ಎನ್‍ಕೌಂಟರ್‍ನಲ್ಲಿ ಉಗ್ರ ಬಲಿ, ಮತ್ತೊಬ್ಬ ಶರಣಾಗತಿ

ಈ ಸುದ್ದಿಯನ್ನು ಶೇರ್ ಮಾಡಿ

Encouter--01

ಶೋಪಿಯಾನ್, ಸೆ.10-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ವಿಧ್ವಂಸಕ ಕೃತ್ಯ ಯತ್ನಗಳನ್ನು ವಿಫಲಗೊಳಿಸುತ್ತಿರುವ ಯೋಧರು ಶೋಪಿಯಾನ್‍ನಲ್ಲಿ ಇಡೀ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಭಯೋತ್ಪಾದಕನೊಬ್ಬನನ್ನು ಸೆರೆ ಹಿಡಿದಿದ್ದಾರೆ. ಗುಂಡಿನ ಚಕಮಕಿ ವೇಳೆ ಇತ್ತೀಚಿನ ವರ್ಷಗಳಲ್ಲಿ ಉಗ್ರನೊಬ್ಬನನ್ನು ಬಂಧಿಸಿರುವುದು ಇದೇ ಮೊದಲು. ಇದೇ ವೇಳೆ ಎನ್‍ಕೌಂಟರ್‍ನಲ್ಲಿ ಮತ್ತೊಬ್ಬ ಆತಂಕವಾದಿ ಹತನಾಗಿದ್ದಾನೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‍ನಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ನಿನ್ನೆ ರಾತ್ರಿಯಿಂದ ನಿರಂತರ ಗುಂಡಿನ ಕಾಳಗ ನಡೆದಿದ್ದು, ಆದಿಲ್ ಎಂಬ ಉಗ್ರಗಾಮಿಯನ್ನು ಬಂಧಿಸಿ ಎ.ಕೆ.-47 ರೈಫಲ್ ವಶಪಡಿಸಿಕೊಳ್ಳಲಾಗಿದೆ. ಈತ ಇತ್ತೀಚೆಗಷ್ಟೇ ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಹಿಜ್‍ಬುಲ್ ಮುಜಾಹಿದ್ದೀನ್‍ಗೆ(ಎಚ್‍ಎಂ) ಸೇರ್ಪಡೆಯಾಗಿದ್ದ. ಎನ್‍ಕೌಂಟರ್‍ನಲ್ಲಿ ತಾರೀಖ್ ಅಹಮದ್ ಎಂಬ ಮತ್ತೊಬ್ಬ ಭಯೋತ್ಪಾದಕ ಹತನಾಗಿದ್ದು, ರೈಫಲ್, ಪಿಸ್ತೂಲ್, ಮತ್ತು ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಪಿಯಾನ್ ಜಿಲ್ಲೆಯ ಬಾರ್‍ಬಾಘ್ ಗ್ರಾಮದ ಅರಣ್ಯದ ಬಳಿ ಮೂವರು ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಆ ಪ್ರದೇಶವನ್ನು ಸುತ್ತುವರಿದಿತ್ತು. ಈ ಸಂದರ್ಭದಲ್ಲಿ ಉಗ್ರರು ನಡೆಸಿದ ದಾಳಿಗೆ ಯೋಧರು ದಿಟ್ಟ ಉತ್ತರ ನೀಡಿದಾಗ ದೀರ್ಘ ಕಾಲ ಗುಂಡಿನ ಚಕಮಕಿ ನಡೆಯಿತು.  ಎನ್‍ಕೌಂಟರ್ ನಂತರ ಮತ್ತೊಬ್ಬ ಉಗ್ರರ ಪರಾರಿಯಾಗಿದ್ದು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಪೇದೆ ಹುತಾತ್ಮ :

ಇನ್ನೊಂದೆಡೆ ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ಸಂಜೆ ಪೊಲೀಸರ ಮೇಲೆ ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ. ಈ ಕೃತ್ಯದಲ್ಲಿ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಶ್ರೀನಗರದ ಬಸ್ ನಿಲ್ದಾಣದ ಸಮೀಪ ಈ ದಾಳಿ ನಡೆದಿದ್ದು, ಇಮ್ತಿಯಾಜ್ ಅಹಮದ್ ಮೃತಪಟ್ಟಿದ್ದಾರೆ.

Facebook Comments

Sri Raghav

Admin