ಬೆಂಗಳೂರಲ್ಲಿ ಸುರಿದ ಮಾರಿ ಮಳೆಗೆ ನಾಲ್ಕು ಬಲಿ, ಇಂದೂ ಕಾದಿದೆ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

Bengaluru-xxxx-Rain

ಬೆಂಗಳೂರು, ಸೆ.9-ನಿನ್ನೆ ಒಂದೇ ದಿನಕ್ಕೆ ನಾಲ್ವರನ್ನು ಬಲಿ ಪಡೆದ ಮಾರಿ ಮಳೆ ಮತ್ತೆರಡು ದಿನಗಳ ಕಾಲ ಮುಂದುವರೆಯುವ ಸಂಭವವಿರುವುದರಿಂದ ಮತ್ತೇನು ಕಾದಿದೆಯೋ ಎಂಬ ಆತಂಕ ಬೆಂಗಳೂರು ನಗರದ ಜನರಲ್ಲಿ ಮನೆ ಮಾಡಿದೆ.500ಕ್ಕೂ ಹೆಚ್ಚು ಮರಗಳು ಧರೆಗುರುಳಿ, ನೂರಾರು ವಿದ್ಯುತ್ ಕಂಬಗಳು ನೆಲಕ್ಕೊರಗಿ, 20ಕ್ಕೂ ಹೆಚ್ಚು ವಾಹನಗಳು ಜಖಂಗೊಂಡು ನಗರದ ಜನಜೀವನ ಅಸ್ತವ್ಯಸ್ತಗೊಳಿಸಿರುವ ಮಹಾಮಳೆ ಮತ್ತೆರಡು ದಿನ ಸುರಿದರೆ ಇನ್ನೇನು ಗತಿ.. ಎಂಬ ಭೀತಿ ಎದುರಾಗಿದೆ.

ಬೆಂಗಳೂರಿಗರೇ… ಎಚ್ಚರ..! ಉತ್ತರ ಒಳನಾಡಿನ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಮತ್ತೆರಡು ದಿನಗಳ ಕಾಲ ಬೆಂಗಳೂರು ನಗರ, ಸುತ್ತಮುತ್ತ ಭಾರೀ ಮಳೆಯಾಗುವ ಸಂಭವವಿರುವುದರಿಂದ ಮನೆಯಿಂದ ಹೊರ ಹೋಗದಿರುವುದು, ತಮ್ಮ ವಾಹನಗಳನ್ನು ತೆಗೆಯದಿರುವುದೇ ಸೂಕ್ತ. ನಿನ್ನೆ ರಾತ್ರಿ ಬೆಂಗಳೂರು ಸೇರಿದಂತೆ ಹಲವೆಡೆ ಸುರಿದ ಮಾರಿ ಮಳೆ ಹತ್ತು ಜನರನ್ನು ಬಲಿ ತೆಗೆದುಕೊಂಡಿದೆ. ಮಧ್ಯಮಹಾರಾಷ್ಟ್ರದಿಂದ ದಕ್ಷಿಣ ಭಾಗದಲ್ಲಿ ಆಗಿರುವ ವಾಯುಭಾರ ಕುಸಿತದಿಂದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.

 

