ದಕ್ಷಿಣ ಭಾಗೀರಥಿ ಕಾವೇರಿ ಮಹಾಪುಷ್ಕರ ಮೇಳ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Kveri

ಶ್ರೀರಂಗಪಟ್ಟಣ, ಸೆ.12- ಶ್ರೀರಂಗಪಟ್ಟಣದ ಪ್ರಸಿದ್ದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಸ್ನಾನ ಘಟ್ಟದಲ್ಲಿ ಇಂದಿನಿಂದ (ಸ್ವಸ್ತಿಶ್ರೀ ಹೇವಿಳಂಬಿ ನಾಮ ಸಂವತ್ಸರದ ಭಾದ್ರಪದ ಬಹುಳ ಸಪ್ತಮಿ)ಸೆ.24(ಅಶ್ವಯುಜ ಶುದ್ಧ ಚತುರ್ಥಿ)ವರೆಗೆ ಕಾವೇರಿ ಪುಷ್ಕರ ನಡೆಯಲಿದೆ. ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಡಿಟಿಎಸ್ ಪ್ರತಿಷ್ಠಾನ, ಅಭಿನವ ಭಾರತ, ಸಿಂಹಭೂಮಿ ಸಹಯೋಗದಲ್ಲಿ 12 ದಿನಗಳ ಕಾಲ ಈ ಮಹಾಮೇಳ ಜರುಗಲಿದೆ.

ಲೋಕ ಕಲ್ಯಾಣಾರ್ಥ, ಮಳೆಬೆಳೆ, ಅನ್ನದಾತ ಅಭ್ಯುದಯ, ಕಾವೇರಿ ನದಿ ರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಜನ ಜಾಗೃತಿಗಾಗಿ ನಡೆಸಲಾಗುತ್ತಿರುವ ಈ ಮಹಾಮೇಳದಲ್ಲಿ ರಾಜ್ಯದ ಎಲ್ಲ ಮಠಾಧೀಶರು, ಸಾಧುಸಂತರು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆ, ರೈತ ಸಂಘಟನೆ, ಸಾಮಾಜಿಕ ಸಂಘಸಂಸ್ಥೆಗಳು, ಹೊರರಾಜ್ಯಗಳವರು, ವಿವಿಧ ರಾಜಕೀಯ ನಾಯಕರು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕಾವೇರಿ ಪುಷ್ಕರ:

ಕಾವೇರಿ ಪುಷ್ಕರವೆಂದರೆ ಪುಣ್ಯಕಾಲ. ಮೇಷಾದಿ 12 ರಾಶಿಗಳಲ್ಲಿ ಗುರು ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡುವ ಪುಣ್ಯಕಾಲವನ್ನು ಕಾವೇರಿ ಪುಷ್ಕರ ಎಂದು ಹೇಳಲಾಗುತ್ತದೆ.  ಈ ಸಂದರ್ಭದಲ್ಲಿ ದೇವತೆಗಳು, ಋಷಿಮುನಿಗಳು, ಮಹರ್ಷಿಗಳು, ಪುಷ್ಕರ ಸ್ನಾನಕ್ಕಾಗಿ ಭೂಲೋಕಕ್ಕೆ ಆಗಮಿಸುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. 64 ಕೋಟಿ ತೀರ್ಥಗಳು ಕಾವೇರಿಯಲ್ಲಿ ಮೇಳೈಸಿ ಜೀವಿಗಳನ್ನು ಉದ್ಧರಿಸುತ್ತವೆ ಎಂದು ಅಗ್ನಿಪುರಾಣದಲ್ಲಿ ಉಲ್ಲೇಖವಾಗಿದೆ.
ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಶೈವ, ಶಾಕ್ತೇಯ, ಗಾಣಪತ್ಯ ಆದಿತ್ಯ ವಿಷ್ಣು ಮುಂತಾದ 14 ಅಖಾಡಗಳ ಗುರುಗಳು, ಸತ್ಪುರುಷರು ಲೋಕ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿ ಪುಣ್ಯಸ್ನಾನ ಮಾಡುತ್ತಾರೆ. ಈ ಎಲ್ಲ ತಪಸ್ವಿಗಳನ್ನು ದರ್ಶಿಸುವ ಪುಣ್ಯಕಾಲದ ಸ್ನಾನ, ತರ್ಪಣ, ಅಘ್ರ್ಯಗಳೆಲ್ಲವೂ ಮೋಕ್ಷದಾಯಕವಾಗಿದ್ದರಿಂದ ಪುಷ್ಕರಕ್ಕೆ ಮಾನ್ಯತೆ ನೀಡಲಾಗಿದೆ.

