ಅಕ್ಕನನ್ನು ಗರ್ಭಿಣಿ ಮಾಡಿದವನ ತಲೆ ಕಡಿದು ಜಿಮ್ಮಿ ಕೈಗೆ ಸಿಕ್ಕಿಬಿದ್ದ ಸಹೋದರರು..!

ಈ ಸುದ್ದಿಯನ್ನು ಶೇರ್ ಮಾಡಿ

Jimmi--01

ಬೆಂಗಳೂರು, ಸೆ.15- ಅನೇಕ ಕ್ಲಿಷ್ಟ ಪ್ರಕರಣಗಳಲ್ಲಿ ಮಾನವನಿಗೆ ನೆರವಾಗುವ ಪ್ರಾಣಿ ಎಂದರೆ ಅದು ಶ್ವಾನ. ಅದರಲ್ಲೂ ತರಬೇತಿ ಪಡೆದ ಶ್ವಾನವಾದರೆ ಅದು ಮಾನವನ ಜೀವವನ್ನು ಉಳಿಸುವ ಹಲವು ಉದಾಹರಣೆಗಳು ನಾವು ನೋಡಿದ್ದೇವೆ. ಇದಲ್ಲದೆ ಕೆಲವು ಅಪರಾಧ ಪ್ರಕರಣಗಳಲ್ಲಿಯೂ ಪೊಲೀಸರಿಗೆ ಸಹಕಾರ ನೀಡುವ ಪೊಲೀಸ್ ನಾಯಿಗಳು ಮಾತ್ರ ಒಂದು ಕೈ ಮೇಲು.

ಅದರಂತೆ ಈಗ ನಗರ ಪೊಲೀಸ್ ವಿಭಾಗದಲ್ಲಿ ಶ್ವಾನ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಜಿಮ್ಮಿ ಈಗ ಭಾರೀ ಸಂಚಲನ ಮೂಡಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರುಂಡ ಮುಂಡ ಕತ್ತರಿಸಿದ ಕೊಲೆ ಪ್ರಕರಣದ ಸುಳಿವು ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದಕ್ಕೆ ಇಂದು ಅದರ ಚಾಕಚಕ್ಯತೆಯನ್ನು ಸ್ವತಃ ಹೆಚ್ಚುವರಿ ಪೊಲೀಸ್ ಆಯುಕ್ತರೇ ಮೆಚ್ಚಿ ಶಹಭಾಷ್ ಗಿರಿ ನೀಡಿದ್ದಾರೆ. ಅವರ ಮುಂದೆ ಜಿಮ್ಮಿ ಸೆಲ್ಯೂಟ್ ಹೊಡೆದು ಕೂಡ ತನ್ನ ಶಿಸ್ತನ್ನು ತೋರಿಸಿದ್ದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿತು.

Jimmi--01

ರುಂಡ ಕತ್ತರಿಸಿದ ಕೊಲೆ ಪ್ರಕರಣ ಬಯಲಿಗೆ : ಸಹೋದರರ ಬಂಧನ

ಬೆಂಗಳೂರು, ಸೆ.15- ತಮ್ಮ ಅಕ್ಕನನ್ನು ಗರ್ಭಿಣಿ ಮಾಡಿದ ಸ್ನೇಹಿತನ ಕತ್ತು ಕತ್ತರಿಸಿ ರುಂಡವನ್ನು ಬಿಸಾಡಿ ಪರಾರಿಯಾಗಿದ್ದ ಇಬ್ಬರು ಸಹೋದರರನ್ನು ಬಂಧಿಸುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಮ್ಮಿ ಎಂಬ ಶ್ವಾನದಿಂದ ಕೊಲೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಮೂಲತಃ ಒರಿಸ್ಸಾದ ಗಾಂಧಿಜೆರಾಯ್(19)  ಮತ್ತು ಮಧುಜೆರಾಯ್ (21) ಬಂಧಿತ ಸಹೋದರರಾಗಿದ್ದು, ಈ ಪ್ರಕರಣದಲ್ಲಿ
ಭಾಗಿಯಾಗಿ ತಲೆ ಮರೆಸಿಕೊಂಡಿರುವ ಇವರ ಭಾವ ಕಾಶೀರಾಮ್‍ಗಾಗಿ ಶೋಧ ಮುಂದುವರೆದಿದೆ.

Jimmi--4

ಘಟನೆ ವಿವರ:

ಸೆಪ್ಟೆಂಬರ್ 11ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ನೈಸ್‍ಟೋಲ್ ಕಡೆಯಿಂದ ದೊಟ್ಟ ತೋಗೂರು ಕಡೆಗೆ ಹಾದುಹೋಗುವ ಮೈದಾನದ ಹುಲ್ಲಿನ ದೊಡ್ಡ ಪೊದೆಯಲ್ಲಿ ರುಂಡವಿಲ್ಲದ ಅಪರಿಚಿತ ದೇಹ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೃತ್ಯ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆ ಮಾಡಿ ಅಲ್ಲಿಂದ ಹುಲ್ಲಿನ ಪೊದೆಯ ಕಡೆ ದೇಹ ಎಳೆದುಕೊಂಡು ಹೋಗಿ ತಲೆ ಮತ್ತು ಮರ್ಮಾಂಗ ಕತ್ತರಿಸಿ ನಗ್ನ ಸ್ಥಿತಿಯಲ್ಲಿ ಮೃತದೇಹವನ್ನು ಬಿಟ್ಟು ಹೋಗಿದ್ದರು.

