ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಕೆ : ಸಂಪತ್ ಮೇಯರ್, ನೇತ್ರ ಉಪಮೇಯರ್..?

ಈ ಸುದ್ದಿಯನ್ನು ಶೇರ್ ಮಾಡಿ

BBMP-Mayor--01

ಬೆಂಗಳೂರು, ಸೆ.12- ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಕೆ ಅಬಾಧಿತವಾದಂತಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೊಂದಿಗೆ ನಡೆದ ಮಾತುಕತೆ ಸಫಲವಾದಂತಿದ್ದು, ಮೈತ್ರಿ ಮುಂದುವರೆಯಲಿದೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆದರೆ ಕಾಂಗ್ರೆಸ್‍ಗೆ ಮೇಯರ್, ಜೆಡಿಎಸ್‍ಗೆ ಉಪಮೇಯರ್ ಪಟ್ಟ ದಕ್ಕುತ್ತದೆ. ಪರಿಶಿಷ್ಟ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಾಗಿರುವ ಹಿನ್ನೆಲೆಯಲ್ಲಿ ದೇವರ ಜೀವನಹಳ್ಳಿ ವಾರ್ಡ್‍ನ ಕಾಂಗ್ರೆಸ್ ಸದಸ್ಯ ಆರ್. ಸಂಪತ್‍ರಾಜ್ ಅಥವಾ ಸುಭಾಷ್‍ನಗರ ವಾರ್ಡ್‍ನ ಗೋವಿಂದರಾಜ್ ಇಬ್ಬರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ಸಿಗುವ ಸಾಧ್ಯತೆ ಇದೆ.

ಅದೇ ರೀತಿ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಹಾಲಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ನೇತ್ರಾ ನಾರಾಯಣ್ ಅವರಿಗೆ ಒಲಿಯುವ ಸಾಧ್ಯತೆ ಇದೆ. ಈವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡಿತ್ತು. ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಸ್ಥಾಯಿ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸಿದ ಆರೋಪ ಬಲವಾಗಿ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಮೈತ್ರಿಯ ಅಗತ್ಯತೆ ಏನಿದೆ ಎಂದು ಜೆಡಿಎಸ್ ಪ್ರಶ್ನಿಸಿತ್ತು. ಅಲ್ಲದೆ ಇತ್ತೀಚೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜತೆ ಜೆಡಿಎಸ್ ಸದಸ್ಯರು ಸಭೆ ನಡೆಸಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಕಡಿದುಕೊಳ್ಳುವ ಮಾತನ್ನಾಡಿದ್ದರು. ಈ ನಡುವೆ ಮೇಯರ್ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಜೆಡಿಎಸ್‍ನ ಬೆಳವಣಿಗೆಗಳಿಂದ ಎಚ್ಚೆತ್ತ ಕಾಂಗ್ರೆಸ್ ಮುಖಂಡರು ಕೂಡಲೇ ಪಕ್ಷದ ಮುಖಂಡರೊಂದಿಗೆ ಮಾತುಕತೆ ಮುಂದಾದರು.ಬೆಂಗಳೂರು ನಗರದ ನಾಯಕರ ನಾಡಿಮಿಡಿತವನ್ನು ಅರಿತಿರುವ ರಾಮಲಿಂಗಾರೆಡ್ಡಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜವಾಬ್ದಾರಿ ವಹಿಸಿದ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿಯವರು ಇಂದು ಕೆಪಿಸಿಸಿ ಖಜಾಂಚಿ ಕೃಷ್ಣರಾಜುರೆಡ್ಡಿ ಅವರೊಂದಿಗೆ ದೇವೇಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬೆಂಬಲಕ್ಕೆ ಗೌಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

14 ಸದಸ್ಯ ಬಲವಿರುವ ಜೆಡಿಎಸ್‍ಗೆ ಉಪಮೇಯರ್ ಪಟ್ಟ ಹಾಗೂ ಮೂರು ಸ್ಥಾಯಿ ಸಮಿತಿ ನೀಡಲಾಗಿತ್ತು. ಈ ಬಾರಿ ಸ್ಥಾಯಿ ಸಮಿತಿ ಒಂದು ಅಧ್ಯಕ್ಷ ಸ್ಥಾನವನ್ನು ಹೆಚ್ಚಿಗೆ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಇದಕ್ಕೆ ಕಾಂಗ್ರೆಸ್ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದಲ್ಲದೆ ಮೈಸೂರು ಮಹಾನಗರ ಪಾಲಿಕೆಯ ಮೀಸಲಾತಿ ಬದಲಾವಣೆ ಮಾಡಿಕೊಡಬೇಕೆಂಬ ಬೇಡಿಕೆಯನ್ನೂ ಸರ್ಕಾರದ ಮುಂದಿಟ್ಟಿದ್ದಾರೆ. ಇದನ್ನು ಪರಿಗಣಿಸುವುದಾಗಿ ಜೆಡಿಎಸ್‍ನವರಿಗೆ ಆಶ್ವಾಸನೆ ನೀಡಲಾಗಿದೆ.

ಹೀಗಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಬಿಎಂಪಿಯಲ್ಲಿ ಮುಂದುವರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅನುದಾನ ತಾರತಮ್ಯ ಮಾಡದಂತೆ ಆರಂಭದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈತ್ರಿ ಮುಂದುವರೆಸಲು ಅನುಮತಿಯನ್ನು ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.

ಗೆದ್ದೇ ಗೆಲ್ಲುತ್ತೇವೆ ಕಾದುನೋಡಿ:

ಇತ್ತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆಯುವ ಸ್ಪಷ್ಟ ಲಕ್ಷಣಗಳು ಕಂಡು ಬರುತ್ತಿರುವ ಬೆನ್ನಲ್ಲೇ ಅತ್ತ ಬಿಜೆಪಿಯವರು ನಾವೇ ಈ ಬಾರಿ ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆಗೇರುವುದು ಕಾದು ನೋಡಿ ಎಂದು ಹೇಳುತ್ತಿದ್ದಾರೆ. 101 ಸದಸ್ಯ ಬಲವಿರುವ ನಮಗೆ ಯಾರ ಬೆಂಬಲ ಬೇಕಾಗಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ. ಈ ವಿಶ್ವಾಸ ನಮಗಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ. ವಿಳಾಸ ಬದಲಾವಣೆ ಮತ್ತು ಪ್ರಯಾಣ ಭತ್ಯೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ವಿಧಾನಪರಿಷತ್ ಸದಸ್ಯರ ಮೇಲೆ ದೂರಿದೆ.

ನಾಲ್ವರು ಈಗಾಗಲೇ ವಿಳಾಸ ವಾಪಸ್ ಪಡೆದಿದ್ದಾರೆ. ರಘುಆಚಾರ್, ಅಪ್ಪಾಜಿ ನಾಡಗೌಡ, ಎಸ್.ರವಿ, ಆರ್.ಮನೋಹರ್ ಅವರ ವಿಳಾಸ ಇಲ್ಲೇ ಇದ್ದು, ಅವರನ್ನೂ ಕೂಡ ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದು ಆಯೋಗ ನಿರ್ದೇಶಿಸಲು ಒತ್ತಾಯಿಸಿ ಹೋರಾಟ ಮಾಡುತ್ತೇವೆ. ಒಟ್ಟಾರೆ ಈ ಬಾರಿ ಗೆಲುವು ನಮ್ಮದೇ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin