ಮದ್ದೂರಿನ ಅತಗೂರಿನಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Dead--014

ಮದ್ದೂರು, ಸೆ.13- ಬದನೆಕಾಯಿ ಗಿಡಕ್ಕೆ ನೀರು ಹಾಯಿಸಲು ಹೋಗಿದ್ದ ಇಬ್ಬರು ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಳೆದ ರಾತ್ರಿ ತಾಲೂಕಿನ ಅತಗೂರು ಗ್ರಾಮದ ಹೊರವಲಯ ದಲ್ಲಿ ನಡೆದಿದೆ. ಮೃತರು ಅತಗೂರು ಗ್ರಾಮದ ಕಾಂಗ್ರೆಸ್ ಮುಖಂಡ ನಾಗರಾಜು ಅವರ ಪುತ್ರ ಚಂದನ್ (21) ಹಾಗೂ ಅವರ ಸಂಬಂಧಿ ಕಿರಣ್ (13) ಎಂದು ತಿಳಿದುಬಂದಿದೆ. ಚಂದನ್ ಇತ್ತೀಚೆಗಷ್ಟೆ ಬಿಕಾಂ ಪದವಿ ಪೂರ್ಣಗೊಳಿಸಿದ್ದರೆ ಇವರ ಸಂಬಂಧಿ ಕುಣಿಗಲ್ ತಾಲೂಕಿನ ನಿಡಸಾಲೆ ಹೋಬಳಿ ಉಜನಿ ಗ್ರಾಮದ ಕಿರಣ್ ದಸರಾ ರಜೆಗೆಂದು ಇಲ್ಲಿಗೆ ಬಂದಿದ್ದ ಎಂದು ಹೇಳಲಾಗಿದೆ.

ನಿನ್ನೆ ಮಧ್ಯಾಹ್ನ ನಾಲ್ಕು ಮಂದಿ ಹುಡುಗರೊಂದಿಗೆ ಈ ಇಬ್ಬರು ನಾಗರಾಜ್ ಅವರ ತೋಟದಲ್ಲಿ ಬೆಳೆದಿದ್ದ ಬದನೆಕಾಯಿ ಗಿಡಕ್ಕೆ ನೀರು ಹಾಯಿಸಲು ಹೋಗಿದ್ದರು.
ಈ ವೇಳೆ ಕಿರಣ್ ಹೊಂಡಕ್ಕೆ ಇಳಿದು ನೀರು ಎತ್ತುವಾಗ ಕಾಲು ಜಾರಿ ಒಳಗೆ ಬಿದ್ದಿದ್ದಾರೆ. ಇದನ್ನು ಕಂಡ ಚಂದನ್ ಆತನನ್ನು ರಕ್ಷಿಸಲು ಹೋದಾಗ ಆತ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಜತೆಗಿದ್ದ ಹುಡುಗರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಬಂದು ನೀರಿನಲ್ಲಿ ಮುಳುಗಿದ್ದವರನ್ನು ಮೇಲೆತ್ತಿದ್ದಾರೆ. ನೀರು ಕುಡಿದು ಅಸ್ವಸ್ಥಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಲು ಮುಂದಾದರೂ ಸಹ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin