ಅಪಘಾತವೆಸಗಿ ಎಸ್ಕೇಪಾಗುತ್ತಿದ್ದ ಲಾರಿಯನ್ನು ಬೆನ್ನಟ್ಟಿ ಹಿಡಿದ ಯುವಕರಿಗೆ ಭೇಷ್ ಎಂದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

Bike-Accident--01

ಬೆಂಗಳೂರು, ಸೆ.15- ಯಾವುದೇ ಅಪಘಾತಗಳು ಸಂಭವಿಸಿದಾಗ, ಅಪರಾಧ ಪ್ರಕರಣಗಳು ನಡೆದಾಗ ಸಾರ್ವಜನಿಕರು ನಮಗೇಕೆ ಈ ಉಸಾಬರಿ ಎಂದು ಸಾಮಾನ್ಯವಾಗಿ ದೂರ ಸರಿಯುವುದೇ ಹೆಚ್ಚು. ಆದರೆ, ತುಮಕೂರಿನ ಗಿರೀಶ್ ಮತ್ತು ಮುರಳಿ ಪ್ರಸಾದ್ ಅವರು ಮಾಡಿರುವ ಕೆಲಸ ಮೆಚ್ಚುವಂಥದ್ದು. ಅಪಘಾತ ಮಾಡಿ ಲಾರಿ ಚಾಲಕ ತನ್ನ ಲಾರಿಯೊಂದಿಗೆ ಪರಾರಿಯಾಗುತ್ತಿದ್ದಾಗ ಆತನನ್ನು ಬೆನ್ನಟ್ಟಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬಕ್ಕೆ ನ್ಯಾಯ ಒದಗಿಸಿದ್ದಾರೆ.

ಅಲ್ಲದೆ, ಪೊಲೀಸರು ಮತ್ತು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಈ ಕಾರ್ಯ ಮೆಚ್ಚಿ ಯಶವಂತಪುರ ಪೊಲೀಸರು ಇಂದು ಸಂಜೆ ಇವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದಾರೆ.  ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿನಲ್ಲಿ ಎಂಇಎಸ್ ರಿಂಗ್‍ರೋಡ್ ಹತ್ತಿರ ಲಾರಿ ಡಿಯೋ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಲಾರಿ ಚಾಲಕ ಏನಾಗಿದೆ ಎಂದು ನಿಲ್ಲಿಸಿ ನೋಡುವುದನ್ನು ಬಿಟ್ಟು ಲಾರಿಯೊಂದಿಗೆ ಪರಾರಿಯಾಗತೊಡಗಿದ್ದಾನೆ. ಆಗ ಲಾರಿಯ ಹಿಂದೆ ಬರುತ್ತಿದ್ದ ತುಮಕೂರು ನಿವಾಸಿ, ಅಗರ್‍ಬತ್ತಿ ಫ್ಯಾಕ್ಟರಿ ಮಾಲೀಕ ಗಿರೀಶ್ ಅವರು ಘಟನೆ ನೋಡಿ ಲಾರಿಯನ್ನು ನಿಲ್ಲಿಸಲು ಯತ್ನಿಸಿದ್ದಾರೆ.

ಆದರೆ, ಚಾಲಕ ಲಾರಿ ನಿಲ್ಲಿಸದೆ ಪರಾರಿಯಾದಾಗ ತನ್ನ ಮೊಬೈಲ್‍ನಲ್ಲಿ ಲಾರಿ ನಂಬರ್ ಕ್ಲಿಕ್ಕಿಸಿಕೊಂಡು ಬೆನ್ನಟ್ಟಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕೋರಮಂಗಲ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಮುರಳಿ ಪ್ರಸಾದ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಮಾಹಿತಿ ನೀಡಿದ್ದಾರೆ. ಈ ನಂಬರ್ ಲಾರಿ ಅಪಘಾತವೆಸಗಿ ಪರಾರಿಯಾಗಿ ಬರುತ್ತಿದೆ. ಅದನ್ನು ತಡೆಯುವಂತೆ ಮಾಹಿತಿ ನೀಡಿದ್ದಾರೆ. ಸಮಾನ ಮನಸ್ಕರಾದ ಮುರಳಿ ಪ್ರಸಾದ್ ಕೂಡ ಅಲರ್ಟ್ ಆಗಿ ಲಾರಿಯನ್ನು ಬೆನ್ನಟ್ಟಿದ್ದಾರೆ.

ಈ ಇಬ್ಬರು ಅರಿಶಿನಕುಂಟೆ ಬಳಿ ಲಾರಿಯನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿ ಚಾಲಕನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಅಪಘಾತದಲ್ಲಿ ಡಿಯೋ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದು, ಲಾರಿ ಚಾಲಕ ಪರಮೇಶ್ವರ್ (55) ನನ್ನು ಗಿರೀಶ್, ಮುರಳಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಅಲ್ಲದೆ, ಗಿರೀಶ್ ಅವರೇ ಈ ಪ್ರಕರಣದ ಸಂಬಂಧ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರಲ್ಲದೆ ಇವರ ಈ ಕಾರ್ಯ ಮೆಚ್ಚಿ ಸಂಜೆ ಪೊಲೀಸ್ ಠಾಣೆಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕಂಡರೂ ಕಾಣದಂತಿರುವವರೇ ಹೆಚ್ಚು. ಬೆಂಗಳೂರಿನಂತಹ ಮಹಾನಗರದಲ್ಲಿ ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ನಮಗೇಕೆ ಈ ಉಸಾಬರಿ ಎಂದು ಜಾರಿಕೊಳ್ಳುವವರೇ ಜಾಸ್ತಿ ಇರುವ ಸಂದರ್ಭದಲ್ಲಿ ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಲಾರಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ್ದು ಮೆಚ್ಚುವಂತಹ ಕೆಲಸ.  ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿದರೆ ಅಪರಾಧ ಪ್ರಕರಣಗಳು ಕಡಿಮೆಯಾಗಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿದೆ.

Facebook Comments

Sri Raghav

Admin