ಫೇಸ್‍ಬುಕ್‍ನಲ್ಲಿ ನಿಮ್ಮ ಲಕ್ಸುರಿ ಫೋಟೋ ಅಪ್ಲೋಡ್ ಮಾಡೋ ಮೊದಲು ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Facebook--01

ನವದೆಹಲಿ, ಸೆ.10-ಇನ್‍ಸ್ಟಾಗ್ರಾಂನಲ್ಲಿ ಮಿಂಚುವ ನಿಮ್ಮ ಫಳಫಳ ಹೊಳೆಯುವ ಹೊಸ ಲಕ್ಸುರಿ ಕಾರ್ ಫೋಟೋ ಅಥವಾ ಫೇಸ್‍ಬುಕ್‍ನಲ್ಲಿ ಇರುವ ನಿಮ್ಮ ದುಬಾರಿ ಕೈಗಡಿಯಾರದ ಚಿತ್ರವು ನಿಮ್ಮ ಮನೆ ಬಾಗಿಲಿಗೆ ಆದಾಯ ತೆರಿಗೆ ಅಧಿಕಾರಿಗಳು ಬರುವಂತೆ ಮಾಡಬಲ್ಲದು..! ಅಚ್ಚರಿಯೇ..?
ಕಪ್ಪು ಹಣವನ್ನು ಪತ್ತೆ ಮಾಡಲು ನಿಖರ ಮಾಹಿತಿಗಾಗಿ ಮುಂದಿನ ತಿಂಗಳಿನಿಂದ ಆದಾಯ ತೆರಿಗೆ ಅಧಿಕಾರಿಗಳು ಹೊಸ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ.

ಈ ಮಹತ್ವದ ಯೋಜನೆಗೆ ಪ್ರಾಜೆಕ್ಟ್ ಇನ್‍ಸೈಟ್ ಎಂದು ಹೆಸರಿಡಲಾಗಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ದುಬಾರಿ ವಸ್ತುಗಳನ್ನು ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಪ್ರತಿಷ್ಠೆಯಿಂದ ಪ್ರದರ್ಶಿಸುವ ಮಂದಿಗೆ ಅವರ ಶ್ರೀಮಂತಿಕೆ ಧೋರಣೆಯೇ ಮುಳುವಾಗಲಿದೆ.
ಜನರ ಖರ್ಚು ಮಾಡುವ ವಿಧಾನಗಳು ಮತ್ತು ಆದಾಯ ಘೋಷಣೆ ನಡುವೆ ಇರುವ ವ್ಯತ್ಯಾಸವನ್ನು ಬಯಲಿಗೆಳೆಯಲು ಆದಾಯ ತೆರಿಗೆ ಅಧಿಕಾರಿಗಳು ಸೋಷಿಯಲ್ ನೆಟ್‍ವರ್ಕ್ ತಾಣಗಳಿಂದ ಮಾಹಿತಿಗಳನ್ನು ಕಲೆ ಹಾಕಿ ದೊಡ್ಡ ಮಟ್ಟದ ಅಂಕಿ-ಸಂಖ್ಯೆ ವಿಶ್ಲೇಷಣೆ ಮಾಡಲಿದ್ದಾರೆ. ಕಾಳಧನದಿಂದ ತಪ್ಪಿಸಿಕೊಂಡಿರುವ ಕಿಲಾಡಿ ಕುಳಗಳನ್ನು ತಮ್ಮ ಬಲೆಯೊಳಗೆ ಕೆಡವಿಕೊಳ್ಳಲು ಇಲಾಖೆಯ ಸಾಮಾಜಿಕ ಜಾಲತಾಣವನ್ನು ಜಾಲಾಡಲಿದೆ.
ಆದಾಯ ಘೋಷಣೆ ಮತ್ತು ದುಂದುವೆಚ್ಚಗಳ ಶೈಲಿ ನಡುವೆ ತುಲನೆ ಮಾಡಿ ಆ ಮೂಲಕ ತೆರಿಗೆ ವಂಚನೆ ಮತ್ತು ಕಾಳಧನವನ್ನು ಪತ್ತೆ ಮಾಡುವುದು ಈ ಹೊಸ ಯೋಜನೆಯ ಉದ್ದೇಶವಾಗಿದೆ.

ವ್ಯಕ್ತಿಯ ಆದಾಯ ಮತ್ತು ಆಸ್ತಿಗಳ 360 ಡಿಗ್ರಿ ಕೋನದ ನೋಟ (ಪರಿಪೂರ್ಣ) ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಆಧಾರ್‍ನೊಂದಿಗೆ ಪ್ಯಾನ್ ಸಂಪರ್ಕವನ್ನು ಈಗಾಗಲೇ ಕಡ್ಡಾಯಗೊಳಿಸಿದೆ. ಈಗ ಈ ವಿನೂತನ ಕಾರ್ಯಾಚರಣೆ ಮೂಲಕ ತೆರಿಗೆ ವಂಚಕರು ಮತ್ತು ಕಾಳಧನಿಕರು ತಪ್ಪಿಸಿಕೊಳ್ಳದಂತೆ ಬಿಗಿಯಾದ ಬಲೆಯನ್ನೂ ಹೆಣೆದಿದೆ.

Facebook Comments

Sri Raghav

Admin