ಸೂಟ್‍ಕೇಸ್ ಸರ್ಕಾರ : ಹಂಪಿ ವಿವಿ ಕುಲಪತಿಗಳಿಂದ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Mallika--01

ಬಳ್ಳಾರಿ, ಸೆ.14- ಸರ್ಕಾರ ನೀಡುವ ಭರವಸೆ ಒಂದು ದಿನಕ್ಕೆ ಮಾತ್ರ ಸೀಮಿತ. ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬ ಹಣ ತುಂಬಿಕೊಂಡು ಹೋದರೆ ಮಾತ್ರ ಕೆಲಸವಾಗುತ್ತದೆಯಂತೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಎಸ್.ಗಂಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೊನ್ನೆ ನಡೆದಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಒಂದು ದಿನಕ್ಕೆ ಮಾತ್ರ ಸೀಮಿತ. ನಮ್ಮ ಕೆಲಸಗಳಾಗಬೇಕಾದರೆ ಸೂಟ್‍ಕೇಸ್‍ನಲ್ಲೇ ಹಣ ಕೊಂಡೊಯ್ಯಬೇಕು ಎಂದಿದ್ದಾರೆ.

ಬೆಳ್ಳಿ ಹಬ್ಬ ಉದ್ಘಾಟಿಸಿ ಮಾತನಾಡುವಾಗ ಸಿದ್ದರಾಮಯ್ಯ ವಿವಿಯಲ್ಲಿನ ಅಧ್ಯಾಪಕರ ಕೊರತೆ ನೀಗಿಸುವ ಭರವಸೆ ನೀಡಿದ್ದರು. ಬೆಳ್ಳಿ ಹಬ್ಬವಾದ ಎರಡನೆ ದಿನ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕುಲಪತಿ ಮಲ್ಲಿಕಾ ಗಂಟಿ ಅವರು ಮುಖ್ಯಮಂತ್ರಿಯವರ ಭಾಷಣ ಉಲ್ಲೇಖಿಸಿ ಮಾತನಾಡಿ, ಹಿಂದಿನ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರು ವಿಧಾನಸೌಧಕ್ಕೆ ಭೇಟಿ ನೀಡಿದ್ದರೆ ದೇವೇಗೌಡರಂತಹ ರಾಜಕಾರಣಿಗಳು ಮುಂದೆ ನಿಂತು ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಬಳಿಕ ಸೂಟ್‍ಕೇಸ್ ತುಂಬ ಹಣ ಕೊಟ್ಟು ಹಂಪಿ ವಿವಿ ಅಭಿವೃದ್ಧಿ ಮಾಡಿ ಎನ್ನುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ವಿವಿಯ ಕೆಲಸ-ಕಾರ್ಯಗಳನ್ನು ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಸೂಟ್‍ಕೇಸ್ ತುಂಬ ಹಣ ತುಂಬಿಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಲ್ಲಿಕಾ ಗಂಟಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಂಪಿಯನ್ನು ಆಕ್ಸ್‍ಫರ್ಡ್ ರೀತಿಯಲ್ಲಿ ಬೆಳೆಸಬೇಕಾದ ಕನಸಿದೆ. ಆದರೆ, ಅಧ್ಯಾಪಕರಿಲ್ಲ. ಸಿಬ್ಬಂದಿಗಳ ನೇಮಕಾತಿ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ. ಈ ನಂಬಿಕೆಯಿಂದಲೇ ನಾನು ಇಂದಿನ ಕುಲಪತಿಗಳಾದ ನಿಮ್ಮನ್ನು ಸನ್ಮಾನ ರೂಪದಲ್ಲಿ ಕರೆಯಿಸಿ ಮಾರ್ಗದರ್ಶನ ಕೇಳುತ್ತಿರುವೆ ಎಂದು ಸರ್ಕಾರದ ವಿರುದ್ಧ ಮಲ್ಲಿಕಾ ಗಂಟಿ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin