ಈ ಸಂಜೆ Exclusive : ಇನ್ನೂ ನಿಂತಿಲ್ಲ ‘ಆಯಿಲ್ ಮಾಫಿಯಾ’ ..!

ಈ ಸುದ್ದಿಯನ್ನು ಶೇರ್ ಮಾಡಿ

Oil-Mafia--01 ಕುಣಿಗಲ್, ಸೆ.15- ಎಂತಹ ದಕ್ಷ ಪೊಲೀಸ್ ಅಧಿಕಾರಿಗಳಿಂದಲೂ ಈ ಮಾಫಿಯಾಗಳಿಗೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದಶಕಗಳಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಆಯಿಲ್ ಮಾಫಿಯಾ ಇಂದಿಗೂ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ಭೂಗತ ಪಾತಕಿ ಆಯಿಲ್‍ಕುಮಾರನ ಕಾಲದಿಂದಲೂ ನಿರಂತರವಾಗಿ ಈ ಮಾಫಿಯಾ ನಡೆಯುತ್ತಿದೆ. ಈ ಮಾಫಿಯಾದ ಮೇಲೆ ಹಿಡಿತ ಸಾಧಿಸಲು ಅದೆಷ್ಟೋ ಭೂಗತ ಪಾತಕಿಗಳು ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ. ಒಂದು ಬಾರಿ ಆಯಿಲ್ ಮಾಫಿಯಾದ ಮೇಲೆ ಹಿಡಿತ ಸಾಧಿಸುವ ರೌಡಿ ಭೂಗತಲೋಕದ ಮಹಾರಾಜನಾಗಿ ಮೆರೆಯುತ್ತಾನೆ. ಅಂತಹ ಮಹಾರಾಜನನ್ನು ಮತ್ತೊಬ್ಬ ಮುಗಿಸಿದರೆ ಅವನೇ ಆಯಿಲ್ ಮಾಫಿಯಾದ ಅಧಿಪತಿ.

ನಿರಂತರವಾಗಿ ನಡೆಯುತ್ತಿರುವ ಈ ಆಯಿಲ್ ಮಾಫಿಯಾವನ್ನು ಮಟ್ಟ ಹಾಕಲು ಅದೆಷ್ಟೋ ದಕ್ಷ ಪೊಲೀಸ್ ಅಧಿಕಾರಿಗಳು ಪ್ರಯತ್ನಪಟ್ಟರೂ ಅದು ಸಾಧ್ಯವಾಗುತ್ತಿಲ್ಲ. ಒಬ್ಬ ಪಾತಕಿಯನ್ನು ಮಟ್ಟಹಾಕಿದರೆ ರಕ್ತಬೀಜಾಸುರನಂತೆ ನೂರಾರು ಪಾತಕಿಗಳು ಹುಟ್ಟಿಕೊಳ್ಳುತ್ತಾರೆ. ಹೀಗಾಗಿ ದಶಕಗಳಿಂದಲೂ ನಡೆಯುತ್ತಿರುವ ಆಯಿಲ್ ಮಾಫಿಯಾ ಇಂದೂ ಮುಂದುವರೆದಿದ್ದು, ನಿರ್ಜನ ಪ್ರದೇಶದಲ್ಲಿ ಟ್ಯಾಂಕರ್‍ಗಳಿಂದ ನೂರಾರು ಲೀಟರ್ ಇಂಧನ ಕದಿಯುವ ಚಿತ್ರಣಗಳು ಈ ಸಂಜೆ ಕ್ಯಾಮರಾದಲ್ಲಿ ಸೆರೆಯಾಗಿವೆ.

