ಅಹಮದಾಬಾದ್‍ನಿಂದ ಮುಂಬೈ ಹೈ-ಸ್ಪೀಡ್ ಬುಲೆಟ್ ರೈಲಿಗೆ ಶಿಲಾನ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಅಹಮದಾಬಾದ್, ಸೆ.13- ದೇಶದ ಮಹತ್ವಾಕಾಂಕ್ಷಿ ಮತ್ತು ಪ್ರಥಮ ಹೈ-ಸ್ಪೀಡ್ ಬುಲೆಟ್ ರೈಲ್ವೆ ಯೋಜನೆಗೆ ಇಂದು ಶಿಲಾನ್ಯಾಸ ನೆರವೇರಿಸಲು ಗುಜರಾತ್‍ನ ಅಹಮದಾಬಾದ್‍ನಲ್ಲಿ ವೇದಿಕೆ ಸಜ್ಜಾಗಿದೆ. ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಜಪಾನ್ ಪ್ರಧಾನಿ ಶಿನ್‍ಝೋ ಅಬೆ 1.1 ಲಕ್ಷ ಕೋಟಿ ರೂ. ವೆಚ್ಚದ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ದೇಶದ 75ನೇ ಸ್ವಾತಂತ್ರೋತ್ಸವದ ದಿನದಂದೇ ಅಂದರೆ 2022ರ ಆಗಸ್ಟ್ 15ರಂದು ಬುಲೆಟ್ ರೈಲು ಆರಂಭವಾಗಲಿದೆ.

 

ತಮ್ಮ ಪತ್ನಿ ಸಮೇತ ನಿನ್ನೆ ರಾತ್ರಿ ಭಾರತಕ್ಕೆ ಆಗಮಿಸಿರುವ ಅಬೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಹಮದಾಬಾದ್‍ನಲ್ಲಿ ಇಂದು ರೋಡ್ ಶೋನಲ್ಲಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು ಹಾಕುವ ದೊಡ್ಡ ಮಟ್ಟದ ಕಾರ್ಯಕ್ರಮವೂ ನೆರೆವೇರಲಿದೆ.
ಮುಂಬೈ-ಅಹಮದಾಬಾದ್ ಮಾರ್ಗದ 508 ಕಿಮೀ ಮಾರ್ಗದ ಈ ಯೋಜನೆ ಹತ್ತು-ಹಲವು ವಿಶೇಷತೆಗಳನ್ನು ಹೊಂದಿದೆ. 468 ಕಿಮೀ ಎತ್ತರಿಸಿದ ಮಾರ್ಗದಲ್ಲಿ ಹಾಗೂ 27 ಕಿಮೀ ಸುರಂಗ ಮಾರ್ಗದಲ್ಲಿ ಅತಿ ವೇಗದ ರೈಲು ಚಲಿಸಲಿದೆ. 7 ಕಿಮೀ ಸಮುದ್ರದ ಅಡಿಯ ಸುರಂಗ ಮಾರ್ಗದ ಪ್ರಯಾಣ ರೋಮಾಂಚನ ಉಂಟು ಮಾಡಲಿದೆ.

Modi--03

1.1 ಲಕ್ಷ ಕೋಟಿ ಮೊತ್ತದ ಈ ಯೋಜನೆಗೆ ಜಪಾನ್ ಸರ್ಕಾರ 88 ಸಾವಿರ ಕೋಟಿ ರೂ. ಸಾಲ ನೆರವು ನೀಡಲಿದೆ. 15 ವರ್ಷ ಸಾಲ ಮರುಪಾವತಿ ವಿನಾಯಿತಿ ಅವಧಿ ಇರುತ್ತದೆ. ಜಪಾನ್‍ನಿಂದ ಈ ಯೋಜನೆಗಾಗಿ ಒಟ್ಟು 24 ರೈಲುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. 10 ಬೋಗಿಗಳ ರೈಲುಗಳು 698 ಆಸನಗಳು ಮತ್ತು 55 ಐಷಾರಾಮಿ ಸೀಟುಗಳನ್ನು ಹೊಂದಿರುತ್ತದೆ. ಪ್ರತಿ ದಿನ 70 ಟ್ರಿಪ್‍ಗಳಲ್ಲಿ 36,000 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಹೈಸ್ಪೀಡ್ ರೈಲಿನ ಗರಿಷ್ಠ ವೇಗ 320 ಕಿ.ಮೀ. ಒಟ್ಟು 12 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಮುಂಬೈನಿಂದ ಅಹಮದಾಬಾದ್‍ಗೆ ಕೇವಲ 2 ಗಂಟೆ 7 ನಿಮಿಷಗಳಲ್ಲಿ ತಲುಪಲಿದೆ.

Modi--04

Facebook Comments

Sri Raghav

Admin