ಆಸ್ಪತ್ರೆಗಳಿಗೆ ಬ್ಯಾಂಡೆಜ್ ಬಟ್ಟೆ ಖರೀದಿಸಲಾಗದಷ್ಟು ಅದೋಗತಿ ತಲುಪಿದ ಆರೋಗ್ಯ ಇಲಾಖೆ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01
– ರವೀಂದ್ರ ವೈ.ಎಸ್.
ಬೆಂಗಳೂರು, ಸೆ.12- ಸರಿ ಸುಮಾರು 1.80ಲಕ್ಷ ಕೋಟಿ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ ಕನಿಷ್ಠ ಪಕ್ಷ ಸರ್ಕಾರಿ ಆಸ್ಪತ್ರೆಗಳಿಗೆ ಬ್ಯಾಂಡೇಜ್ ಬಟ್ಟೆ ಹಾಗೂ ಹತ್ತಿ ಖರೀದಿಸಲು ಹಣವಿಲ್ಲದಷ್ಟು ಅಧೋಗತಿಗಿಳಿದಿದೆ. ಏಕೆಂದರೆ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಸರ್ಕಾರಿ ಆಸ್ಪತ್ರೆ, ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ ಬ್ಯಾಂಡೇಜ್ ಹಾಗೂ ಹತ್ತಿಯನ್ನು ನೀಡುತ್ತಿಲ್ಲ.   ಪರಿಣಾಮ ಆಸ್ಪತ್ರೆಗೆ ಬರುವ ರೋಗಿಗಳು ತಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಾಗೂ ಮಧ್ಯವರ್ತಿಗಳ ಸಮನ್ವಯದ ಕೊರತೆಯಿಂದಾಗಿ ರೋಗಿಗಳು ಪರದಾಡುತ್ತಿದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಮೌನ ವಹಿಸಿದ್ದಾರೆ.

ಇನ್ನು ಇಲಾಖೆಯಲ್ಲಿ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಕಾರ್ಯದರ್ಶಿ ಶಾಲಿನಿ ರಜನೀಶ್ ಕೂಡ ಈ ವಿಷಯದಲ್ಲಿ ಗಮನ ಹರಿಸದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸುಮಾರು 2ಸಾವಿರಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆ ಹಾಗೂ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹತ್ತಿ ಮತ್ತು ಬ್ಯಾಂಡೇಜ್ ಬಟ್ಟೆ ಇಲ್ಲದಿರುವುದರಿಂದ ರೋಗಿಗಳು ಸರ್ಕಾರ ಮತ್ತು ವೈದ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಏನಿದು ಪ್ರಕರಣ:

ಸಾಮಾನ್ಯವಾಗಿ ಮಾರ್ಚ್ ತಿಂಗಳು ಬಜೆಟ್ ಮಂಡನೆಯಾದ ನಂತರ ಇಲಾಖೆಗೆ ನಿಗದಿ ಪಡಿಸಿದ ಅನುದಾನದಲ್ಲಿ ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಲು ಆಯಾ ಇಲಾಖೆಗಳು ಪ್ರತೀ ವರ್ಷ ಟೆಂಡರ್ ಕರೆಯುವುದು ಸರ್ವೇ ಸಾಮಾನ್ಯ. ಇದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿ ವರ್ಷವೂ ಔಷಧಿ, ಉಪಕರಣಗಳು, ಹತ್ತಿ, ಬ್ಯಾಂಡೇಜ್ ಬಟ್ಟೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಟೆಂಡರ್ ಕರೆಯುತ್ತದೆ.
ಇದರಂತೆ 2016ರ ನವೆಂಬರ್ 18ರಂದು ರಾಜ್ಯದ ಆರೋಗ್ಯ ಸಂಸ್ಥೆಗಳಿಗೆ (Ref.No:KDL/TND/AD/09/E/2016-17, Dtd:18-11-2016(IND-387) Notification) ಔಷಧಿ ಖರೀದಿ ಮಾಡಲೆಂದಿರುವ ಕರ್ನಾಟಕ ರಾಜ್ಯ ಔಷಧಿ ನಿಯಂತ್ರಣ ಮತ್ತು ಉಗ್ರಾಣ ಸಂಸ್ಥೆ (ಕೆಡಿಎಲ್‍ಡಬ್ಲ್ಯೂಎಸ್)ಯು ಅಧಿಸೂಚನೆ ಹೊರಡಿಸಿತ್ತು. ಕಳೆದ ವರ್ಷ ಸರ್ಕಾರಿ ಆಸ್ಪತ್ರೆಗಳಿಗೆ ಬ್ಯಾಂಡೇಜ್ ಮತ್ತು ಹತ್ತಿ ಖರೀದಿಸಲು 21 ಕೋಟಿ ಮೊತ್ತದ ಟೆಂಡರ್ ಆಹ್ವಾನಿಸಲಾಗಿತ್ತು. ಈ ಪ್ರಕಾರ ಟೆಂಡರ್‍ನಲ್ಲಿ ಭಾಗವಹಿಸುವವರು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಒಟ್ಟು ಮೊತ್ತದ ಶೇ.10ರಷ್ಟನ್ನು ಭದ್ರತಾ ಠೇವಣಿಯನ್ನಾಗಿ ಡಿಡಿ ನೀಡಬೇಕು.

ನಿಯಮ ಹೇಳುವುದೇನು?

ಸರ್ಕಾರದ ನಿಯಮದ ಪ್ರಕಾರ ಟೆಂಡರ್‍ನಲ್ಲಿ ಭಾಗವಹಿಸಿದ್ದವರಿಗೆ ಭದ್ರತಾ ಠೇವಣಿ ಇಟ್ಟ 3 ದಿನದೊಳಗೆ ವರ್ಕ್ ಆರ್ಡರ್ ನೀಡಿದರೆ 21 ದಿನಗಳೊಳಗೆ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕೆಂಬ ನಿಯಮವಿದೆ. ಇದರಂತೆ ಅಧಿಸೂಚನೆ ಹೊರಡಿಸಿದ ನಂತರ ಅನೇಕರು ಭದ್ರತಾ ಠೇವಣಿ ಇಟ್ಟಿದ್ದರೂ ಈವರೆಗೂ ಅಧಿಕಾರಿಗಳು ಇವರಿಗೆ ವರ್ಕ್ ಆರ್ಡರ್ ನೀಡದೆ ಸತಾಯಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಮತ್ತು ಹತ್ತಿ ಖಾಲಿಯಾಗಿ ಹಲವು ತಿಂಗಳುಗಲೇ ಕಳೆದಿದ್ದರೂ ಸರ್ಕಾರ ಒಂದಿಲ್ಲೊಂದು ಕಾರಣಗಳನ್ನು ಹೇಳುತ್ತಾ ಮುಂದೂಡುತ್ತಲೇ ಬರುತ್ತಿದೆ.

ನಿಯಮದ ಪ್ರಕಾರ 6 ತಿಂಗಳೊಳಗೆ ಯಾವುದೇ ಟೆಂಡರ್ ಪೂರ್ಣಗೊಳ್ಳದಿದ್ದರೆ ಅದು ತನ್ನ ಮಾನ್ಯತೆಯನ್ನೇ ಕಳೆದುಕೊಳ್ಳುತ್ತದೆ. ನವೆಂಬರ್‍ನಲ್ಲಿ ಹೊರಡಿಸಿದ ಅಧಿಸೂಚನೆ ಒಂದು ವರ್ಷ ಸಮೀಪಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸಿಲ್ಲ.

ರೋಗಿಗಳ ಪರದಾಟ:

ಬೆಂಗಳೂರಿನ ಕೆ.ಸಿ.ಜನರಲ್, ವಿಕ್ಟೋರಿಯಾ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿಗಳ ಸುಮಾರು ಎರಡು ಸಾವಿರ ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಮತ್ತು ಹತ್ತಿ ಇಲ್ಲದೆ ಸಾರ್ವಜನಿಕರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.ಒಂದು ವೇಳೆ ಗಾಯಾಳುಗಳು ಇಲ್ಲವೇ, ಗರ್ಭಿಣಿಯರು ಬಂದರೆ ಖಾಸಗಿಯವರಿಂದ ಹಣ ಕೊಟ್ಟು ಖರೀದಿ ಮಾಡಿಕೊಂಡು ಬರಬೇಕು. ಖುದ್ದು ವೈದ್ಯರೇ ಇದನ್ನು ಮುಂಗಡವಾಗಿಯೇ ಸೂಚಿಸುತ್ತಾರೆ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ನೀಡಬೇಕೆಂಬ ಸರ್ಕಾರದ ಸದುದ್ದೇಶ ಅದ್ಯಾಕೋ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಡ್ಡದಾರಿ ಹಿಡಿಯುತ್ತಿದೆಯೇನೋ ಎಂಬ ಅನುಮಾನ ವ್ಯಕ್ತವಾಗುತ್ತದೆ.

ಇವರೇ ಸೂತ್ರಧಾರರು:

ಅಂದಹಾಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಈ ಅಧ್ವಾನಗಳಿಗೆ ಅನಿವಾಸಿ ಭಾರತೀಯನೆಂದು ಬಿಂಬಿಸಿಕೊಂಡಿರುವ ಮಧ್ಯವರ್ತಿ ಮೂಲ ಕಾರಣಕರ್ತ ಎಂಬ ಮಾತುಗಳು ಇಲಾಖೆಯಲ್ಲಿ ಕೇಳಿ ಬರುತ್ತಿವೆ. ಮೂಲತಃ ಪಾಕಿಸ್ತಾನದವನಾದ ಈತ ಕಳೆದ ಹಲವು ವರ್ಷಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ, ಉಪಕರಣಗಳು, ಬ್ಯಾಂಡೇಜ್, ಹತ್ತಿ ಸೇರಿದಂತೆ ಎಲ್ಲವನ್ನೂ ಪೂರೈಕೆ ಮಾಡುವ ಮಧ್ಯವರ್ತಿಯಾಗಿದ್ದಾನೆ. ರಾಷ್ಟ್ರಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ಸಂಪರ್ಕ ಸಾಧಿಸಿರುವ ಈತ ಭಾರೀ ಪ್ರಭಾವಿ ವ್ಯಕ್ತಿ. ಯಾರೇ ಸಚಿವರು ಬರಲಿ, ಇಲ್ಲವೇ ಎಷ್ಟೇ ಧಕ್ಷ ಅಧಿಕಾರಿಗಳು ಬರಲಿ ತನ್ನ ಥಳುಕಿನ ಮಾತಿನಿಂದಲೇ ಬುಟ್ಟಿಗೆ ಹಾಕಿಕೊಳ್ಳುವ ಚಾಣಾಕ್ಷ.

ಇಲಾಖೆಯಲ್ಲಿ ಎಷ್ಟೇ ಸುಧಾರಣೆ ತರಲು ಅಧಿಕಾರಿಗಳು ಮುಂದಾದರೂ ಅವರಿಗೆ ನೆತ್ತಿ ಸವರಿ ತನಗೆ ಬೇಕಾದವರನ್ನೇ ಟೆಂಡರ್‍ನಲ್ಲಿ ಭಾಗವಹಿಸುವಂತೆ ಮಾಡುವುದು. ಇಲ್ಲವೇ ನಿರ್ದಿಷ್ಟ ಕಂಪೆನಿಗಳಿಗೆ ಖರೀದಿ ಮಾಡಲು ಈತ ಸೂಚಿಸುತ್ತಾನೆ. ಡ್ರಗ್ ಮಾಫಿಯಾದಲ್ಲಿ ಅತ್ಯಂತ ಪಳಗಿರುವ ಆಸಾಮಿಯಾಗಿರುವ ಈತನನ್ನು ನಿಯಂತ್ರಿಸದಿದ್ದರೆ ಇಲಾಖೆಗೆ ಕೆಟ್ಟ ಹೆಸರು ಎಂದು ಅಧಿಕಾರಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ. ಇಲಾಖೆಯನ್ನು ಸಾಕಷ್ಟು ಸುಧಾರಣೆ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಸಚಿವ ರಮೇಶ್‍ಕುಮಾರ್ ಹಾಗೂ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈತನ ಅಟಾಟೋಪಗಳಿಗೆ ಕಡಿವಾಣ ಹಾಕದಿದ್ದರೆ ಇವರಿಗೂ ಕೆಟ್ಟ ಹೆಸರು ತಪ್ಪಿದ್ದಲ್ಲ.

ಭದ್ರತಾ ಠೇವಣಿ ಕಟ್ಟಿದವರ ಗೋಳು:

ಇನ್ನು ಟೆಂಡರ್‍ನಲ್ಲಿ ಭಾಗವಹಿಸಿ ಭದ್ರತಾ ಠೇವಣಿ ಕಟ್ಟಿದವರ ಪರಿಸ್ಥಿತಿಯಂತೂ ಹೇಳತೀರದಾಗಿದೆ. 21 ಕೋಟಿ ಟೆಂಡರ್‍ಗೆ ಠೇವಣಿಯಾಗಿ 2.10ಕೋಟಿ ಹಣವನ್ನು ಕಟ್ಟಿದವರು ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ. ಸಾಲಾಸೋಲ ಮಾಡಿ ಹಣ ಕಟ್ಟಿದೆವು. ನಮಗೆ ಟೆಂಡರೂ ಸಿಗಲಿಲ್ಲ. ಕೊಟ್ಟಿರುವ ಹಣವೂ ಬಂದಿಲ್ಲ. ಪ್ರತಿ ತಿಂಗಳು ಬಡ್ಡಿ ಕಟ್ಟದಿದ್ದರೆ ಸಾಲ ಕೊಟ್ಟವರು ಸುಮ್ಮನಿರುವುದಿಲ್ಲ. ಟೆಂಡರ್ ಸಿಕ್ಕಿದ್ದರೆ ನಮಗೆ ವಹಿವಾಟು ನಡೆಸಲು ಅನುಕೂಲವಾಗುತ್ತಿತ್ತು. ದೊಡ್ಡ ಮೊತ್ತವನ್ನು ಕಟ್ಟಿ ನಾವು ದಿಕ್ಕು ತೋಚದಂತಾಗಿದ್ದೇವೆ ಎಂದು ಹೆಸರು ಹೇಳಲಿಚ್ಛಸದ ಪ್ರಮುಖರೊಬ್ಬರು ಅಳಲು ತೋಡಿಕೊಂಡಿದ್ದಾರೆ.

Facebook Comments

Sri Raghav

Admin