Oil-Mafia--04

ಮಂಗಳೂರಿನಿಂದ ರಾಜ್ಯದ ವಿವಿಧ ಮೂಲೆಗಳಿಗೆ ಟ್ಯಾಂಕರ್‍ಗಳಲ್ಲಿ ರವಾನಿಸುವ ಲಕ್ಷಾಂತರ ಲೀಟರ್ ತೈಲದ ಸಾವಿರಾರು ಲೀಟರ್ ಆಯಿಲ್ ಮಾಫಿಯಾದವರ ಕ್ಯಾನ್ ಸೇರುತ್ತಿದೆ. ಇದು ಕೇವಲ ಯಾವುದೋ ಒಂದು ರಸ್ತೆಯಲ್ಲಿ ನಡೆಯುವ ದಂಧೆಯಲ್ಲ. ಹೆದ್ದಾರಿಗಳಲ್ಲಿ ಸಂಚರಿಸುವ ಸಾವಿರಾರು ಟ್ಯಾಂಕರ್‍ಗಳಿಂದಲೂ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಕದಿಯಲಾಗುತ್ತಿದೆ.  ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬರುವ ಟ್ಯಾಂಕರ್‍ಗಳ ತೈಲಕ್ಕೆ ಕನ್ನ ಬೀಳುವುದು ಇದೇ ಕುಣಿಗಲ್‍ನಲ್ಲಿ.

Oil-Mafia--03

ಯಸ್… ಕುಣಿಗಲ್ ಕೈಗಾರಿಕಾ ಪ್ರದೇಶದ ಸಮೀಪದ ನಿರ್ಜನ ಪ್ರದೇಶದಲ್ಲಿ ಇಂದಿಗೂ ಟ್ಯಾಂಕರ್‍ಗಳಿಂದ ಪೆಟ್ರೋಲ್ ಕದಿಯಲಾಗುತ್ತಿದ್ದು, ಟ್ಯಾಂಕರ್‍ಗಳಿಂದ ಪೈಪ್ ಸಹಾಯದಿಂದ ಕ್ಯಾನ್‍ಗಳಿಗೆ ತೈಲ ತುಂಬಿಸುವ ಚಿತ್ರಗಳು ಈ ಸಂಜೆ ಕೈಗೆ ಸಿಕ್ಕಿಬಿದ್ದಿವೆ.

ಟ್ಯಾಂಕರ್ ಕನ್ನ ಹೇಗೆ?

ತೈಲ ದೊರೆಗಳಿಗೆ ತಲೆನೋವಾಗಿರುವ ಆಯಿಲ್ ಮಾಫಿಯಾಗೆ ಕಡಿವಾಣ ಹಾಕಲು ತೈಲ ಸಂಸ್ಥೆಗಳು ಹಲವಾರು ತಂತ್ರಗಳಿಗೆ ಮೊರೆ ಹೋಗಿವೆ. ಆದರೆ, ಈ ಯಾವ ತಂತ್ರಗಳೂ ಆಯಿಲ್ ಮಾಫಿಯಾದ ಮುಂದೆ ನಡೆಯುತ್ತಿಲ್ಲ. ಮಂಗಳೂರಿನ ಎಂಆರ್‍ಪಿಎಲ್ ಸಂಸ್ಥೆಯಲ್ಲಿ ಟ್ಯಾಂಕರ್‍ಗಳಿಗೆ ತೈಲ ಭರ್ತಿ ಮಾಡಿದ ನಂತರ ಟ್ಯಾಂಕರ್‍ಗೆ ಬೀಗ ಜಡಿದು ಒಂದು ಕೀ ಚಾಲಕನ ಬಳಿ ಇದ್ದರೆ. ಮತ್ತೊಂದು ಕೀ ತೈಲ ಪಡೆಯುವ ಮಾಲೀಕನ ಬಳಿ ಇರುತ್ತದೆ. ಈ ಎರಡೂ ಕೀಗಳನ್ನು ಬಳಸಿದರೆ ಮಾತ್ರ ಬೀಗ ಒಪನ್ ಆಗುವುದು.  ಆದರೆ, ಮಾಫಿಯಾದಲ್ಲಿ ಪಳಗಿರುವ ಕೈಗಳು ತಮ್ಮ ಚಮತ್ಕಾರದಿಂದ ಯಾವುದೇ ಕೀಗಳ ಸಹಾಯವಿಲ್ಲದೆ ತೈಲ ಕದಿಯುವುದರಲ್ಲಿ ನಿಸ್ಸೀಮರು. ಈ ದಂಧೆಕೋರರ ಕೈಚಳಕಕ್ಕೆ ಕಡಿವಾಣ ಹಾಕಲು ಪೊಲೀಸರಿಗೂ ಸಾಧ್ಯವಾಗಿಲ್ಲ.

