ಮಳೆಯಲ್ಲಿ ಮುಳುಗಿದ ಬೆಂಗಳೂರು, ನಿಲ್ಲದ ಮಳೆ ರಗಳೆ

ಈ ಸುದ್ದಿಯನ್ನು ಶೇರ್ ಮಾಡಿ

IMG-20170910-WA0135

ಬೆಂಗಳೂರು, ಸೆ.10-ರಾತ್ರಿಯಿಡೀ ಬಿಟ್ಟು ಬಿಡದೆ ಸುರಿದ ಮಹಾಮಳೆಗೆ ಮಹಾನಗರ ತತ್ತರಿಸಿಹೋಗಿದೆ. ಹಲವಾರು ಕೆರೆಗಳ ಕೋಡಿ ಒಡೆದಿವೆ. ವೃಷಭಾವತಿ ಮತ್ತಿತರ ಕಣಿವೆಗಳು ತುಂಬಿ ಹರಿಯುತ್ತಿರುವ ಪರಿಣಾಮ ನಗರದ ಬಹುತೇಕ ರಸ್ತೆಗಳು ಕೆರೆಗಳಂತಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‍ಡಿಆರ್‍ಎಫ್ ತುಕಡಿಗಳು ಹಾಗೂ ಪಾಲಿಕೆ ಸಿಬ್ಬಂದಿ ಸಕಾಲಕ್ಕೆ ಕಾರ್ಯಾಚರಣೆಗಿಳಿಯದಿದ್ದರೆ ರೋಗಿಗಳು ಸೇರಿದಂತೆ ಬಸ್ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳಿತ್ತು.
ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಾದ ನೆಲಮಂಗಲ, ಚಿಕ್ಕಬಳ್ಳಾಪುರ, ಮಾಗಡಿ, ದೇವನಹಳ್ಳಿ ಹಾಗೂ ತುಮಕೂರು ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಗೆ ಕೆರೆ-ಕುಂಟೆಗಳು ತುಂಬಿ ಹರಿಯುತ್ತಿವೆ.

IMG-20170910-WA0137

ರಾಜಧಾನಿಯಲ್ಲಂತೂ ಹಲವಾರು ಕೆರೆಗಳ ಕೋಡಿ ಒಡೆದು, ರಸ್ತೆಗಳೆಲ್ಲಾ ನದಿಗಳಾಗಿ ಪರಿವರ್ತನೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೆಲ ಬಡಾವಣೆಗಳು ಮತ್ತು ಅಪಾರ್ಟ್‍ಮೆಂಟ್‍ಗಳು ಜಲಾವೃತಗೊಂಡಿವೆ. ರಾತ್ರಿ ಒಂದು ಗಂಟೆ ಸುಮಾರಿಗೆ ಆರಂಭವಾದ ಮಳೆ, ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯ ಆರ್.ವಿ.ಕಾಲೇಜು ಸಮೀಪದ ವೃಷಭಾವತಿ ತುಂಬಿ ಹರಿದು ರಸ್ತೆಗಳಲ್ಲಿ ಆಳುದ್ದ ನೀರು ನಿಂತು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

IMG-20170910-WA0138

ಕೆಂಗೇರಿ ಸಮೀಪದ ದುಬಾಸಿಪಾಳ್ಯ ಹಾಗೂ ಕೊಮ್ಮಘಟ್ಟ ಕೆರೆಗಳ ಕೋಡಿ ಒಡೆದು ನೀರು ಹೊರಬಂದ ಹಿನ್ನೆಲೆಯಲ್ಲಿ ಆ ಭಾಗದ ರಸ್ತೆಗಳೆಲ್ಲಾ ನದಿಗಳಾಗಿ ಪರಿವರ್ತನೆಗೊಂಡಿವೆ. ಮೈಸೂರು ಕಡೆ ಸಂಚರಿಸುತ್ತಿದ್ದ ಬಸ್ಸೊಂದು ಜಲಾವೃತಗೊಂಡ ಹಿನ್ನೆಲೆಯಲ್ಲಿ 36ಕ್ಕೂ ಹೆಚ್ಚು ಪ್ರಯಾಣಿಕರು ಬಸ್ಸಿನಲ್ಲೇ ಸಾವು-ಬದುಕಿನ ನಡುವೆ ಹೋರಾಟ ನಡೆಸುವ ಸನ್ನಿವೇಶ ಸೃಷ್ಟಿಯಾಗಿತ್ತು. ಲಾರಿ, ಮತ್ತಿತರ ವಾಹನಗಳೂ ರಸ್ತೆಯಲ್ಲಿ ಕೆಟ್ಟು ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಟ್ಟು ಬಸ್‍ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಬೋಟ್ ಮೂಲಕ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