ಹವಾಮಾನ ಇಲಾಖೆ ಕೂಡ ಈ ಬಗ್ಗೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಎಚ್ಚರದಿಂದಿರುವಂತೆ ಸೂಚಿಸಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ ನಿನ್ನೆ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ನೂರಾರು ಮನೆಗಳು ಧರೆಗುರುಳಿವೆ. ಬೆಂಗಳೂರು ಒಂದರಲ್ಲೇ ಬಸವನಗುಡಿ, ಸಜ್ಜನ್‍ರಾವ್‍ಸರ್ಕಲ್, ಬನಶಂಕರಿ, ರಾಜರಾಜೇಶ್ವರಿನಗರ, ರಾಜಾಜಿನಗರ ಸೇರಿದಂತೆ ವಿವಿಧೆಡೆ 150 ಭಾರೀ ಗಾತ್ರದ ಮರಗಳು ಧರೆಗುರುಳಿದ್ದು, 20ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.
ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ನೀಲಗಿರಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿವಾನಂದ ಸರ್ಕಲ್ ಹಿಂಭಾಗದ ಮಾರಿಯಮ್ಮ ದೇವಾಲಯದ ಬಳಿ ಅರುಣ್ ಎಂಬಾತ ನಡೆದು ಹೋಗುತ್ತಿದ್ದಾಗ ಚರಂಡಿಯಲ್ಲಿ ಕೊಚ್ಚಿಹೋಗಿದ್ದು ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಸಿಬ್ಬಂದಿಗೆ ಕಿನೋ ಥಿಯೇಟರ್ ಚಿತ್ರಮಂದಿರದ ಸಮೀಪದ ರಾಜಕಾಲುವೆಯಲ್ಲಿ ಈತನ ಮೃತ ದೇಹ ಪತ್ತೆಯಾಗಿದೆ.  ಅರುಣ್ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದು, ಪ್ಯಾಲೇಸ್ ಗುಟ್ಟಹಳ್ಳಿ ವಾಸಿಯಾಗಿದ್ದ ಈತ ನೆಹರೂ ಸರ್ಕಲ್ ಬಳಿ ನಡೆದು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ನಡುವೆ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಬಳಿಯೂ ಬೃಹತ್ ಗಾತ್ರದ ಮರವೊಂದು ಬಿದ್ದಿದೆ.  ಇದುವರೆಗೂ ನಿಧಾನವಾಗಿ ಸುರಿಯುತ್ತಿದ್ದ ಮಳೆ ನಿನ್ನೆ ಭಾರೀ ಜೋರಾಗಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳೆಲ್ಲಾ ಆತಂಕದಲ್ಲಿ ಕಾಲ ನೂಕುವ ಪರಿಸ್ಥಿತಿ ಎದುರಾಗಿದೆ.

21 ತಂಡ ರಚನೆ:

ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು, ತುರ್ತು ಸೇವೆ ಒದಗಿಸಲು ಮೇಯರ್ ಜಿ.ಪದ್ಮಾವತಿ ಅವರು 21 ತಂಡಗಳನ್ನು ರಚಿಸಿದ್ದಾರೆ. ನಿನ್ನೆ ರಾತ್ರಿಯಿಡೀ ಕೇಂದ್ರಸ್ಥಾನದಲ್ಲಿದ್ದು, ಮಳೆ ಸೃಷ್ಟಿಸಿದ ಅನಾಹುತಗಳ ಬಗ್ಗೆ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಆದಷ್ಟು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಬಸವನಗುಡಿ, ಸಜ್ಜನ್‍ರಾವ್‍ವೃತ್ತದಲ್ಲಿ ಮರ ಬಿದ್ದು, ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಈ ಭಾಗದಲ್ಲಿ ಇಡೀ ರಾತ್ರಿ ವಿದ್ಯುತ್ ವ್ಯತ್ಯಯವಾಗಿ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಜಲಮಂಡಳಿ, ಬಿಬಿಎಂಪಿ ಸೇರಿದಂತೆ ಎಲ್ಲಾ ಇಲಾಖೆಯ ಸಿಬ್ಬಂದಿ ಮಳೆ ಅನಾಹುತ ಪ್ರದೇಶಗಳಿಗೆ ದೌಡಾಯಿಸಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ.

ನೆಲಕ್ಕುರುಳಿರುವ ಭಾರೀ ಗಾತ್ರದ ಮರಗಳನ್ನು ತೆರವುಗೊಳಿಸುವುದು ತಲೆ ನೋವಾಗಿ ಪರಿಣಮಿಸಿದೆ. ತುಂಬಾ ಹಳೆಯದಾದ ಮರಗಳು ಬೀಳುವ ಸಂಭವವೂ ಕೂಡ ಇರುವುದರಿಂದ ಬಿಬಿಎಂಪಿ ಸಾರ್ವಜನಿಕರಿಗೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ.  ಬೆಂಗಳೂರು ನಗರದಾದ್ಯಂತ ಒಳಚರಂಡಿ ಕಾಮಗಾರಿ, ರಸ್ತೆ ಅಭಿವೃದ್ಧಿ, ಟೆಂಡರ್ ಶ್ಯೂರ್ ಕಾಮಗಾರಿ, ಕೇಬಲ್ ಅಳವಡಿಕೆ, ಮೇಲ್ಸೇತುವೆ, ಅಂಡರ್‍ಪಾಸ್ ಸೇರಿದಂತೆ ಹತ್ತು, ಹಲವುಕಾಮಗಾರಿಗಳು ನಡೆಯುತ್ತಿದ್ದು, ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಜಲಮಂಡಳಿಯವರು ಪೈಪ್ ಅಳವಡಿಸಲು ತೆರೆದಿರುವ ಗುಂಡಿಗಳು ಭಾರೀ ಮಳೆ ಬಿದ್ದ ಪರಿಣಾಮ ಹಲವೆಡೆ ಕುಸಿತ ಉಂಟಾಗಿದೆ. ಕೂಡಲೇ ಜಲಮಂಡಳಿಯವರು ಈ ಗುಂಡಿಗಳನ್ನು ಮುಚ್ಚಬೇಕೆಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದ್ದಾರೆ. ನಗರದಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಕೆಲವೆಡೆ ಮನೆಗಳಿಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಥಣಿಸಂದ್ರ ಬಳಿಯ ನಂದಗೋಕುಲ ಬಡಾವಣೆ, ಹೆಣ್ಣೂರು ಬಂಡೆ ಸಮೀಪದ ಭೈರವೇಶ್ವರ ನಗರ ಬಡಾವಣೆ, ಕೇಂಬ್ರಿಡ್ಜ್ ಲೇಔಟ್ ಸಂಪೂರ್ಣ ಜಲಾವೃತವಾಗಿವೆ. ಮನೆಗಳಿಗೆ ಕೊಳಚೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು.

