ಯುವಕರೇ ಏಳಿ, ಎದ್ದೇಳಿ : ಯುವಜನತೆಗೆ ಪ್ರಧಾನಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01
ನವದೆಹಲಿ,ಸೆ.11-ನಿರುದ್ಯೋಗ ನಿವಾರಣೆ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಕೌಶಲ್ಯಾಭಿವೃದ್ದಿ ಯೋಜನೆಯನ್ನು ಕಾರ್ಯಗತಗೊಳಿಸಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಉದ್ಯೋಗಾರ್ಥಿಗಳಿಗಿಂತ ಉದ್ಯೋಗದಾತರ ಸಂಖ್ಯೆ ಹೆಚ್ಚಾಗಬೇಕು ಎಂದು ಸಲಹೆ ಮಾಡಿದ್ದಾರೆ.
ದೆಹಲಿಯ ಭಾರತೀಯ ವಿಜ್ಞಾನ ಭವನದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ 100ನೇ ಜನ್ಮ ದಿನೋತ್ಸವ ಹಾಗೂ ವಿವೇಕಾಂದರ ಚಿಕಾಗೋದ ವಿಶ್ವಧರ್ಮ ಸಮ್ಮೇಳನದ ಭಾಷಣದ 125ನೇ ವರ್ಷಾರಣೆ ಸಂದರ್ಭದಲ್ಲಿ ನಡೆದ ಯಂಗ್ ಇಂಡಿಯಾ-ನ್ಯೂ ಇಂಡಿಯಾ ಧ್ಯೇಯ ವಾಕ್ಯದ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು.

ಭಾರತ್ ಮಾತಾ ಕೈ ಜೈ ಎಂತಲೇ ತಮ್ಮ ಭಾಷಣ ಪ್ರಾರಂಭಿಸಿದ ಮೋದಿ ವಿವೇಕಾನಂದರ ಅಮರ ವಾಣಿ(ಯುವಕರೇ ಏಳಿ , ಎದ್ದೇಳಿ)ಯನ್ನು ತತ್ವಾದರ್ಶವಾಗಿಟ್ಟುಕೊಂಡು ಯುವಕರು ದೇಶದ ಅಭ್ಯುದಯಕ್ಕೆ ಹೆಜ್ಜೆ ಇಡಬೇಕಿದೆ ಎಂದು ಕರೆ ನೀಡಿದರು.  ವಿವೇಕಾನಂದರ ತತ್ವಗಳ ಅನ್ವೇಷಣೆ ಮತ್ತು ಕೌಶಲ್ಯಾಭಿವೃದ್ದಿ ಪರಿಕಲ್ಪನೆ ಆಧಾರದ ಮೇಲೆ ನಮ್ಮ ಸರ್ಕಾರವು ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಎಂಬ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದೇ ರೀತಿ ಸ್ಟ್ರಾಂಗ್ ಇಂಡಿಯಾ ಸ್ಟ್ಯಾಂಡ್ ಅಪ್ ಇಂಡಿಯಾ ಎಂಬ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದೆ ಎಂದು ಮೋದಿ ತಿಳಿಸಿದರು.

ತಮ್ಮ ಭಾಷಣದ ಬಹುಭಾಗವನ್ನು ವಿವೇಕಾನಂದರ ತತ್ವ ಆದರ್ಶಗಳ ಉಲ್ಲೇಖಕ್ಕೆ ಮೀಸಲಿಟ್ಟ ಮೋದಿ, ವಿಶ್ವಕ್ಕೆ ಹಿತ ಬಯಸುವ ಏಕೈಕ ದೇಶ ನಮ್ಮ ಭಾರತ, ಸ್ವಾಮಿ ವಿವೇಕಾನಂದ ದೇಶಕೆ ಹೊಸ ಆಯಾಮ ತಂದುಕೊಟ್ಟವರು. ಸತ್ಯದ ಹುಡುಕಾಟ ನಡೆಸಿದ್ದ ವೀರ ಸನ್ಯಾಸಿ. ಚಿಕಾಗೊದ ವಿಶ್ವಧರ್ಮ ಸಮ್ಮೇಳನದಲ್ಲಿ ಐತಿಹಾಸಿಕ ಭಾಷಣ ಮಾಡಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದವರು ಎಂದು ಬಣ್ಣಿಸಿದರು.  ವಿಶ್ವಮಟ್ಟದಲ್ಲಿ ಹಿಂದುತ್ವಕ್ಕೆ ಗುರುತು ತಂದುಕೊಟ್ಟ ಅವರ ಐತಿಹಾಸಿಕ ಭಾಷಣದ 125ನೇ ವರ್ಷಾಚರಣೆಯಾದ ಇಂದೇ ಯುವಕರು ವಿಶ್ವ ಭೂಪಟದಲ್ಲಿ ಭಾರತ ಮತ್ತಷ್ಟು ರಾಜಾಜಿಸುವಂತೆ ಮಾಡಲು ಪಣ ತೊಡಬೇಕಿದೆ ಎಂದು ಸಲಹೆ ಮಾಡಿದರು. ವಿವೇಕಾನಂದರು ಸ್ವಚ್ಛತೆಯ ಬಗ್ಗೆಯೂ ಆಗಲೇ ಹೊಸ ಪರಿಕಲ್ಪನೆಯನ್ನು ಹೊಂದಿದ್ದರು. ಅದನ್ನು ನಾವು ಈಗ ಸಾಕಾರಗೊಳಿಸುವ ಅಗತ್ಯವಿದೆ. ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವವರು ವಂದೇ ಮಾತರಂ ಹೇಳುವ ಮೊದಲ ಹಕ್ಕನ್ನು ಹೊಂದಿದವರಾಗಿರುತ್ತಾರೆ ಎಂದು ಹೇಳಿದರು.

ವಂದೇ ಮಾತರಂ ಎಂದು ಹೇಳುವ ನಾವು ಪರಿಸರವನ್ನು ಮಾಲಿನ್ಯಗೊಳಿಸುತ್ತಿರುವುದು ನಿಜಕ್ಕೂ ದುರದೃಷ್ಟ ಸಂಗತಿ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದೆ ಬರಬೇಕು, ಕಾಲೇಜು ಚುನಾವಣೆಗಳಲ್ಲಿ ಸ್ವಚ್ಚತೆ ಬಗ್ಗೆ ಆಶ್ವಾಸನೆ ನೀಡಬೇಕು ಎಂದರು. ಕೇಂದ್ರ ಸಚಿವರಾದ ಮಹೇಶ್ ಶರ್ಮ, ರಾಜವರ್ಧನ ರಾಥೋಡ್ ಸೇರಿದಂತೆ ಸಭೆಯಲ್ಲಿ 50ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.

ಹಿಂದುತ್ವ ಭಾಷಣಕ್ಕೆ ಆಕ್ಷೇಪ:

ಪ್ರಧಾನಿ ನರೇಂದ್ರ ಮೋದಿಯವರು ವಿವೇಕಾನಂದರ ಸ್ಮರಿಸುವ ನೆಪದಲ್ಲಿ ಹಿಂದುತ್ವವನ್ನು ಪ್ರತಿಪಾದಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬಾನರ್ಜಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಪ್ರಧಾನಿ ಭಾಷಣದಲ್ಲಿ ಹಿಂದುತ್ವ ಪ್ರತಿಪಾದನೆ ಕುರಿತ ಸಾರಾಂಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿವಿಯಲ್ಲಿ ಮೋದಿ ಭಾಷಣ ಆಲಿಸುವಂತೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.

Facebook Comments

Sri Raghav

Admin