ಅಮೇರಿಕಾದಲ್ಲಿ ಭಾರತ ಮೂಲದ ಮನೋವೈದ್ಯನ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Doctor--01

ವಾಷಿಂಗ್ಟನ್, ಸೆ.15- ಭಾರತ ಮೂಲದ ವೈದ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅಮೆರಿಕದ ಕಾನ್ಸಾಸ್‍ನ ವಿಚಿಟ ನಗರದಲ್ಲಿ ನಡೆದಿದೆ. ಮೃತ ವೈದ್ಯರನ್ನು ತೆಲಂಗಾಣ ಮೂಲದ ಮನೋವೈದ್ಯ ಅಚ್ಯುತರೆಡ್ಡಿ (57) ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ 21 ವರ್ಷದ ಉಮರ್ ರಷೀದ್ ದತ್ ಎಂಬ ರೋಗಿಯೇ ಈ ವೈದ್ಯನನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಿಳಿಸಿರುವ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ. ಬುಧವಾರ ಸಂಜೆ 7.20ರ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಲೆಫ್ಟಿನೆಂಟ್ ತಾಳ್ ವಜಿಲೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದಾಗ ಮನೋವೈದ್ಯಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದ 21 ವರ್ಷದ ಮನೋರೋಗಿಯೊಬ್ಬ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೂರಿಯಿಂದ ಹಲವಾರು ಬಾರಿ ಇರಿದಿದ್ದರಿಂದ ವೈದ್ಯ ಅಚ್ಯುತರೆಡ್ಡಿ ಭಾರೀ ಪ್ರಮಾಣದ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಚ್ಯುತರೆಡ್ಡಿಯವರನ್ನು ಇರಿದಿರುವ ಉಮರ್ ರಷೀದ್ ವಿಚಿಟ ಸ್ಟೇಟ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ. 2015ರಲ್ಲಿ ಇವನು ಕಾಲೇಜಿನಿಂದ ಬಿಡುಗಡೆಯಾಗಿದ್ದ.

ಅಚ್ಯುತರೆಡ್ಡಿ ಮನೋವಿಜ್ಞಾನಿಯಾಗಿ ಅಮೆರಿಕದಲ್ಲಿ ಭಾರೀ ಹೆಸರುವಾಸಿಯಾಗಿದ್ದರು. ದೇಶದಲ್ಲಿರುವ ಕೇವಲ ಕೆಲವೇ ಮಾನಸಿಕ ತಜ್ಞರಲ್ಲಿ ಅಚ್ಯುತರೆಡ್ಡಿ ಅಗ್ರಸ್ಥಾನ ಪಡೆದಿದ್ದರು. ಅವರ ಈ ದುರಂತ ಸಾವಿನಿಂದ ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಮೆರಿಕ ವೈದ್ಯರು ಕಂಬನಿ ಮಿಡಿದಿದ್ದಾರೆ.
ಅಚ್ಯುತರೆಡ್ಡಿಯವರು ತಮ್ಮ ಜೀವಿತಾವಧಿಯಲ್ಲಿ ನೂರಾರು ಮಂದಿ ಮಾನಸಿಕ ರೋಗಿಗಳಿಗೆ ಕಾಯಿಲೆ ಗುಣಪಡಿಸಿ ಮರುಜೀವ ನೀಡಿದ್ದರು. ಅಚ್ಯುತರೆಡ್ಡಿಯವರು ಮಹಾನ್ ಮಾನವತಾವಾದಿಯಾಗಿದ್ದು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದರು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಅಪಾರ ಕಾಳಜಿ ಹೊಂದಿದ್ದರು. ಇಂತಹ ವೈದ್ಯರನ್ನು ಕಳೆದುಕೊಂಡು ನಮ್ಮ ವೈದ್ಯಕೀಯ ಕ್ಷೇತ್ರ ಬಡವಾಗಿದೆ ಎಂದು ಅಚ್ಯುತರಡ್ಡಿಯಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿರುವ ಬ್ರೆಂಡಾ ಟಾರ್ಮೆಲ್ ಎಂಬ ಮಹಿಳೆ ದುಃಖ ವ್ಯಕ್ತಪಡಿಸಿದ್ದಾರೆ.

ಅಚ್ಯುತರೆಡ್ಡಿಯವರು 1986ರಲ್ಲಿ ಹೈದರಾಬಾದ್‍ನ ಹುಸ್ಮಾನ್ ವಿಶ್ವವಿದ್ಯಾನಿಲಯದಲ್ಲಿ ಪದವೀಧರರಾಗಿ ಕಾನ್ಸಾಸ್‍ನ ಮೆಡಿಕಲ್ ಸೆಂಟರ್‍ನಲ್ಲಿ 1998ರಲ್ಲಿ ಸ್ಥಾನಿಕ ವೈದ್ಯರಾಗಿ ನೇಮಕಗೊಂಡಿದ್ದರು ಎಂದು ಟಾರ್ಮೆಲ್ ಹೇಳಿದ್ದಾರೆ.

Facebook Comments

Sri Raghav

Admin