ಮೈದಾನದಿಂದ ಪೊದೆಯ ಕಡೆ ದೇಹವನ್ನು ಎಳೆದುಕೊಂಡು ಹೋಗಿದ್ದರಿಂದ ಸ್ಥಳದಲ್ಲಿ ಹುಲ್ಲು ರಕ್ತಸಿಕ್ತವಾಗಿತ್ತು. ಅಲ್ಲದೆ ಸ್ಥಳದಲ್ಲಿ ಮಾಂಸದ ಚೂರುಗಳು ಬಿದ್ದಿರುವುದು ಕಂಡುಬಂದಿದೆ. ಈ ಪ್ರಕರಣವನ್ನು ಪತ್ತೆ ಹಚ್ಚಲು ಸಹಾಯಕ ಪೊಲೀಸ್ ಆಯುಕ್ತ ಜಯರಾಮು ಮತ್ತು ಇನ್ಸ್‍ಪೆಕ್ಟರ್ ಮಲ್ಲೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈ ತಂಡ ತನಿಖೆ ಕೈಗೊಂಡು ಕೃತ್ಯ ನಡೆದ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಂಡು ಪರಿಶೀಲಿಸಿದಾಗ ಪೊಲೀಸ್ ಶ್ವಾನವಾದ ಜಿಮ್ಮಿಯು ಮೃತದೇಹ ಬಿದ್ದಿದ್ದ ಸ್ಥಳ ಸುತ್ತಮುತ್ತ ಓಡಾಡಿ ಅದು ನೀಡಿದ ಸುಳಿವಿನ ಮೇರೆಗೆ ಕೊಲೆಯಾದ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಸಹಕಾರಿಯಾಗಿದೆ.

Jimmi-02

ಈ ಸುಳಿವಿನ ಆಧಾರದ ಮೇಲೆ ಕೊಲೆಯಾದ ವ್ಯಕ್ತಿ ಒರಿಸ್ಸಾ ರಾಜ್ಯದ ಬಿರಾಂಚಿ ಮಾಂಝಿ ಎನ್ನುವುದು ತಿಳಿದುಬಂದ ಹಿನ್ನೆಲೆಯಲ್ಲಿ ಈತ ಯಾರೆಂದು ತನಿಖೆ ಮಾಡಲು ತಂಡ ಮುಂದಾಯಿತು. ಈತ ದೊಡ್ಡ ತೊಗೂರಿನ ಗೋವಿಂದಪ್ಪ ಎಂಬುವರ ಬಾಡಿಗೆ ಮನೆಯಲ್ಲಿ ತನ್ನ ಊರಿನ ಇಬ್ಬರ ಜೊತೆ ವಾಸವಿದ್ದ ಎಂಬುದು ಗೊತ್ತಾಗಿ ಗೋವಿಂದಪ್ಪ ಎಂಬುವರ ಮನೆಯನ್ನು ಹುಡುಕಿ ಅಲ್ಲಿ ವಾಸವಾಗಿದ್ದ ಗಾಂಧಿಜೆರಾಯ್ ಹಾಗೂ ಮಧುಜೆರಾಯ್ ಸಹೋದರರನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಿದಾಗ ನಡೆದ ಘಟನೆಯನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ತನ್ನ ಇಬ್ಬರು ಅಕ್ಕಂದಿರಾದ ಸಾಂಬರಿ ಜೆರಾಯ್ ಮತ್ತು ಸಾಬಿತ್ರಿ ಜೆರಾಯ್ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪೈಕಿ ಸಾಂಬರಿ ಜೆರಾಯ್‍ಗೆ ವಿವಾಹವಾಗಿದ್ದು, ಇವರ ಪತಿ ಕಾಶೀರಾಮ್ ಒರಿಸ್ಸಾದಲ್ಲೇ ಇದ್ದರು. ಇವರಿಬ್ಬರು ದೊಡ್ಡ ತೊಗೂರಿನ ಪಿಜಿಯೊಂದರಲ್ಲಿ ವಾಸವಿದ್ದರು.
ಈ ಮಧ್ಯೆ ಜುಲೈನಲ್ಲಿ ಸಾಬಿತ್ರಿ ಹೊಟ್ಟೆನೋವಿನಿಂದ ತನ್ನ ಸ್ವಂತ ಊರಿಗೆ ಹಿಂತಿರುಗಿ ಆಸ್ಪತ್ರೆಗೆ ತೋರಿಸಲಾಗಿ ಈಕೆ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂದಿದೆ.

