್ನಿಸುತ್ತಿವೆ. ಮೂಲಗಳ ಪ್ರಕಾರ ಗೌರಿಲಂಕೇಶ್ ಹತ್ಯೆಗೆ ದೇಶಿ ನಿರ್ಮಿತ 7.65ಎಂಎಂ ಪಿಸ್ತೂಲ್ ಬಳಸಲಾಗಿದೆ. ಸ್ಥಳದಲ್ಲಿ ದೊರೆತ ಖಾಲಿ ಕಾಟ್ರಿಜ್‍ಗಳನ್ನು ಪರಿಶೀಲಿಸಿದಾಗ ಇದು ಬಹಿರಂಗಗೊಂಡಿದೆ.

ಈಗಾಗಲೇ ವಿಧವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಾಕ್ಷಾಧಾರಗಳನ್ನು ಕಲೆ ಹಾಕುತ್ತಿದ್ದು, ಗೌರಿ ಹತ್ಯೆ ಮಾಡಲು 7 ಗುಂಡುಗಳನ್ನು ಹಾರಿಸಲಾಗಿತ್ತಾದರೂ ದೇಹದೊಳಗೆ ಮೂರು ಗುಂಡುಗಳು ಹೊಕ್ಕಿವೆ ಎಂದು ತಿಳಿದು ಬಂದಿದೆ. ಇನ್ನು ತನಿಖಾ ತಂಡಗಳು ಏಳು ಆಯಾಮಗಳಲ್ಲಿ ತನಿಖೆಯನ್ನು ಪ್ರಾರಂಭಿಸಿವೆ.

Facebook Comments

Sri Raghav

Admin