ಸುಸಜ್ಜಿತ ಗುಣಮಟ್ಟದ ಅನುಭವ ಮಂಟಪ ನಿರ್ಮಾಣ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cm-Afsdafgsdg

ಬೆಂಗಳೂರು, ಸೆ.11-ಬಸವ ಕಲ್ಯಾಣದಲ್ಲಿ ಸುಸಜ್ಜಿತ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಅನುಭವ ಮಂಟಪ ನಿರ್ಮಿಸಲು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ವಿಧಾನಸೌಧದಲ್ಲಿಂದು ತಜ್ಞರ ಸಮಿತಿಯ ವರದಿ ಸ್ವೀಕರಿಸಿ ಮಾತನಾಡಿದ ಅವರು, ಬಸವಕಲ್ಯಾಣದ ತ್ರಿಪುರಾಂತರ ಕೆರೆಯ ದಂಡೆಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 25 ಎಕರೆ ಜಮೀನು ಗುರುತಿಸಲಾಗಿದೆ. ಇದಕ್ಕೆ ಮಹಾಮನೆ ಕ್ಷೇತ್ರ ಎಂದು ಹೆಸರಿಡಲು ಸಲಹೆ ಬಂದಿದೆ. ಮಹಾಮನೆ ಮಧ್ಯಭಾಗದಲ್ಲಿ ಎತ್ತರದ ದಿಣ್ಣೆಯ ಮೇಲೆ ಅನುಭವ ಮಂಟಪ ನಿರ್ಮಾಣಕ್ಕೆ ಶಿಫಾರಸು ಬಂದಿದೆ ಎಂದರು.

12ನೆ ಶತಮಾನದ ಶರಣರ ಷಟ್‍ಸ್ಥಲ, ಅಷ್ಟಾವರಣ, ಪಂಚಾಚಾರ ಸಿದ್ಧಾಂತಗಳು, ಕಾಯಕ, ದಾಸೋಹ, ಅನುಭವ, ಜೀವನ ಸೂತ್ರಗಳನ್ನು ಅಳವಡಿಸಲು ಶಿಫಾರಸು ಮಾಡಲಾಗಿದೆ. ವೃತ್ತಕಾರಾದ ಸುಮಾರು 182 ಅಡಿಗಳ ಎತ್ತರವಿರುವ ಆರು ಅಂತಸ್ತುಗಳ ಕಟ್ಟಡದಲ್ಲಿ ಶರಣರ ವಿಚಾರಧಾರೆಗಳು, ಚಿಂತನ ಮಂಟಪಗಳು, ಅನುಷ್ಠಾನಗವಿಗಳು, ವಚನಗಳನ್ನು ಕೊರೆದ ಕಂಬಗಳು, ಬಿತ್ತಿ ಚಿತ್ರಗಳು ಮಾಡಲು ಅವಕಾಶ ಕಲ್ಪಿಸಲು ಸಲಹೆ ನೀಡಲಾಗಿದೆ ಎಂದರು.
ಸಭಾಂಗಣದಲ್ಲಿ 770 ಆಸನಗಳನ್ನು ಅಳವಡಿಸಲಾಗುವುದು. ಕೆಳ ಅಂತಸ್ತಿನಲ್ಲಿ ಒಟ್ಟಿಗೆ 1500 ಮಂದಿ ಊಟ ಮಾಡುವ ದಾಸೋಹ ನಿರ್ಮಾಣ ಮಾಡಲಾಗುತ್ತದೆ. ಭದ್ರತಾ ಕೊಠಡಿ, ಆಡಳಿತ ಕಚೇರಿ, ಸ್ವಾಗತ ಕಚೇರಿ, ಗ್ರಂಥ ಮಾರಾಟ ಮಳಿಗೆ, ಗ್ರಂಥ ಭಂಡಾರ, ಸಂಶೋಧನಾ ಕೇಂದ್ರ, ಧ್ಯಾನಮಂದಿರ, ಯೋಗ ಕೇಂದ್ರ, ಅತಿಥಿ ಗೃಹ, ಉಗ್ರಾಣ ಮೊದಲಾದ ಸೌಲಭ್ಯ ಕಟ್ಟಡಗಳಿರುತ್ತವೆ. ಈ ಬೃಹತ್ ಕಟ್ಟಡ ನಿರ್ಮಾಣದ ವೆಚ್ಚ 600 ಕೋಟಿ ರೂ. ಆಗಲಿದ್ದು, ನಿರ್ಮಾಣ ಕಾರ್ಯ ಮುಗಿಸಲು 4 ರಿಂದ 5 ವರ್ಷಗಳಾಗಬಹುದು ಎಂದು ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಭವ ಮಂಟಪ ನಿರ್ಮಾಣದ ವಿನ್ಯಾಸ, ಸ್ವರೂಪ, ಉದ್ದೇಶ ಮತ್ತು ಅಳವಡಿಸಬೇಕಾದ ಸಂದೇಶ ಕುರಿತು ಚರ್ಚಿಸಿ ವರದಿ ನೀಡಲು ಗೊ.ರು.ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಚರ್ಚೆ ಮಾಡಿ ಇಂದು ವರದಿ ನೀಡಲಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

Facebook Comments

Sri Raghav

Admin