ಹೃದಯಾಘಾತದಿಂದ ಹಿರಿಯ ಬಹುಭಾಷಾ ನಟಿ ಬಿ.ವಿ.ರಾಧಾ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Radha

ಬೆಂಗಳೂರು, ಸೆ.10- ಕನ್ನಡ ಚಿತ್ರರಂಗದ ಹಿರಿಯ ನಟಿ, ನಿರ್ಮಾಪಕಿ ಬಿ.ವಿ. ರಾಧಾ (70)ಅವರು ಹೃದಯಾಘಾತದಿಂದ ಇಂದು ಮುಂಜಾನೆ ವಿಧಿವಶರಾದರು. ಬಿ.ವಿ.ರಾಧಾರ ಪತಿ, ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವಿ) ಕಳೆದ ಎರಡು ವರ್ಷಗಳ ನಿಧನ ಹೊಂದಿದ ನಂತರ ಏಕಾಂಗಿಯಾಗಿದ್ದರು. 1948ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ರಾಜಲಕ್ಷ್ಮಿ (ಬಿ.ವಿ.ರಾಧಾ ) ಅವರು 1960ರಲ್ಲಿ ಡಾ.ರಾಜ್‍ಕುಮಾರ್ ನಟಿಸಿದ್ದ ರಣಧೀರ ಕಂಠೀರವ ಚಿತ್ರದಿಂದ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ಅವರು ಇದುವರೆಗೂ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ.1966ರಲ್ಲಿ ತಾಜ್‍ಮ್‍ಪು ಎಂಬ ತಮಿಳು ಚಿತ್ರದಲ್ಲಿ ನಟಿಸಿದ ಬಿ.ವಿ.ರಾಧಾ ಅವರು ತಮಿಳಿನ ಸ್ಟಾರ್ ದಿಗ್ಗಜರಾದ ಶಿವಾಜಿಗಣೇಶನ್, ಎಂ.ಜಿ.ರಾಮಚಂದ್ರನ್, ಜೆಮಿನಿ ಗಣೇಶನ್ ಅಲ್ಲದೆ ತೆಲುಗಿನ ಮೇರು ನಟರಾದ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಜೈಶಂಕರ ನಟನೆಯ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ತಾಯಿ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದ ಬಿ.ವಿ.ರಾಧಾ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳಾದ ಶಿವರಾಜ್‍ಕುಮಾರ್, ಜಗ್ಗೇಶ್, ಶಶಿಕುಮಾರ್, ರಾಮ್‍ಕುಮಾರ್ ಮುಂತಾದವರಿಗೆ ಅಮ್ಮನಾಗಿ ಕಾಣಿಸಿಕೊಂಡಿದ್ದರು. ಕೇವಲ ನಟಿಯಾಗಿ ಅಲ್ಲದೆ ಬಿ.ವಿ.ರಾಧಾ ಅವರು ತಮ್ಮ ನಿರ್ಮಾಣ ಸಂಸ್ಥೆಯಿಂದ ಮತ್ತೆ ವಸಂತ,ಶುಭಮಂಗಳ, ಮಾವನೋ ಅಳಿಯನೋ, ಹರಕೆಯ ಕುರಿ, ಜಂಬೂ ಸವಾರಿ ಎಂಬ ಚಿತ್ರಗಳನ್ನು ನಿರ್ಮಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ರಂಗಕಲಾವಿದೆ ಆಗಿ ಸುಮಾರು 15 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದ್ದರು.

ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಆರು ಮೂರು ಒಂಭತ್ತು , ಭಲೇ ಅದೃಷ್ಟವೋ ಅದೃಷ್ಟ , ಯಾವ ಜನ್ಮದ ಮೈತ್ರಿ, ದೇವರು ಕೊಟ್ಟ ತಂಗಿ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಬಿ.ವಿ.ರಾಧಾ ಮಿಥಿಲೆಯ ಸೀತೆಯರು ಚಿತ್ರದಲ್ಲಿನ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ರಂಗಭೂಮಿ, ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಕಾಣಿಸಿಕೊಂಡು ಕುಂಕುಮಭಾಗ್ಯ , ಚಿ.ಸೌ.ಸಾವಿತ್ರಿ , ಪುನರ್‍ವಿವಾಹ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಬಿ.ವಿ.ರಾಧಾ ಅವರಿಗೆ ಸ್ವರ್ಣಕಮಲ, ರಾಜ್ಯಪ್ರಶಸ್ತಿ, ಕಾಗಿನೆಲೆ ಕನಕ ಗುರುಪೀಠದಿಂದ ಕನಕ ರತ್ನ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

ಸಾವಿನಲ್ಲೂ ಸಾರ್ಥಕತೆ:

ಹಿರಿಯ ನಟಿ ಬಿ.ವಿ.ರಾಧಾ ಅವರ ಅಂತಿಮ ದರ್ಶನಕ್ಕೆ ಹೊರಮಾವಿನಲ್ಲಿರುವ ತಮ್ಮ ನಿವಾಸದಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ರಾಧಾ ಅವರ ಅಂತಿಮ ಆಸೆಯಂತೆ ಅವರ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

ಚಿತ್ರರಂಗದ ಕಂಬನಿ:
ಬಿ.ವಿ.ರಾಧಾ ಅವರ ನಿಧನದಿಂದಾಗಿ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಚಿತ್ರರಂಗದ ನಟ, ನಟಿಯರು, ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

 

Facebook Comments

Sri Raghav

Admin