15 ದಿನಗಳ ಕಾಲ ನಾಲೆಗಳಿಗೆ ನೀರು : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah

ಮೈಸೂರು,ಸೆ.11- ಕಟ್ಟು ಪದ್ದತಿ ಮೂಲಕ 15 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ನಾಲೆಗಳಿಗೆ ನೀರು ಹರಿಸುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.  ಉತ್ತಮ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಹಾಗಾಗಿ ರೈತರಿಗೆ ಅಗತ್ಯವಿರುವಷ್ಟು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಿಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪವನ್ನು ನಿರಾಕರಿಸಿದ ಅವರು, ರಾಜ್ಯದಲ್ಲಿ ಅಗತ್ಯ ಮಳೆಯಾಗುತ್ತಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು.  ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾವೇರಿಯಲ್ಲಿ ರೈತರು ರಸಗೊಬ್ಬರ ಕೇಳಲು ಹೋದಾಗ ಅವರ ಮೇಲೆ ಗೋಲಿಬಾರ್ ನಡೆಸಲಾಯಿತು. ಆದರೆ ಆ ರೀತಿ ನಮ್ಮ ಅವಧಿಯಲ್ಲಿ ನಡೆಯಲು ಬಿಡುವುದಿಲ್ಲ ಎಂದರು.

ಆದೇಶಕ್ಕೆ ಕಿಡಿ:

ಪ್ರಧಾನಿ ಮೋದಿಯವರು ದೀನ್ ದಯಾಳ್ ಜನ್ಮ ಶತಾಬ್ದಿ ಕುರಿತು ಮಾಡುವ ಭಾಷಣವನ್ನು ಕಡ್ಡಾಯವಾಗಿ ಕೇಳಬೇಕೆಂದು ಯುಜಿಸಿ ಆದೇಶ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಭಾಷಣ ಹಿಂದುತ್ವವಾದರೆ ಅದನ್ನು ಕೇಳುವ ಅಗತ್ಯವಿಲ್ಲ. ದೀನ್ ದಯಾಳ್ ಜನ್ಮಶತಾಬ್ದಿ ಭಾಷಣವಾದರೆ ಅದು ಹಿಂದುತ್ವದ ಭಾಷಣವೇ ಆಗಿರುತ್ತದೆ. ಅಂತಹ ಭಾಷಣ ಕೇಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಕೆಎಸ್‍ಒಯುಗೆ ಮಾನ್ಯತೆ ಸಿಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದು ನಂತರ ಪ್ರತಿಕ್ರಿಯಿಸುವುದಾಗಿ ತಿಳಿಸಿದರು. ಮುಂಬರುವ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟು ಕೊಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಯಾರ ಜೊತೆಯೂ ಚರ್ಚಿಸಿಲ್ಲ. ಯಾರೂ ಮಾತನಾಡಲು ಮುಂದಾಗಿಲ್ಲ ಎಂದು ಸಿಎಂ ಹೇಳಿದರು.

Facebook Comments

Sri Raghav

Admin