IMG-20170910-WA0144

ಹೆಬ್ಬಾಳ ಸಮೀಪದ ಜನನಿಬಿಡ ಸಂಜಯ್‍ನಗರ ಮುಖ್ಯರಸ್ತೆಯಲ್ಲಿ ಬೃಹದಾಕಾರದ ಮರವೊಂದು ನೆಲಕ್ಕುರುಳಿದೆ. ರಾತ್ರಿ ಮರ ಬಿದ್ದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ಬೆಳಗಿನ ಜಾವ ಮರ ಉರುಳಿದ್ದರೆ, ಭಾರೀ ಅನಾಹುತ ಎದುರಾಗುವ ಸಾಧ್ಯತೆ ಇತ್ತು.
ಘಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಹರಸಾಹಸಪಟ್ಟು ಉರುಳಿಬಿದ್ದ ಮರ ತೆರವುಗೊಳಿಸುವಲ್ಲಿ ಯಶಸ್ವಿಯಾದರು.
ದೊಡ್ಡಬಿದರಕಲ್ಲು ವಾರ್ಡ್‍ನಲ್ಲಿ ಮೋರಿ, ಚರಂಡಿಗಳು ತುಂಬಿ ಹರಿದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಜಲಾವೃತಗೊಂಡಿತ್ತು. ಸ್ಥಳೀಯರು ರಾತ್ರಿಯಿಡೀ ಜಾಗರಣೆ ನಡೆಸಿ ಮನೆಗೆ ನುಗ್ಗಿದ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದರು.

WhatsApp Image 2017-09-10 at 10.07.11 AM

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಗ್ಗಲೀಪುರ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ರೋಗಿಗಳು ಪರದಾಡುವಂತಾಯಿತು. ವೈದ್ಯರ ಮುನ್ನೆಚ್ಚರಿಕೆ ಕ್ರಮದಿಂದ ಸ್ಥಳಕ್ಕೆ ಆಗಮಿಸಿದ ಎಸ್‍ಡಿಆರ್‍ಎಫ್ ಸಿಬ್ಬಂದಿಗಳು ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಕಗ್ಗಲೀಪುರ ಸುತ್ತಮುತ್ತಲ ಬಹುತೇಕ ಗ್ರಾಮಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆಯಿಂದ ಹೊರಬರಲು ಸಾಧ್ಯವಾಗದೆ ಪರಿತಪಿಸುತ್ತಾ ಸ್ಥಳೀಯ ಆಡಳಿತದ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

IMG-20170910-WA0156

ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಮೀಪದ ಹಿಮಗಿರಿ ಮೆಡೋಸ್ ಅಪಾರ್ಟ್‍ಮೆಂಟ್‍ನ ನೆಲಮಹಡಿ ಸಂಪೂರ್ಣ ಜಲಮಯವಾಗಿತ್ತು.ಅಲ್ಲಿನ ನಿವಾಸಿಗಳು ಹೊರಬರಲಾರದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಟ್ಟು ಬಿಡದೆ ಸುರಿದ ಮಳೆಗೆ ಮಾಗಡಿರಸ್ತೆ ಗೋಪಾಲಪುರದಲ್ಲಿ ಹೆಂಚಿನ ಮನೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ನಗರದ ದಕ್ಷಿಣ ಭಾಗದ ಅನುಗ್ರಹ ಬಡಾವಣೆ ಸಂಪೂರ್ಣ ನದಿಯಂತಾಗಿದ್ದು, ಇಡೀ ಬಡಾವಣೆಯಲ್ಲಿ 5 ಅಡಿ ನೀರು ನಿಂತಿತ್ತು. ಅಲ್ಲಿನ ನಿವಾಸಿಗಳು ಮುಂಜಾನೆ 3 ಗಂಟೆಯಿಂದ ಬೆಳಗಿನ ಜಾವದವರೆಗೂ ನೀರನ್ನು ಹೊರಹಾಕಲು ಹರಸಾಹಸಪಟ್ಟರು.