ನೆರೆಯ ಆಂಧ್ರ ಮತ್ತು ಉತ್ತರಭಾರತದಲ್ಲಿ ಪುಷ್ಕರ ಮೇಳ ಹೆಚ್ಚು ಪ್ರಸಿದ್ದವಾಗಿದೆ. ಅದೇ ರೀತಿ ಕಾವೇರಿ ಪುಷ್ಕರವೆಂದೇ ಜಗಜ್ಜಾಹೀರು ಮಾಡಲು, ಕಾವೇರಿ ಜಲಯಜ್ಞ ಎಂದೇ ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ. ಈ ವೇಳೆ ಸಂಕಲ್ಪ ಸ್ನಾನ, ಜಪ, ಪೂಜೆ,ಯಾಗ, ದಾನ, ಪಿತೃ ತರ್ಪಣ, ಪಿಂಡ ಪ್ರದಾನ, ಶ್ರಾದ್ಧ ಸ್ವಯಂ ಪಾಕ ದಾನ, ಗೋದಾನ, ದಶದಾನಗಳು ಮಹಾಪುಣ್ಯವೆಂದು ಶಾಸ್ತ್ರಗಳು ಹೇಳುತ್ತವೆ. ವಿಶೇಷವಾಗಿ ಪುಣ್ಯ ಕ್ಷೇತ್ರಗಳಲ್ಲಿ ನದಿ ಸ್ನಾನಾದಿ ಕಾರ್ಯಗಳನ್ನು ಮಾಡುವುದು ಸೂಕ್ತ ಎಂಬುದು ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.  ಈ ಸಂದರ್ಭದಲ್ಲಿ ಸೌರ ಮಂಡಲದ ಈ ಬದಲಾವಣೆ ಯೊಂದಿಗೆ ಪ್ರಾಕೃತಿಕ ಶಕ್ತಿ ಮೇಳೈಸಿ ನದಿಗೆ ವಿಶೇಷ ಶಕ್ತಿ ಸಂಚಯನವಾಗುತ್ತದೆ. ಹಾಗಾಗಿ ಈ ಸ್ನಾನದಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.

ಕಾರ್ಯಕ್ರಮಗಳ ವಿವರ

* ಕಾವೇರಿ ನದಿಗೆ ವಿಶೇಷ ಆರತಿ, ಬಾಗಿನ ಸಮರ್ಪಣೆ
* ತಲಕಾವೇರಿಯಿಂದ ಪೂರ್ಣಕುಂಭದ ಯಾತ್ರೆ
* ನಿತ್ಯ ಆರಾಧನೆ, ಹೋಮ-ಹವನಗಳ ಪೂಜೆ
* ವಿಶೇಷ ಮೆರವಣಿಗೆ ಮೂಲಕ ಮಠಾಧೀಶರು, ಸಾಧುಸಂತರಿಗೆ ಸತ್ಕಾರ
* ಮೈಸೂರು ರಾಜವಂಶಸ್ಥರಿಗೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ಕುಟುಂಬದವರಿಗೆ ಗೌರವ ಸಲ್ಲಿಕೆ
* ಚಕ್ರವರ್ತಿ ಸೂಲೆಬೆಲೆಯಿಂದ ವೈಚಾರಿಕ ಚಿಂತನೆ
* ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮತ್ತು ಸಂಗಡಿಗರಿಂದ ಹರಟೆ
* ಸಂಗೀತ, ನಾಟಕ, ನೃತ್ಯ, ಜಾನಪದ ಉತ್ಸವ, ಹರಟೆ, ಹಾಸ್ಯೋತ್ಸವ, ವಿಚಾರ ಸಂಕಿರಣಗಳು, ಯುವ ಮೇಳ, ವಿದ್ಯಾರ್ಥಿ ಮೇಳ.
* ರಾಜ್ಯದ ಹಕ್ಕೊತ್ತಾಯದ ಜನಾಭಿಪ್ರಾಯ ಸಂಗ್ರಹ-ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಕೆ
* ಪ್ರಾತಃಕಾಲ 5.30ರಿಂದ 11ರ ವರೆಗೆ ಸ್ನಾನ ಸಂಕಲ್ಪ
* ಬೆಳಗ್ಗೆ 11.30ರಿಂದ ಮಧ್ಯಾಹ್ನ 3ವರೆಗೆ ತರ್ಪಣಾದಿ ಸಂಕಲ್ಪ ನಡೆಯಲಿದೆ.

Facebook Comments

Sri Raghav

Admin