ಗುರುಗ್ರಾಮ ಶಾಲೆಯಲ್ಲಿ ಬಾಲಕನ ಕೊಲೆ : ತಂದೆಯ ಅರ್ಜಿ ವಿಚಾರಣೆ ಸುಪ್ರೀಂ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

School-Murder--01

ನವದೆಹಲಿ, ಸೆ.11-ಗುರುಗ್ರಾಮದ (ಗುರ್‍ಗಾಂವ್) ರಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕಳೆದ ವಾರ ನಡೆದ ಏಳು ವರ್ಷದ ಬಾಲಕನ ಭೀಕರ ಕಗ್ಗೊಲೆ ಬಗ್ಗೆ ಸಿಬಿಐ ಅಥವಾ ಎಸ್‍ಐಟಿ ತನಿಖೆ ನಡೆಸುವಂತೆ ಕೋರಿ ಆತನ ತಂದೆ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಸಮ್ಮತಿಸಿದೆ.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠವು ಈ ಮನವಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರೂ ಈ ಪೀಠದಲ್ಲಿದ್ದಾರೆ.

ಕೊಲೆಯಾದ ಬಾಲಕ ಪ್ರದ್ಯುಮ್ನನ ತಂದೆ ವರಣ್ ಠಾಕೂರು ಈ ಸಂಬಂಧ ಕೋರ್ಟ್‍ಗೆ ಮನವಿ ಸಲ್ಲಿಸಿ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಕೋರಿದ್ದರು.  ದೇಶದ ಖಾಸಗಿ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದೆ ಎಂದು ಪ್ರಸ್ತಾಪಿಸಿ ಸಲ್ಲಿಸಲಾಗಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತು ಸಹ ವಿಚಾರಣೆ ನಡೆಸುವುದಾಗಿಯೂ ಸರ್ವೋಚ್ಚ ನ್ಯಾಯಾಲಯ ಹೇಳಿದೆ.  ಶಾಲೆಯ ಶೌಚಾಲಯದಲ್ಲಿ ಸೆಪ್ಟೆಂಬರ್ 8ರಂದು ಬಾಲಕನ ಕತ್ತು ಸೀಳಿದ ಮೃತದೇಹ ಪತ್ತೆಯಾಗಿತ್ತು. ಅದೇ ದಿನ ಪೊಲೀಸರು ಶಾಲಾ ಬಸ್ ನಿರ್ವಾಹಕರಲ್ಲಿ ಒಬ್ಬನಾದ ಅಶೋಕ್ ಕುಮಾರ್ ಎಂಬಾತನನ್ನು ಬಂಧಿಸಿದರು. ಬಾಲಕನಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಅಶೋಕ್ ಕುಮಾರ್ ಕೊಲೆ ಮಾಡಿದ ಎಂದು ಆರೋಪಿಸಲಾಗಿದೆ.

ಇಬ್ಬರ ಬಂಧನ :

ಏತನ್ಮಧ್ಯೆ, ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯ ಮುಖ್ಯಸರು, ಪ್ರಾಂಶುಪಾಲರು ಮತ್ತು ಅಧ್ಯಾಪಕರುಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಬಂಧಿಸಲಾಗಿದೆ.

Facebook Comments

Sri Raghav

Admin