ಗೌರಿ ಹಂತಕರಿಗಾಗಿ ತಲಾಶ್ : ಮುಂಬೈ-ಧಾರವಾಡಕ್ಕೆ ಎಸ್‍ಐಟಿ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--0141

ಬೆಂಗಳೂರು, ಸೆ.12- ಪತ್ರಕರ್ತೆ ಗೌರಿಲಂಕೇಶ್ ಅವರನ್ನು ಕೊಲೆ ಮಾಡಿ ಪರಾರಿ ಯಾಗಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಅಧಿಕಾರಿಗಳು ಮುಂಬೈ ಹಾಗೂ ಧಾರವಾಡಕ್ಕೆ ತೆರಳಿದ್ದಾರೆ. ಈ ಹಿಂದೆ ಮಹಾರಾಷ್ಟ್ರ ಮತ್ತು ಧಾರವಾಡದಲ್ಲಿ ಹತ್ಯೆಯಾದ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್, ಗೋವಿಂದ್ ಪಾನ್ಸರೆ ಹಾಗೂ ಸಾಹಿತಿ ಎಂ.ಎಂ.ಕಲಬುರ್ಗಿ ಪ್ರಕರಣಕ್ಕೂ ಗೌರಿಲಂಕೇಶ್ ಕೊಲೆಗೂ ಸಾಮ್ಯತೆ ಕಂಡು ಬರುತ್ತಿ ರುವುದರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖಾ ತಂಡಗಳು ಹೊರ ರಾಜ್ಯಕ್ಕೆ ತೆರಳಿವೆ.

ಮುಂಬೈಗೆ ತೆರಳಿರುವ ಒಂದು ತಂಡ ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಗೋವಿಂದ್ ಪಾನ್ಸರೆ ಮತ್ತು ನರೇಂದ್ರ ಧಾಬೋಲ್ಕರ್ ಅವರನ್ನು ಯಾವ ರೀತಿ ಹತ್ಯೆ ಮಾಡಲಾಗಿತ್ತು, ಆರೋಪಿಗಳು ಬಳಸಿದ ಪಿಸ್ತೂಲು ಮಾವ ಮಾದರಿಯದ್ದು, ಕೃತ್ಯ ನಡೆಸಿದ ಸಂಚು, ಮೃತ ದೇಹದೊಳಗೆ ಹೊಕ್ಕಿದ್ದ ಗುಂಡು, ಯಾವ ಸಮಯದಲ್ಲಿ ಹತ್ಯೆ ಮಾಡಿದ್ದರು ಎಂಬುದು ಸೇರಿದಂತೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಬುಧವಾರ ರಾತ್ರಿ ಬೆಂಗಳೂರಿನ ಆರ್. ಆರ್.ನಗರ ತಮ್ಮ ನಿವಾಸದ ಬಳಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಹಣೆ ಮತ್ತು ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ಬಳಿಕ ತನಿಖೆ ಕೈಗೊಂಡಿರುವ ಅಧಿಕಾರಿ ಗಳಿಗೆ ಪ್ರಕರಣ ತೀವ್ರಜಟಿಲವಾಗಿ ಪರಿಣಮಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್) ಅಧಿಕಾರಿಗಳು ನೀಡಿರುವ ಪ್ರಾಥಮಿಕ ವರದಿಯಲ್ಲಿ ಧಾಬೋಲ್ಕರ್, ಪಾನ್ಸರೆ, ಕಲಬುರ್ಗಿ ಹತ್ಯೆ ಪ್ರಕರಣಕ್ಕೂ ಗೌರಿ ಪ್ರಕರಣದಲ್ಲಿ ಮೇಲ್ನೊಟಕ್ಕೆ ಸಾಮ್ಯತೆ ಕಂಡು ಬಂದಿದೆ ಎಂಬುದು ತಿಳಿದು ಬಂದಿದೆ.

ಇದರ ಜಾಡು ಹಿಡಿದಿರುವ ಎಸ್‍ಐಟಿ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್ ಅವರು ಈ ಹಿಂದೆ ಇಂತಹ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿರುವ ಅನುಭವಿ. ತನಿಖಾ ತಂಡವನ್ನು ಮುಂಬೈಗೆ ಕಳುಹಿಸಿದ್ದಾರೆ. ಇದೇ ರೀತಿ ಧಾರವಾಡಕ್ಕೂ ತೆರಳಿರುವ ಮತ್ತೊಂದು ತಂಡ ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ, ಕಲಬುರ್ಗಿ ಅವರ ಕುಟುಂಬದ ಸದಸ್ಯರು, ಒಡನಾಡಿಗಳು ಹಾಗೂ ಆಪ್ತರನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತಿದೆ. ಆರೋಪಿಗಳು ಯಾವ ಸಂದರ್ಭದಲ್ಲಿ ಗುಂಡು ಹೊಡೆದಿದ್ದರು, ಹತ್ಯೆ ಮಾಡಲು ಅನುಸರಿಸಿದ ತಂತ್ರ, ಎಫ್‍ಎಸ್‍ಎಲ್ ವರದಿ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆಯನ್ನು ಚುರುಕು ಗೊಳಿಸಿದೆ. ಇದರ ನಡುವೆ ಮತ್ತೊಂದು ತನಿಖಾ ತಂಡ ಬೆಂಗಳೂರಿನ ಗೌರಿ ನಿವಾಸದ ಬಳಿ ಇಂದೂ ಕೂಡ ತನಿಖೆ ಮುಂದುವರೆಸಿದೆ. ಗೌರಿ ಅವರ ಪತ್ರಿಕಾ ಕಚೇರಿಗೆ ತೆರಳಿರುವ ಮತ್ತೊಂದು ತಂಡ, ಕಳೆದ ಮೂರು ವರ್ಷಗಳಿಂದ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗಳು, ದೂರವಾಣಿ ಕರೆಗಳು, ಫೇಸ್‍ಬುಕ್, ಟ್ವೀಟರ್ ಸೇರಿದಂತೆ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದೆ. ಘಟನೆ ನಡೆದು ಈಗಾಗಲೇ ವಾರ ಕಳೆದಿದ್ದು, ಪ್ರಕರಣ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಪ್ರಕರಣವನ್ನು ಭೇದಿಸಲು ಎಸ್‍ಐಟಿ ಹರಸಾಹಸ ಮಾಡುತ್ತಿದೆ.

Facebook Comments

Sri Raghav

Admin