ರೋಹಿಂಗ್ಯ ಉಗ್ರರಿಂದ ಒಂದು ತಿಂಗಳ ಏಕಪಕ್ಷೀಯ ಕದನ ವಿರಾಮ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Mynmar--01

ಯಾನ್‍ಗೊನ್, ಸೆ.10-ಮ್ಯಾನ್ಮಾರ್‍ನ ರಖೈನ್ ರಾಜ್ಯದಲ್ಲಿ ಭಾರೀ ಹಿಂಸಾಚಾರ ಭುಗಿಲೇಳಲು ಮೂಲ ಕಾರಣವಾಗಿರುವ ರೋಹಿಂಗ್ಯ ಉಗ್ರರು ಒಂದು ತಿಂಗಳ ಏಕಪಕ್ಷೀಯ ಕದನ ವಿರಾಮ ಘೋಷಿಸಿದ್ದಾರೆ.  ರಖೈನ್‍ನಲ್ಲಿ ಆ.25ರಂದು ದಾಳಿ ನಡೆಸಿ ರಕ್ತಪಾತಕ್ಕೆ ಕಾರಣವಾಗಿದ್ದ ಉಗ್ರರ ವಿರುದ್ಧ ಸೇನಾಪಡೆ ಬಿರುಸಿನ ಕಾರ್ಯಾಚರಣೆ ನಡೆಸಿತ್ತು. ಭಾರೀ ಘರ್ಷಣೆ ಮತ್ತು ಅಪಾರ ಸಾವು-ನೋವುಗಳ ನಂತರ 3 ಲಕ್ಷಕ್ಕು ಹೆಚ್ಚು ಮುಸ್ಲಿಂ ಅಲ್ಪಸಂಖ್ಯಾತರು ಈ ಪ್ರದೇಶದಿಂದ ಬಾಂಗ್ಲಾದೇಶಕ್ಕೆ ಪಲಾಯನವಾಗಿದ್ದರು.

ಈಗ ಉಗ್ರರು ಹಠಾತ್ ಏಕಪಕ್ಷೀಯ ಯುದ್ಧ ವಿರಾಮ ಘೋಷಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಅರಾಕಾನ್ ರೋಹಿಂಗ್ಯ ಸಾಲ್ವೆಷನ್ ಆರ್ಮಿ (ಆರ್ಸಾ) ಈ ಮೂಲಕ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ ಎಂದು ಸಂಘಟನೆ ಟ್ವೀಟರ್‍ನಲ್ಲಿ ಹೇಳಿಕೆ ನೀಡಿದೆ.

ರಖೈನ್‍ನಲ್ಲಿ ಉಲ್ಬಣಗೊಂಡಿರುವ ಭೀಕರ ಹಿಂಸಾಚಾರವನ್ನು ತಡೆಯಲು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವದ ವಿವಿಧ ದೇಶಗಳು ಮ್ಯಾನ್ಮಾರ್ ಸರ್ಕಾರಕ್ಕೆ ಮನವಿ ಮಾಡುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ತನ್ನ ದೇಶಕ್ಕೆ ರೋಹಿಂಗ್ಯ ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದು, ಇದರಿಂದ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಲಿದೆ. ಆದ್ದರಿಂದ ಗುಳೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮ್ಯಾನ್ಮಾರ್‍ಗೆ ಬಾಂಗ್ಲಾದೇಶ ಆಗ್ರಹಿಸಿದೆ.  ಮ್ಯಾನ್ಮಾರ್‍ನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಹಿಂಸಾಚಾರ ಮತ್ತು ದೌರ್ಜನ್ಯಗಳನ್ನು ಖಂಡಿಸಿ ಏಷ್ಯಾ ದೇಶಗಳ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.

Facebook Comments

Sri Raghav

Admin