Oil-Mafia--02

ದಂಧೆ ನಡೆಯುವುದು ಹೇಗೆ?

ಭೂಗತ ಪಾತಕಿಗಳ ಈ ದಂಧೆಗೆ ಬೆಂಬಲ ನೀಡುತ್ತಿರುವುದೇ ಟ್ಯಾಂಕರ್‍ಗಳ ಚಾಲಕರು. ಬೆಂಬಲ ನೀಡದಿದ್ದರೆ ಅವರ ಕತೆ ಅಷ್ಟೆ. ಜೀವ ಭಯದಿಂದ ಚಾಲಕರೂ ಕೂಡ ಆಯಿಲ್ ಮಾಫಿಯಾದ ಒಂದು ಭಾಗವಾಗಿ ಪರಿವರ್ತನೆಗೊಂಡಿದ್ದಾರೆ. ಮಂಗಳೂರಿನಿಂದ ಹೊರಡುವ ಟ್ಯಾಂಕರ್‍ಗಳು ಊಟಕ್ಕೆ ನಿಲ್ಲಿಸುವುದೇ ಆಯಿಲ್ ಮಾಫಿಯಾ ಕಾರ್ಯಾಚರಣೆ ನಡೆಸುವ ನಿರ್ಜನ ಪ್ರದೇಶಗಳ ಸಮೀಪದ ಡಾಬಾಗಳ ಬಳಿ.ನಿರ್ಜನ ಪ್ರದೇಶದಲ್ಲಿ ಟ್ಯಾಂಕರ್ ನಿಲ್ಲಿಸುವ ಚಾಲಕ ಮತ್ತು ಕ್ಲೀನರ್ ಡಾಬಾಗೆ ತೆರಳಿ ಊಟ ಮಾಡುತ್ತಾರೆ. ಅವರು ಊಟ ಮಾಡಿ ಬರುವಷ್ಟರಲ್ಲೇ ಸಾವಿರಾರು ಲೀಟರ್ ತೈಲ ಮಂಗಮಾಯ ! ಚಾಲಕ ಮತ್ತು ಕ್ಲೀನರ್ ಏನೂ ನಡೆದೇ ಇಲ್ಲ ಎಂಬಂತೆ ವಾಹನ ಚಲಾಯಿಸಿಕೊಂಡು ತಮ್ಮ ಗುರಿಯತ್ತ ಸಾಗುತ್ತಾರೆ.

ತೈಲ ಪಡೆಯುವ ಸಂಸ್ಥೆ ಮತ್ತು ಘಟಕಗಳ ಮಾಲೀಕರ ಬಳಿ ಮತ್ತೊಂದು ಕೀ ಇರುವುದರಿಂದ ತಾವು ಪಡೆಯುವ ತೈಲಕ್ಕೆ ಕನ್ನ ಬಿದ್ದಿಲ್ಲ ಎಂಬ ಭ್ರಮೆಯಲ್ಲೇ ಇಂದಿಗೂ ಮಾಲೀಕರಿರುವುದು ವಿಪರ್ಯಾಸವೇ ಸರಿ. ಈಗಲಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಮಾಫಿಯಾಗೆ ಕಡಿವಾಣ ಹಾಕುವರೇ ಎಂದು ಕಾದು ನೋಡಬೇಕಿದೆ.

Facebook Comments

Sri Raghav

Admin