ಕುಂಭದ್ರೋಣ ಮಳೆಗೆ ಮುಂಬೈ ಮಹಾನಗರ ತತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Mumbai-Rain--014

ಮುಂಬೈ,ಸೆ.15-ಕಳೆದ ರಾತ್ರಿಯಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದ್ದು , ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಜೊತೆ ಮಿಂಚು,ಗುಡುಗು ಸಿಡಿಲುಗಳ ಆರ್ಭಟವೂ ಹೆಚ್ಚಿದ್ದು ಜನ ಮನೆಯಿಂದ ಹೊರಬರಲು ಹೆದರುವಂತಾಗಿದೆ.  ಧಾರಾಕಾರ ಮಳೆ ಇಂದು ಬೆಳಗಿನಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದು , ಸಬ್‍ಅರ್ಬನ್(ಉಪನಗರ) ರೈಲುಗಳ ಸಂಚಾರ ಸ್ಥಗಿತಗೊಂಡು ಲಕ್ಷಾಂತರ ಮಂದಿ ವಾಹನ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ.

ತಗ್ಗು ಪ್ರದೇಶಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದು ವಾಹನಗಳು ಎಲ್ಲಿಯದಲ್ಲೇ ಸ್ಥಗಿತಗೊಂಡಿವೆ. ಅನೇಕ ಮನೆಗಳು ಕುಸಿದಿರುವ ಘಟನೆಯೂ ನಡೆದಿದೆ. ಇನ್ನು ಎರಡು ದಿನ ಈ ಮಳೆ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೃಹನ್‍ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಗಿಳಿದಿದ್ದು ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 8.30ಕ್ಕೆ ಆರಂಭವಾದ ಧಾರಾಕಾರ ಮಳೆ ಇಂದು ಬೆಳಗ್ಗೆ 5.30ರ ವೇಳೆಗೆ 32 ಮಿ.ಮೀ ದಾಖಲಾಗಿದೆ. ಸಂತಾಕ್ರೂಸ್‍ನಲ್ಲಿ 51.2 ಮಿ.ಮೀ ದಾಖಲಾಗಿದೆ.  ಆದರೆ ಮುಂಬೈ ನಗರದ ಕೆಲವೆಡೆ ಮಳೆಯ ಪ್ರತಾಪ ಕಡಿಮೆಯಿದ್ದು ಆ ಪ್ರದೇಶಗಳಲ್ಲಿ ಜನ ಜೀವನ ಸಹಜ ಸ್ಥಿತಿಯಲ್ಲಿವೆ. ವಾಹನಗಳ ಸಂಚಾರ ಮುಂದುವರೆದಿದೆ.

Facebook Comments

Sri Raghav

Admin