ಈ ಘಟನೆಯಿಂದ ಆತಂಕಕ್ಕೊಳಗಾದ ಬೆಂಗಳೂರಿನಲ್ಲಿದ್ದ ಸಹೋದರರು ತನ್ನ ಅಕ್ಕನ ಸ್ಥಿತಿಗೆ ಜೊತೆಯಲ್ಲಿದ್ದ ಬಿರಾಂಚಿ ಮಾಂಝಿಯೇ ಕಾರಣ ಎಂದು ತಿಳಿದು ಈತನನ್ನು ಕೊಲೆ ಮಾಡಲು ಒರಿಸ್ಸಾದಲ್ಲಿದ್ದ ಭಾವನೊಂದಿಗೆ ಸೇರಿ ಸಂಚು ರೂಪಿಸಿದ್ದಾರೆ. ಅದರಂತೆ ಒರಿಸ್ಸಾದಿಂದ ಸೆ.10 ರಂದು ರೈಲಿನಲ್ಲಿ ಬಂದ ಕಾಶೀರಾಮ್, ದೊಡ್ಡ ತೊಗೂರಿನಲ್ಲಿ ವಾಸವಿದ್ದ ಇವರ ರೂಮಿಗೆ ಬಂದು, ಕೊಲೆಗೆ ಸಂಚು ರೂಪಿಸಿ ಅಂದು ರಾತ್ರಿ 10 ಗಂಟೆಗೆ ಬಿರಾಂಚಿ ಮಾಂಝಿಯನ್ನು ಬಾರ್‍ಗೆ ಹೋಗೋಣವೆಂದು ಕರೆ ತಂದಿದ್ದಾರೆ. ಬಾರ್‍ನಲ್ಲಿ ಆತನೊಂದಿಗೆ ಸಲುಗೆಯಿಂದಲೇ ಮಾತನಾಡಿಕೊಂಡು ಈ ಮೂವರು ಸಂಶಯ ಬಾರದ ರೀತಿಯಲ್ಲಿ ವರ್ತಿಸಿ ನಂತರ ಹೊರಗೆ ಹೋಗಿ ಕುಳಿತುಕೊಂಡು ಕುಡಿಯೋಣವೆಂದು ಪುಸಲಾಯಿಸಿ ಬಾರ್‍ನಲ್ಲಿ ಮದ್ಯದ ಬಾಟಲ್ ತೆಗೆದುಕೊಂಡು ನೈಸ್ ರಸ್ತೆ ಕಡೆಗೆ ಹೋಗುವ ಮೈದಾನಕ್ಕೆ ಬಂದಿದ್ದಾರೆ.

ಮೈದಾನದಲ್ಲಿ ಕುಡಿಯುತ್ತಾ ಬಿರಾಂಚಿ ಮಾಂಝಿ ತಲೆ ಬಗ್ಗಿಸುತ್ತಿದ್ದಂತೆ ನನ್ನ ಅಕ್ಕನನ್ನು ಗರ್ಭಿಣಿ ಮಾಡಿದ್ದೀಯ ಎಂದು ರಾಡ್‍ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಅಲ್ಲಿಂದ ಹುಲ್ಲಿನ ಪೊದೆಗೆ ಮೃತದೇಹ ಎಳೆದೊಯ್ದು ಆಯುಧದಿಂದ ತಲೆ ಕತ್ತರಿಸಿ ಬಿಸಾಡಿ ನಂತರ ವಾಪಸ್ಸಾಗಿ ಕಾಶೀರಾಮ್ ಒರಿಸ್ಸಾಗೆ ತೆರಳಿದ್ದಾಗಿ ಈ ಇಬ್ಬರು ಸಹೋದರರು ವಿಚಾರಣೆ ವೇಳೆ ನಡೆದ ಘಟನೆ ವಿವರಿಸಿದ್ದಾರೆ. ಇವರ ಹೇಳಿಕೆ ಮೇರೆಗೆ ಬಿರಾಂಚಿ ಮಾಂಝಿ ತಲೆಯನ್ನು ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆ ಮಾಡಲಾಗಿದೆ.

ತಲೆ ಮರೆಸಿಕೊಂಡಿರುವ ಆರೋಪಿ ಕಾಶೀರಾಮ್‍ಗಾಗಿ ತನಿಖೆ ಮುಂದುವರೆಸಿದ್ದು, ಬಂಧಿತರಾಗಿರುವ ಸಹೋದರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.  ಈ ಪ್ರಕರಣವನ್ನು ಅತಿ ಶೀಘ್ರವಾಗಿ ಪತ್ತೆ ಮಾಡಿರುವ ತಂಡವನ್ನು ನಗರ ಪೊಲೀಸ್ ಆಯುಕ್ತರು, ಅಪರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Facebook Comments

Sri Raghav

Admin