ವಿಮಾನಗಳ ಮೇಲೆ ರಾಸಾಯನಿಕ ದಾಳಿಗೆ ಉಗ್ರರ ಕುತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Airport--01

ನವದೆಹಲಿ, ಸೆ.10-ಭಯೋತ್ಪಾದನೆಯ ಎಲ್ಲ ಸ್ವರೂಪಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವಾಗಲೇ ಉಗ್ರರು ಹೊಸ ರೀತಿಯ ದಾಳಿಗೆ ಕುತಂತ್ರಗಳನ್ನು ರೂಪಿಸುತ್ತಿದ್ದಾರೆ. ವಿಮಾನಗಳು ಮತ್ತು ಇತರ ಸಾರ್ವಜನಿಕ ವಾಹನಗಳಲ್ಲಿ ವಿಷಾನಿಲಗಳನ್ನು ಬಿಡುಗಡೆ ಮಾಡಿ ವಿನಾಶಕಾರಿ ರಾಸಾಯನಿಕ ಆಕ್ರಮಣ ನಡೆಸುವ ಹೊಸ ಕುಯುಕ್ತಿ ರೂಪಿಸಿದ್ದಾರೆ ಎಂದು ಸ್ಫೋಟಕ ಮಾಹಿತಿಯನ್ನು ಗುಪ್ತಚರ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಏರ್‍ಪೋರ್ಟ್‍ಗಳು, ರೈಲು, ಬಸ್ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿನ ನಿಗಾ ಇಡುವಂತೆ ಹಾಗೂ ಪ್ರಯಾಣಿಕರ ಮತ್ತು ಸರಕು ಸಾಗಣೆ ಲಗೇಜುಗಳನ್ನು ತೀವ್ರ ತಪಾಸಣೆ ನಡೆಸುವಂತೆ ಭದ್ರತಾಪಡೆಗಳಿಗೆ ತಿಳಿಸಲಾಗಿದೆ.

ವಿಶೇಷವಾಗಿ ವಿಮಾನಗಳಲ್ಲಿ ಮಾರಕ ವಿಷಾನಿಲಗಳನ್ನು ಬಿಡುಗಡೆ ಮಾಡಲು ಬಳಸಬಹುದಾದ ಯಾವುದೇ ವಸ್ತುಗಳ ಬಗ್ಗೆ ತೀವ್ರ ಶೋಧ ನಡೆಸುವಂತೆಯೂ ಕಟ್ಟಪ್ಪಣೆ ಮಾಡಲಾಗಿದೆ.  ಈ ಸಂಬಂಧ ಎಲ್ಲ ರಾಜ್ಯ ಸರ್ಕಾರಗಳಿಗೆ ಗೃಹ ಸಚಿವಾಲಯ ಪತ್ರ ಬರೆದಿದೆ. ವಾಣಿಜ್ಯ ವಿಮಾನಗಳನ್ನು ಗುರಿಯಾಗಿಟ್ಟುಕೊಂಡು ಹೊಸ ರೀತಿಯ ದಾಳಿಗಳನ್ನು ನಡೆಸಲು ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂದು ತನಗೆ ಗುಪ್ತಚರ ಮಾಹಿತಿ ಲಭಿಸಿದ್ದು, ಈಗಿನಿಂದಲೇ ಕಟ್ಟೆಚ್ಚರದಿಂದ ಇರಬೇಕು. ಭದ್ರತೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸೂಚಿಸಿದೆ.

ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು ವಿಮಾನವನ್ನು ಸ್ಫೋಟಿಸುವ ಉಗ್ರರ ಕೃತ್ಯವನ್ನು ಪೊಲೀಸರು ವಿಫಲಗೊಳಿಸಿದ್ದರು. ಗಲ್ಫ್ ವಿಮಾನವೊಂದರಲ್ಲಿ ಸುಧಾರಿತ ಸ್ಫೋಟಕವನ್ನು ಇಡಲು ಭಯೋತ್ಪಾದಕರು ಯೋಜನೆ ರೂಪಿಸಿದ್ದರು. ಈ ಘಟನೆಯಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಈ ರೀತಿಯ ವಿಧ್ವಂಸಕ ಕೃತ್ಯಗಳಿಗೆ ಆಸ್ಪದ ನೀಡದಿರಲು ಕಟ್ಟೆಚ್ಚರ ವಹಿಸಿದೆ.  ಹಾರ್ಡ್‍ವೇರ್ ಅಂಗಡಿಗಳು ಅಥವಾ ಇತರ ಮಳಿಗೆಗಳಲ್ಲಿ ಸುಲಭವಾಗಿ ಲಭಿಸುವ ರಾಸಾಯನಿಕ ಪುಡಿಗಳು, ಕೀಟನಾಶಕಗಳು, ಆಸಿಡ್‍ಗಳು, ನೀರಿನ ರೂಪದಲ್ಲಿರುವ ಮಾರಕ ದ್ರಾವಣಗಳು, ಮನೆ ಶುಭ್ರಕ ರಾಸಾಯನಿಗಳೂ ಸೇರಿದಂತೆ ಇತರ ವಸ್ತುಗಳಿಗೆ ವಿಷಾನಿಲಗಳನ್ನು ಭಯೋತ್ಪಾದಕರು ಸೃಷ್ಟಿಸುತ್ತಾರೆ. ಅವುಗಳನ್ನು ಸಾರ್ವಜನಿಕ ವಾಹನಗಳಿಗೆ ಅದರಲ್ಲೂ ವಿಮಾನಗಳಿಗೆ ಬಿಡುಗಡೆ ಮಾಡಿ ಸಾವು-ನೋವುಗಳಿಗೆ ಕಾರಣರಾಗುತ್ತಾರೆ ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.

ಮುಚ್ಚಲ್ಪಟ್ಟ ಅಥವಾ ಗಾಳಿಯಾಡದ ಸ್ಥಳಗಳಲ್ಲಿ(ವಿಮಾನಗಳು, ಬಸ್‍ಗಳು, ಅಥವಾ ರೈಲುಗಳಲ್ಲಿ) ವಿಷಾನಿಲಗಳು ಬಿಡುಗಡೆಯಾದರೆ ಅದರ ಪರಿಣಾಮ ಘೋರವಾಗಿರುತ್ತದೆ.  ಗುಪ್ರಚರ ಮಾಹಿತಿ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಭದ್ರತಾ ಮಂಡಳಿಯು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್), ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಮೆಟ್ರೋ ಏರ್‍ಪೋರ್ಟ್‍ಗಳಿಗೆ ಪತ್ರ ಬರೆದು ಗರಿಷ್ಠ ಭದ್ರತಾ ಏರ್ಪಾಡುಗಳನ್ನು ಮಾಡುವಂತೆ ಸೂಚಿಸಿದೆ.

Facebook Comments

Sri Raghav

Admin