ಕೆಂಪಯ್ಯನವರನ್ನು ಮೂಲೆಗುಂಪು ಮಾಡಿದರೆ ರಾಮಲಿಂಗರೆಡ್ಡಿ..?

Kempaiah-Ramalingareddy--01

ಬೆಂಗಳೂರು, ಸೆ.13- ರಾಜ್ಯದ ಗೃಹ ಸಚಿವರಾಗಿ ರಾಮಲಿಂಗರೆಡ್ಡಿ ಅಧಿಕಾರ ವಹಿಸಿಕೊಂಡ ದಿನದಿಂದ ಗೃಹ ಇಲಾಖೆಯಲ್ಲಿ ಎರಡು ಶಕ್ತಿಕೇಂದ್ರಗಳು ನಿರ್ಮಾಣವಾಗಿವೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಎರಡನೇ ಶಕ್ತಿ ಕೇಂದ್ರ ಹಂತ ಹಂತವಾಗಿ ದುರ್ಬಲವಾಗುತ್ತಿದೆ ಎನ್ನಲಾಗುತ್ತಿದೆ.
ಗೃಹ ಸಚಿವ ರಾಮಲಿಂಗರೆಡ್ಡಿ ಒಂದು ಶಕ್ತಿ ಕೇಂದ್ರವಾಗಿದ್ದರೆ, ಗೃಹ ಇಲಾಖೆ ಸಲಹೆಗಾರ ಹಾಗೂ ಸಿಎಂ ಸಿದ್ದರಾಮಯ್ಯರ ಆಪ್ತ ಕೆಂಪಯ್ಯರದ್ದು ಇನ್ನೊಂದು ಶಕ್ತಿಕೇಂದ್ರವಾಗಿತ್ತು. ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕೆಂಪಯ್ಯರಿಗೆ ರಾಮಲಿಂಗರೆಡ್ಡಿ ಮಾತಿನ ಮೂಲಕ ಚುರುಕು ಮುಟ್ಟಿಸಿದ್ದರು. ಮಾರನೇ ದಿನವೇ ಸಿಎಂ ಬಳಿ ತೆರಳಿ ತಮಗೆ ಸಲಹೆಗಾರರ ಅಗತ್ಯವಿಲ್ಲ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದ್ದರು ಎನ್ನಲಾಗಿತ್ತು.

ಆದರೆ ಇದೆಲ್ಲಾ ಸುಳ್ಳು ಎಂದು ಕೆಲ ಸಂದರ್ಭದಲ್ಲಿ ರಾಮಲಿಂಗರೆಡ್ಡಿ ಹೇಳಿಕೊಂಡಿದ್ದರೂ, ಇತ್ತೀಚಿನ ಬೆಳಣಿಗೆಯಿಂದ ಇದು ಸತ್ಯ ಎಂಬುದು ಭಾಸವಾಗುತ್ತಿದೆ. ಕೆಂಪಯ್ಯ ನಿಧಾನವಾಗಿ ತಮ್ಮ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಗೃಹ ಇಲಾಖೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.  ರಾಜ್ಯ ಸರ್ಕಾರದ ಅಘೋಷಿತ ಗೃಹ ಸಚಿವ ಎಂದೇ ಖ್ಯಾತವಾಗಿದ್ದ ಕೆಂಪಯ್ಯ ಅವರನ್ನು ವ್ಯವಸ್ಥಿತವಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ದೂರ ಇಡುತ್ತಿದ್ದಾರೆ. ನಾಲ್ವರು ಗೃಹ ಸಚಿವರಾಗಿದ್ದು, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಗೃಹ ಇಲಾಖೆಯ ಹೊಣೆ ವಹಿಸಿಕೊಂಡ ಸಂದರ್ಭದಲ್ಲಿ ಕೆಂಪಯ್ಯ ಕಾರ್ಯನಿರ್ವಹಣೆ ಉತ್ತುಂಗದಲ್ಲಿತ್ತು. ಆದರೆ ಈಗ ಆ ಅವಕಾಶ ಇಲ್ಲವಾಗಿದೆ ಎನ್ನಲಾಗುತ್ತಿದೆ. ಇದರಿಂದಲೇ ಕೆಂಪಯ್ಯ ಇಲಾಖೆಯ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ ಎನ್ನಲಾಗಿದೆ.

ನಗಣ್ಯ:

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕೆಂಪಯ್ಯ ಅವರಿಂದ ರಾಮಲಿಂಗಾರೆಡ್ಡಿ ಅಂತರ ಕಾಯ್ದುಕೊಂಡಿದ್ದರು. ಹಿರಿಯ ಅಧಿಕಾರಿಗಳ ಜತೆಗಿನ ಮೊದಲ ಎರಡೂ ಸಭೆಯನ್ನೂ ಕೆಂಪಯ್ಯ ಇಲ್ಲದೆಯೇ ನಡೆಸಿದ್ದರು. ಶನಿವಾರ ನಡೆದಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಲಯದ ಸಭೆಗೂ ಗೃಹ ಸಚಿವರ ಸಲಹೆಗಾರರಿಗೆ ಆಹ್ವಾನ ನೀಡಿರಲಿಲ್ಲ. ಆದರೆ, ವಿಶೇಷ ತನಿಖಾ ದಳಕ್ಕೆ ಸಂಬಂಧಿಸಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಕೆಂಪಯ್ಯ ಹಾಜರಾಗಿದ್ದರು. ಈ ಮೂಲಕ ರಾಜ್ಯದಲ್ಲಿ ಗೃಹ ಇಲಾಖೆಗೆ ಎರಡು ಶಕ್ತಿ ಕೇಂದ್ರ ರಚನೆಯಾಗುತ್ತಿರುವುದು ಬೆಳಕಿಗೆ ಬಂದಿತ್ತು.
ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಪರಮೇಶ್ವರ್ ಅವರು ಕೆಂಪಯ್ಯ ಅವರನ್ನು ಪಕ್ಕಕ್ಕೆ ಕೂರಿಸಿಕೊಂಡೇ ಸಭೆ ನಡೆಸುತ್ತಿದ್ದರು. ಸಿಎಂ ಸಲಹೆಗಾರ ಎಂಬರ್ಥದಲ್ಲಿ ಸಿದ್ದರಾಮಯ್ಯ ನಡೆಸುವ ಸಭೆಗೆ ಮಾತ್ರ ಕೆಂಪಯ್ಯ ಸೀಮಿತ ಎಂಬ ಸಂದೇಶ ರವಾನಿಸಲು ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ.

ಸಲಹೆಗಾರ ಅನಗತ್ಯ:

ಒಟ್ಟಾರೆ ರಾಮಲಿಂಗರೆಡ್ಡಿ ಅವರು ಈಗಾಗಲೇ ಮಾಧ್ಯಮಗಳಲ್ಲಿ ಬರುವ ಸಲಹೆಯನ್ನೂ ಪಡೆಯುತ್ತೇನೆ. 28 ವರ್ಷ ಶಾಸಕನಾಗಿರುವ ಅನುಭವವಿದೆ. ಕಾರ್ಪೊರೇಟ್ ಕೂಡ ಆಗಿದ್ದೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಗೃಹ ಇಲಾಖೆ ಹೊಸದಾದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಅಲ್ಲದೆ, ಸ್ವತಂತ್ರವಾಗಿ ಬಿಜೆಪಿ ಬೈಕ್ ರ್ಯಾಲಿ ಹಾಗೂ ಗೌರಿ ಲಂಕೇಶ್ ಹತ್ಯೆ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಸಚಿವ ರಾಮಲಿಂಗಾರೆಡ್ಡಿ ಹೈಕಮಾಂಡ್ ಮೆಚ್ಚುಗೆ ಗಳಿಸಿದ್ದಾರೆ. ಅದೂ ಕೆಂಪಯ್ಯರ ಸಲಹೆ ಪಡೆಯದೆ ಅನ್ನುವುದು ವಿಶೇಷ. ಇದೆಲ್ಲಾ ಬೆಳವಣಿಗೆ ಹಿನ್ನೆಲೆ ಕೆಂಪಯ್ಯ ಅಗತ್ಯ ಇಲಾಖೆಗೆ ಇಲ್ಲ ಅನ್ನುವುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಇದು ಕೆಂಪಯ್ಯರನ್ನು ಇಲಾಖೆಯಿಂದ ವಿಮುಖರಾಗುವಂತೆ ಮಾಡಿದೆ.

Facebook Comments

Sri Raghav

Admin