ರಾತ್ರಿಯಿಡೀ ಅಬ್ಬರಿಸಿದ ಮಳೆ ಬೆಳಗ್ಗೆ ಕೊಂಚ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ, ಜಲಮಂಡಳಿ, ಸಂಚಾರಿ ಪೊಲೀಸರು ಬಿದ್ದ ಮರಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದು, ಕಂಡುಬಂತು. ಇದಲ್ಲದೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಸರಿಪಡಿಸುತ್ತಿದ್ದಾರೆ.  ರಾತ್ರಿ ಸುರಿದ ಮಳೆಗೆ ಬೆಳ್ಳಂದೂರಿನ ಯಮಲೂರು, ಕರಿಯಮ್ಮನ ಅಗ್ರಹಾರ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಳ್ಳಂದೂರು, ಯಮಲೂರು ಕೋಡಿಯಲ್ಲಿ ನೊರೆ ಹೆಚ್ಚಾಗುತ್ತಿದೆ.
ವಾರ್ಡ್ ನಂ.60 ಸಗಾಯಿಪುರದಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಕ.ಆರ್.ಪುರದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ವೈಟ್‍ಫೀಲ್ಡ್, ಕಾಡುಗೋಡಿ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದರೆ, ತಗ್ಗುಪ್ರದೇಶದ ನಿವಾಸಿಗಳು ನಿದ್ದೆಯಿಲ್ಲದೆ ಕಾಲ ಕಳೆದರು.

ಸಿಬ್ಬಂದಿ ಇಲ್ಲ:

ಬಿಬಿಎಂಪಿ ಕಂಟ್ರೋಲ್‍ರೂಂನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳೇ ಇಲ್ಲ. ಮಳೆ ಮತ್ತು ಗಾಳಿಗೆ ಮರ ಬಿದ್ದ ಹಿನ್ನೆಲೆಯಲ್ಲಿ ದೂರು ನೀಡಲು ಕಂಟ್ರೋಲ್ ರೂಂಗೆ ಫೋನ್ ಮಾಡಿದರೆ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಎರಡು ತಂಡ ಇಟ್ಟುಕೊಂಡು ಬೆಂಗಳೂರಿನ ಎಲ್ಲಾ ಕಡೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಂಟ್ರೋಲ್ ರೂಂನಲ್ಲಿ ಸಚಿವರು:

ಭಾರೀ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಬಿಎಂಪಿ ಕಂಟ್ರೋಲ್ ರೂಂಗೆ ಭೇಟಿ ನೀಡಿ ಸಾರ್ವಜನಿಕ ಕರೆಗಳನ್ನು ಸ್ವೀಕರಿಸಿದರು. ಶಿವಾನಂದ ಸರ್ಕಲ್ ಬಳಿ ಮ್ಯಾನ್‍ಹೋಲ್‍ಗೆ ಕಾರು ಇಳಿದ ಪರಿಣಾಮ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರದಾಟ ಹೇಳತೀರದಾಗಿತ್ತು.

Bengaluru Rain .22 AM

Bengaluru Rain .43 AM

Bengaluru Rain .45 AM

Bengaluru Rain .48 AM

Bengaluru Rain .53 AM(1)

Bengaluru Rain .53 AM

Bengaluru Rain .54 AM

Bengaluru Rain .55 AM

Bengaluru Rain

 

Facebook Comments

Sri Raghav

Admin