ಮಾರಿ ಮಳೆಯಿಂದ ತತ್ತರಿಸಿದ್ದ ಉದ್ಯಾನನಗರಿ ಸಹಜ ಸ್ಥಿತಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

Road--01

ಬೆಂಗಳೂರು, ಸೆ.12- ಉದ್ಯಾನನಗರಿಯಲ್ಲಿ ಎಡಬಿಡದೆ ಸುರಿಯುತ್ತಿದ್ದ ವರುಣ ತುಸು ಬಿಡುವು ಕೊಟ್ಟಿದ್ದು, ಪ್ರವಾಹ ಪೀಡಿತ ಪ್ರದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಉದ್ಯಾನನಗರಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಕೆಲವು ಕಡೆ ಕೆರೆಗಳು ಒಡೆದು ಎಲ್ಲೆಲ್ಲೂ ನೀರು ತುಂಬಿ ತುಳುಕುತ್ತಿತ್ತು.  ನಗರದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೆಂಗೇರಿ, ಬನ್ನೇರುಘಟ್ಟ, ಕೋಡಿಚಿಕ್ಕನಹಳ್ಳಿ, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು, ದವಸ-ಧಾನ್ಯಗಳು ನೀರಿನಲ್ಲಿ ನೆಂದು ಹೋಗಿದ್ದವು.

ಇನ್ನು ಕುಟುಂಬ ಸದಸ್ಯರು ನಿದ್ದೆಯಿಲ್ಲದೆ ನೀರನ್ನು ಹೊರಹಾಕುವ ಕೆಲಸದಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂದಿದ್ದು, ನಿನ್ನೆ ಮತ್ತು ಇಂದು ಮಳೆರಾಯ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಗಳನ್ನು ಶುಚಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು.

ಗುಂಡಿ ಬಿದ್ದ ರಸ್ತೆಗಳು:

ಮಳೆಯಿಂದಾಗಿ ಶಿವಾಜಿನಗರ, ಹಲಸೂರು, ಮೈಸೂರು ರಸ್ತೆ, ಕೆಂಗೇರಿ, ಪ್ರಕಾಶನಗರ, ಕಮಲಾನಗರ, ಬಸವೇಶ್ವರನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಡಾಂಬರು ಕಿತ್ತುಹೋಗಿದ್ದು, ಆಳುದ್ದದ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಗುಂಡಿಗಳಿಂದ ಹೈರಾಣರಾಗಿದ್ದಾರೆ.  ಮಳೆಯಿಂದಾಗಿ ಉಂಟಾದ ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆಗಳು ಸಹ ನಗರದಲ್ಲಿ ಅಲ್ಲಲ್ಲಿ ನಡೆದಿವೆ. ಇನ್ನು ಭಾರೀ ಗಾತ್ರದ ಸರಕು ವಾಹನಗಳು ಗುಂಡಿಯಲ್ಲಿ ಇಳಿದು ಮೇಲೆ ಬರಲಾರದೆ ಅಲ್ಲಿಯೇ ನಿಂತ ದೃಶ್ಯಗಳು ಸಹ ಕಂಡುಬಂದವು. ಒಟ್ಟಿನಲ್ಲಿ ಮಳೆಯಿಂದ ಚಿತ್ ಆಗಿದ್ದ ಉದ್ಯಾನನಗರಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಾಲಿಕೆ ತ್ವರಿತಗತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತಾಗಲಿ.

Facebook Comments

Sri Raghav

Admin