IMG-20170910-WA0146

ಇನ್ಫೋಸಿಸ್‍ಗೂ ನುಗ್ಗಿದ ನೀರು:

ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲೂ ಭಾರೀ ಮಳೆಯಾಗಿದ್ದು, ಮಳೆಗೆ ಕಾಂಪೌಂಡ್‍ವೊಂದು ಕುಸಿದು ಬಿದ್ದಿದೆ. ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಗೂ ಮಳೆ ನೀರು ನುಗ್ಗಿ ಸಾಕಷ್ಟು ನಷ್ಟ ಉಂಟು ಮಾಡಿದೆ.

ತುಮಕೂರು:

ಜಿಲ್ಲೆಯ ಕುಣಿಗಲ್, ತಿಪಟೂರು, ಶಿರಾ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಬಿದ್ದಿಯಲ್ಲದೆ, ಮರಗಳು ಉರುಳಿಬಿದ್ದು ಸಾರ್ವಜನಿಕರ, ವಾಹನ ಸವಾರರಿಗೆ ಅಡ್ಡಿಯುಂಟಾಗಿತ್ತು. ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದು ರಾತ್ರಿ ಜನ ಕತ್ತಲೆಯಲ್ಲಿ ಕಾಲ ಕಳೆದರು.  ಶಿರಾಗೇಟ್-ಯಲ್ಲಾಪುರ ನಡುವೆ ಬಿದ್ದ ಮಳೆಯಿಂದ ಮಧುಗಿರಿ ರಸ್ತೆಯ ಬೈಪಾಸ್ ಸೇತುವೆ ಕೆಳಗೆ ಎದೆಮಟ್ಟದಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಎರಡು ಬಸ್‍ಗಳು ರಸ್ತೆಯಲ್ಲೇ ಕೆಟ್ಟು ನಿಲ್ಲುವಂತಾಯಿತು. ಹೀಗಾಗಿ ಸಾರ್ವಜನಿಕರು, ವಾಹನ ಚಾಲಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

WhatsApp Image 2017-09-10 at 10.56.25 AM

ಚಿಕ್ಕಬಳ್ಳಾಪುರ:

ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಚಿಕ್ಕಬಳ್ಳಾಪುರ ತತ್ತರಿಸಿದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದ್ರಾಕ್ಷಿ , ತರಕಾರಿ, ಹೂವು ಕೊಳೆತು ನಷ್ಟ ಸಂಭವಿಸಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ನಗರದ ಜೂನಿಯರ್ ಕಾಲೇಜು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣ ಕೆರೆಯಂತಾಗಿದೆ. ನಿನ್ನೆ ಸಂಜೆ ಆರಂಭವಾದ ಜೋರು ಮಳೆಗೆ ಬಸ್ ನಿಲ್ದಾಣಗಳಲ್ಲೂ ನೀರು ನಿಂತು ಜನರು ತಮ್ಮ ಊರಿಗಳಿಗೆ ವಾಪಸ್ಸಾಗಲು ಪರದಾಡುವಂತಾಗಿತ್ತು.

WhatsApp Image 2017-09-10 at 10.56.26 AM

ಮಾಗಡಿ ವರದಿ:

ನಿನ್ನೆ ರಾತ್ರಿ ಮಾಗಡಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕಸಬಾ ಹೋಬಳಿ ಉಡವೆಕೆರೆ, ಭಾರ್ಗವತಿ ಕೆರೆ, ಕುದೂರು ಹೋಬಳಿಯ ಅಗಲಬತ್ತಿ ಕೆರೆ, ಅಂದರಗಿ ಕೆರೆ ತುಂಬಿ ಕೋಡಿಹರಿದಿದೆ. ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 104 ಸೆ.ಮೀ ದಾಖಲೆ ಮಳೆಯಾಗಿದೆ. ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ಕೆಂಪೇಗೌಡನಗರ, ಗುಮಸಂದ್ರ ಸುತ್ತಮುತ್ತದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ರೈತರ ಜಮೀನು ಸಂಪೂರ್ಣ ಜಲಾವೃತಗೊಂಡು ತೆಂಗು, ಅಡಿಕೆ, ಜೋಳ, ರಾಗಿ ನಾನಾ ಬೆಳೆಗಳು ಹಾಳಾಗಿವೆ.

WhatsApp Image 2017-09-10 at 10.56.33 AM

ನೆಲಮಂಗಲ ವರದಿ:

ತಾಲ್ಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು , 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 9.5 ಸೆ.ಮೀ ಮಳೆಯಾಗಿದೆ. ರಾತ್ರಿ ಇಡೀ ಮಳೆ ಸುರಿದು ನೆಲಮಂಗಲ ಕೆರೆ, ಕೆಂಗಲ್ ಕೆರೆ, ಬಿನ್ನಿಮಂಗಲ ಕೆರೆ ಸೇರಿದಂತೆ ತಾಲ್ಲೂಕಿನ ಹಲವು ಕೆರೆಗಳು ಕೋಡಿಬಿದ್ದಿವೆ. ಬೈಲಾಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಯಲ್ಲಿ ಕೆಲವು ವಾಹನಗಳು ನಿಂತಲೇ ನಿಂತಿವೆ. ದಾಬಸ್‍ಪೇಟೆಯಲ್ಲಿ ಎರಡು ಮನೆಗಳು ಕುಸಿದಿದ್ದು ,ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

WhatsApp Image 2017-09-10 at 10.56.39 AM

ಚಿಕ್ಕಬಳ್ಳಾಪುರ:

ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಚಿಕ್ಕಬಳ್ಳಾಪುರ ತತ್ತರಿಸಿದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದ್ರಾಕ್ಷಿ , ತರಕಾರಿ, ಹೂವು ಕೊಳೆತು ನಷ್ಟ ಸಂಭವಿಸಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ನಗರದ ಜೂನಿಯರ್ ಕಾಲೇಜು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣ ಕೆರೆಯಂತಾಗಿದೆ. ನಿನ್ನೆ ಸಂಜೆ ಆರಂಭವಾದ ಜೋರು ಮಳೆಗೆ ಬಸ್ ನಿಲ್ದಾಣಗಳಲ್ಲೂ ನೀರು ನಿಂತು ಜನರು ತಮ್ಮ ಊರಿಗಳಿಗೆ ವಾಪಸ್ಸಾಗಲು ಪರದಾಡುವಂತಾಗಿತ್ತು.

WhatsApp Image 2017-09-10 at 12.10.30 PM

ದೇವನಹಳ್ಳಿ :

ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಪಟ್ಟಣದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಚರಂಡಿಗಳು, ಕಾಲುವೆಗಳು ಬ್ಲಾಕ್ ಆಗಿದ್ದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿದಿದ್ದು , ಕೆಟ್ಟ ವಾಸನೆ ತಾಳಲಾರದೆ ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದಿದೆ. ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಳೆ ಅವಾಂತರದಿಂದ ಪಟ್ಟಣದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ತುಮಕೂರು: ಜಿಲ್ಲೆಯ ಕುಣಿಗಲ್, ತಿಪಟೂರು, ಶಿರಾ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಬಿದ್ದಿಯಲ್ಲದೆ, ಮರಗಳು ಉರುಳಿಬಿದ್ದು ಸಾರ್ವಜನಿಕರ, ವಾಹನ ಸವಾರರಿಗೆ ಅಡ್ಡಿಯುಂಟಾಗಿತ್ತು. ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದು ರಾತ್ರಿ ಜನ ಕತ್ತಲೆಯಲ್ಲಿ ಕಾಲ ಕಳೆದರು.

