ಶಾಲೆಗೆ ಬೆಂಕಿಬಿದ್ದು 25 ವಿದ್ಯಾರ್ಥಿಗಳ ದುರಂತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಕೌಲಾಲಂಪುರ್, ಸೆ.14-ಮಲೇಷ್ಯಾದ ಧಾರ್ಮಿಕ ಶಾಲೆಯೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಬಹುತೇಕ ವಿದ್ಯಾರ್ಥಿಗಳೂ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿ, ಅನೇಕರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಘೋರ ದುರಂತದಲ್ಲಿ ಇದು ಒಂದೆಂದು ಅಧಿಕಾರಿಗಳು ಹೇಳಿದ್ದಾರೆ. ಮಲೇಷ್ಯಾ ರಾಜಧಾನಿ ಕೌಲಾಲಂಪೂರ್ ಹೃದಯಭಾಗದಲ್ಲಿರುವ ತಹಫಿಜ್ ದಾರುಲ್ ಖುರಾನ್ ಇತ್ತಿಪಾಖಿಯಾ ಧಾರ್ಮಿಕ ಕೇಂದ್ರದ ಎರಡು ಅಂತಸ್ತುಗಳ ಕಟ್ಟಡದಲ್ಲಿ ಬೆಳಗಿನ ಜಾವ ಬೆಂಕಿಯ ಕೆನ್ನಾಲಿಗೆಗೆ 25ಕ್ಕೂ ಹೆಚ್ಚು ಮಂದಿಯನ್ನು ಆಪೋಶನ ತೆಗೆದುಕೊಂಡಿದೆ.

ಅಗ್ನಿ ವಿಪ್ಲವದ ಬಗ್ಗೆ ಸುದ್ದಿ ತಿಳಿದ ಕೂಡಲೇ ವಾಹನಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಮತ್ತು ಒಂದು ಗಂಟೆಯೊಳಗೆ ಬೆಂಕಿಯ ಉಗ್ರ ಜ್ವಾಲೆಯನ್ನು ನಂದಿಸಿದರು. ಆದರೆ ಅಷ್ಟು ಹೊತ್ತಿಗೆ ಸಾವು-ನೋವುಗಳು ಸಂಭವಿಸಿತ್ತು. ಈ ದುರ್ಘಟನೆಯ ನಂತರದ ದೃಶ್ಯಗಳು ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು, ದುರಂತದ ತೀವ್ರತೆಯನ್ನು ತಿಳಿಸಿವೆ.

ಈ ಅಗ್ನಿ ಆಕಸ್ಮಿಕದಲ್ಲಿ 23 ವಿದ್ಯಾರ್ಥಿಗಳು ಮತ್ತು ಇಬ್ಬರು ವಾರ್ಡನ್‍ಗಳು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ, ಜ್ವಾಲೆಗೆ ಸಿಲುಕಿ ಮತ್ತು ದಟ್ಟ ಹೊಗೆಯಿಂದ ಉಸಿರುಗಟ್ಟಿ ಈ ಸಾವುಗಳು ಸಂಭವಿಸಿದೆ. ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಅವಘಡಗಳಲ್ಲಿ ಇದು ಒಂದು ಎಂದು ಕೌಲಾಲಂಪೂರ್ ಅಗ್ನಿ ಮತ್ತು ರಕ್ಷಣಾ ಇಲಾಖೆಯ ನಿರ್ದೇಶಕ ಖಿರುದ್ದೀನ್ ದ್ರಾಮನ್ ತಿಳಿಸಿದ್ದಾರೆ.  ಈ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin