ಮತ್ತೆ ಎನ್‍ಕೌಂಟರ್ : ಇನ್ನಿಬ್ಬರು ಎಚ್‍ಎಂ ಉಗ್ರರ ಹತ್ಯೆ, ಮತ್ತೊಬ್ಬನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Encounter--01

ಶ್ರೀನಗರ, ಸೆ.11-ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸೇನಾ ಪಡೆ ಕುಲ್ಗಾಂನಲ್ಲಿ ಮತ್ತೆ ಇನ್ನಿಬ್ಬರು ಹಿಜ್‍ಬುಲ್ ಮುಜಾಹಿದ್ದೀನ್ (ಎಚ್‍ಎಂ) ಉಗ್ರರನ್ನು ಹೊಡೆದುರುಳಿಸಿದ್ದು, ಮತ್ತೊಬ್ಬ ಆತಂಕವಾದಿಯನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ನಿನ್ನೆ ಇಬ್ಬರು ಎಚ್‍ಎಂ ಸಂಘಟನೆಯ ಉಗ್ರರನ್ನು ಎನ್‍ಕೌಂಟರ್‍ನಲ್ಲಿ ಉಡಾಯಿಸಿ, ಇನ್ನೊಬ್ಬನನ್ನು ಯೋಧರು ಬಂಧಿಸಿದ್ದರು. ಇದರೊಂದಿಗೆ ಎರಡು ದಿನಗಳ ಅವಧಿಯಲ್ಲಿ ಒಟ್ಟು ನಾಲ್ವರು ಭಯೋತ್ಪಾದಕರು ಹತರಾಗಿ ಇಬ್ಬರು ಸೆರೆಸಿಕ್ಕಂತಾಗಿದೆ.

ಕುಲ್ಗಾಂ ಜಿಲ್ಲೆಯ ಖುದ್ವಾನಿ ಪ್ರದೇಶದಲ್ಲಿ ಕೆಲವು ಉಗ್ರರು ಅಡಗಿದ್ದು, ದಾಳಿಗಾಗಿ ಸಂಚು ರೂಪಿಸುತ್ತಿದ್ದಾರೆ ಎಂಬ ಬಗ್ಗೆ ಭದ್ರತಾಪಡೆಗೆ ನಿಖರ ಮಾಹಿತಿ ಲಭಿಸಿತು. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸಿದರು. ಹಿಂದಿನ ಎಲ್ಲ ಘಟನೆಗಳಂತೆಯೇ ಉಗ್ರರು ಯೋಧರ ಮೇಲೆ ಮುಗಿಬಿದ್ದರು. ಸೇನೆಪಡೆ ನಡೆಸಿದ ಕ್ಷಿಪ್ರ ಪ್ರತಿದಾಳಿ ಬಳಿಕ ಭೀಕರ ಗುಂಡಿನ ಚಕಮಕಿ ನಡೆಯಿತು.

ದೀರ್ಘಕಾಲದ ಎನ್‍ಕೌಂಟರ್ ನಂತರ, ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಮತ್ತೊಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು. ಹತ ಮತ್ತು ಬಂಧಿತ ಉಗ್ರಗಾಮಿಗಳಿಂದ ಎಕೆ-47 ರೈಫಲ್‍ಗಳು, ಪಿಸ್ತೂಲ್‍ಗಳು, ಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.  ಈ ಪ್ರದೇಶದಲ್ಲಿ ಇರಬಹುದಾದ ಉಗ್ರರಿಗಾಗಿ ತೀವ್ರ ಶೋಧ ಮುಂದುವರಿದಿದೆ.

Facebook Comments

Sri Raghav

Admin