PUR_0007

ಭಾರೀ ಮಳೆ: ಕೋಡಿಬಿದ್ದ ಕೆರೆಗಳು  : 
ಮಾಗಡಿ,ಸೆ.10-ನಿನ್ನೆ ರಾತ್ರಿ ಮಾಗಡಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಕಸಬಾ ಹೋಬಳಿ ಉಡವೆಕೆರೆ, ಭಾರ್ಗವತಿ ಕೆರೆ, ಕುದೂರು ಹೋಬಳಿಯ ಅಗಲಬತ್ತಿ ಕೆರೆ, ಅಂದರಗಿ ಕೆರೆ ತುಂಬಿ ಕೋಡಿಹರಿದಿದೆ. ಮಳೆಯಿಂದಾಗಿ ತಾಲ್ಲೂಕಿನಲ್ಲಿ ಮನೆಗಳು ಉರುಳಿಬಿದ್ದು ನಾನಾ ಅವಾಂತರ ಸೃಷ್ಟಿಯಾಗಿದೆ. ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 104 ಸೆ.ಮೀ ಮಳೆಯಾಗಿದೆ.

ರಾಜಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ಕೆಂಪೇಗೌಡನಗರ, ಗುಮಸಂದ್ರ ಸುತ್ತಮುತ್ತದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ರೈತರ ಜಮೀನಿಗೆ ನೀರು ಹರಿದು ಬೆಳೆಗಳು ಸಂಪೂರ್ಣ ಜಲಾವೃತಗೊಂಡು ತೆಂಗು, ಅಡಿಕೆ, ಜೋಳ, ರಾಗಿ ಸೇರಿದಂತೆ ನಾನಾ ಬೆಳೆಗಳು ಹಾಳಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.  ತಗ್ಗುಪ್ರದೇಶದ ರಸ್ತೆಗಳೆಲ್ಲ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಮನೆಗಳು ನೀರು ನುಗ್ಗಿ ಜನ ರಾತ್ರಿ ಇಡೀ ಜಾಗರಣೆ ಮಾಡಿದ್ದರಲ್ಲದೆ ನಿಂತ ನೀರನ್ನು ಹೊರಹಾಕಲು ಹೈರಾಣಾದರು.  ಪಟ್ಟಣದಲ್ಲಿ ಇನ್ನು ಎರಡು ದಿನಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.

PUR_0053

ದಾಖಲೆ ಮಳೆ:

ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದ್ದು ಕೆಂಗೇರಿಯಲ್ಲಿ ಅತಿಹೆಚ್ಚು 167 ಮಿ.ಮೀ ಮಳೆಯಾಗಿದೆ. ಇಂದು, ನಾಳೆಯೂ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.  ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲೂ ಭಾರೀ ಮಳೆಯಾಗಿದ್ದು , ಕೊಟ್ಟಿಗೆ ಪಾಳ್ಯ 73 ಮಿ.ಮೀ ಜೆಪಿಪಾರ್ಕ್ 53, ಹೇರೋಹಳ್ಳಿ 80.5, ದೊಡ್ಡಬಿದರೆ ಕಲ್ಲು 91.5, ಜ್ಞಾನಭಾರತಿ 9.5, ಬಸವನಗುಡಿ 76, ಸಾರಕ್ಕಿ 69, ಕುಮಾರಸ್ವಾಮಿ ಲೇಔಟ್ 66.5 , ಅಗ್ರಹಾರ ದಾಸರಹಳ್ಳಿ 70.5, ರಾಜರಾಜೇಶ್ವರಿನಗರ 128, ಎಚ್‍ಎಂಟಿ 93, ಕೊಟ್ಟಿಗೆಹಳ್ಳಿ 67, ಬ್ಯಾಟರಾಯನಪುರ 56.5, ದೊಡ್ಡಬೊಮ್ಮಸಂದ್ರ 90, ಪೀಣ್ಯ 92, ಬಾಗಲಕುಂಟೆ 111.5, ಶೆಟ್ಟಿಹಳ್ಳಿ 96, ಹೆಗ್ಗನಹಳ್ಳಿ 90, ಉತ್ತರಹಳ್ಳಿ 76, ಬೇಗೂರು 86.5 ಕೋಣನಕುಂಟೆ 82.5, ಬಿಳೆಕಳ್ಳಿ 66, ಕೊಟ್ಟಿಗೆರೆ 81, ಅಂಜನಪುರ 106.5, ನಾಗರಬಾವಿ 95, ಕಾಟನ್‍ಪೇಟೆ 63, ರಾಜಾಜಿನಗರ 56, ನಂದಿನಿ ಲೇಔಟ್ 61, ನಾಗಪುರ 80, ತಾವರೆಕೆರೆ 110.5, ಕೆಜಿಹಳ್ಳಿ 114.5, ಹಂಪಿನಗರ 80.5, ವಿದ್ಯಾಪೀಠ 82.5, ಬಿಟಿಎಂ ಲೇಔಟ್ 66, ರಾಧಾಕೃಷ್ಣ ಟೆಂಪಲ್ 69 ಮಿ.ಮೀ ಮಳೆಯಾಗಿದೆ.

PUR_0038

ಚಿಕ್ಕಬಳ್ಳಾಪುರ, ತುಮಕೂರು, ಮಾಗಡಿ, ಹಾಸನ, ರಾಮನಗರ ಸೇರಿದಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು , ಮತ್ತೆ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.  ಹಳೇಮೈಸೂರು ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದು, ನಾಳೆಯಿಂದ ಉತ್ತರ ಕರ್ನಾಟಕದಲ್ಲೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಮಳೆ ಪರಿಸ್ಥಿರಿ ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲ : ಯಡಿಯೂರಪ್ಪ

ತುಮಕೂರು, ಸೆ.10-ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಾವು-ನೋವುಗಳು ಸಂಭವಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ನಿಭಾಯಿಸುವಲ್ಲಿ ಬಿಬಿಎಂಪಿ ಮತ್ತು ರಾಜ್ಯಸರ್ಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳಲ್ಲೆ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದು, ಅದನ್ನು ಮುಚ್ಚುವ ಯೋಗ್ಯತೆಯೂ ರಾಜ್ಯಸರ್ಕಾರಕ್ಕಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪ್ರತಕರ್ತೆ ಗೌರಿಲಂಕೇಶ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದ ಬಗ್ಗೆ ರಾಜ್ಯಸರ್ಕಾರಕ್ಕೆ ಮಾಹಿತಿ ಇತ್ತು. ಆದರೆ ಏಕೆ ಅವರಿಗೆ ಭದ್ರತೆ ನೀಡಲಿಲ್ಲ ಎಂದು ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತುಮಕೂರಿನ ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಸುಮಾರು 74 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು ಈ ಆಸ್ಪತ್ರೆ ಹೊಂದಿದ್ದು, ಇದರಿಂದ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಅಪಘಾತಗಳು, ವಿವಿಧ ರೀತಿಯ ಮಾರಕ ರೋಗಗಳಿಗೆ, ಶಸ್ತ್ರಚಿಕಿತ್ಸೆಗೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೀಗ ಮಹಾನಗರಗಳಲ್ಲಿ ದೊರೆಯುವ ಎಲ್ಲಾ ಸುಸಜ್ಜಿತ ಸೇವಾ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ದೊರೆಯಲಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಡಾ.ಶ್ರೀ.ಶಿವಕುಮಾರಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಪ್ರಸಕ್ತ ವಿದ್ಯಮಾನಗಳು, ರಾಜ್ಯದ ಬರ ಪರಿಸ್ಥಿತಿ, ನೀರಿನ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.  ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣ, ಹೆಬ್ಬಾಕ ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Facebook Comments

Sri Raghav

Admin