ಕುಸಿದು ಬೀಳುತ್ತಿದೆ ಶಾಲೆಯ ಮಾಳಿಗೆ : ವಿದ್ಯಾರ್ಥಿಗಳು, ಶಿಕ್ಷಕರಿಗೆ ಕಾಡುತ್ತಿದೆ ಜೀವಭಯ

School--01 ಚನ್ನಪಟ್ಟಣ, ಸೆ.15- ಸರ್ಕಾರಿ ಶಾಲೆಯಲ್ಲಿ ಗಣತಿ ಕ್ಷೀಣಿಸುತ್ತಿದೆ. ಶುಲ್ಕ ಎಷ್ಟಾದರೂ ಸರಿಯೇ ಉತ್ತಮ ವಾತಾವರಣದಲ್ಲಿ ಮಕ್ಕಳು ಪಾಠ ಕಲಿತರೆ ಸಾಕೆಂಬಂತೆ ಸರ್ಕಾರಿ ಶಾಲೆಗಳಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಮುಖಾಂತರ ಖಾಸಗಿ ಶಿಕ್ಷಣದ ಕಡೆ ಮುಖ ಮಾಡುತ್ತಿದ್ದಾರೆ.ಇದೆಲ್ಲದಕ್ಕೂ ಕಾರಣ ಕನ್ನಡ ಶಾಲೆಗಳ ಸ್ಥಿತಿಗತಿ, ಅಲ್ಲಿನ ಪರಿಸರ ಜೊತೆಗೆ ಅಲ್ಲಿ ನೀಡುವ ಬೇಜವಾಬ್ದಾರಿಯ ವಿದ್ಯಾಭ್ಯಾಸ. ಅದಕ್ಕೆ ಸ್ಪಷ್ಟ ಉದಾಹರಣೆ ತಾಲ್ಲೂಕಿನಲ್ಲೊಂದು ಶಾಲೆಯ ಕಟ್ಟಡದ ಮೇಲ್ಛಾವಣಿ ಇಂಚಿಂಚೆ ಕಳಚಿ ಬೀಳುತ್ತಿದೆ. ಕೆಳಗೆ ಪುಸ್ತಕದ ಮೇಲೆ ಕಣ್ಣಾಡಿಸುವ ಮಕ್ಕಳು ಪದೇ ಪದೇ ಮೇಲ್ಛಾವಣಿ ನೋಡುವ ಪರಿಸ್ಥಿತಿ, ಬಾಗಿಲುಗಳೇ ಇಲ್ಲದೆ ನಿಂತಿರುವ ಶೌಚಾಲಯಗಳು ಇದೆಲ್ಲ ಸಮಸ್ಯೆಗಳಿರುವುದು ಬ್ರಹ್ಮಣೀಪುರ ಹಿರಿಯ ಪ್ರಾಥಮಿಕ ಪಾಠಶಾಲೆಯ ಚಿತ್ರಣವನ್ನು ತೆರೆದಿಟ್ಟಿದೆ.
ಹೌದು. ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಅಪಾಯವನ್ನು ಆಹ್ವಾನಿಸುವಂತೆ ಇರುವ ಶಾಲೆಯ ಕಟ್ಟಡವು ಶಾಲೆಯೆಡೆಗೆ ಧಾವಿಸುವ ಮಕ್ಕಳನ್ನು ಬಾರದಂತೆ ಭಯಪಡಿಸುತ್ತಿರುವುದು ಇಲ್ಲಿ ಕಂಡು ಬಂತು.

ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವ ಈ ಸಮಯದಲ್ಲಿ ಈ ಗ್ರಾಮದ ಶಾಲೆಯ ಸ್ಥಿತಿ ಮತ್ತಷ್ಟು ವೇಗವಾಗಿ ಮುಚ್ಚಲು ಪ್ರೇರಪಿಸುತ್ತಿರುವುದು ಒಂದು ರೀತಿಯ ದುರಂತವೇ ಸರಿ. ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಸ್ವಚ್ಛಂದವಾಗಿ , ಸ್ವತಂತ್ರವಾಗಿ ಕಲಿಯಬೇಕಾಗಿರುವ ಮಕ್ಕಳು ಕೊಠಡಿಯಲ್ಲಿರುವ ಅವಾಂತರವನ್ನು ಕಂಡು ಭಯದಿಂದಲೇ ಕಲಿಕೆಗೆ ತೆರಳುತ್ತಿರುವುದು ಆ ಮಕ್ಕಳ ಅಸಹಾಯಕತೆಯನ್ನು ಎತ್ತಿ ತೋರಿಸುವುದಲ್ಲದೆ ಗ್ರಾಮಾಂತರ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಭೀಕರತೆಯನ್ನು ಬಿಂಬಿಸುತ್ತಿರುವುದು ಈ ಶಾಲೆಗೆ ಸಾಕ್ಷಿಯಾಗಿದೆ.

School--02

ಈ ಶಾಲೆಯಲ್ಲಿ ಸುಮಾರು 94 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಮಕ್ಕಳಿಗೆ 5 ಮಂದಿ ಶಿಕ್ಷಕರಿದ್ದಾರೆ.ಇದೊಂದೇ ಸಂತಸದ ವಿಚಾರವಾದರೆ, ಶಾಲಾ ಕೊಠಡಿಗಳ ಮೇಲ್ಛಾವಣಿಯು ಅಲ್ಲಲ್ಲಿ ಉದುರಿದ್ದು, ಮತ್ತೆ ಮತ್ತೆ ಉದುರಲು ಸಜ್ಜಾಗಿ ಕೂತಂತಿದೆ. ಹಾಗೂ ಕೊಠಡಿಗಳ ಸ್ಥಿತಿಯು ಮಳೆ ಬಂದರೆ ನಿರಂತರವಾಗಿ ಹರಿಯುವುದಲ್ಲದೆ ಮಕ್ಕಳಿಗೆ ಮಳೆ ಬೀಳುವ ಸಾಕ್ಷ್ಯ ಚಿತ್ರವನ್ನು ತೋರಿಸಲು ಸೂಕ್ತವಾದಂತಿದೆ. ಶಾಲೆಯ ಹೊರಭಾಗದಲ್ಲೂ ಛಾವಣಿಯು ಬೀಳಲು ಸಿದ್ದವಾಗಿದ್ದು ಅಲ್ಲಲ್ಲಿ ಕಿತ್ತು ಉದುರುತ್ತಿರುವ ಸಿಮೆಂಟ್ ಚೆಕ್ಕೆಗಳ ಚಿತ್ತಾರವು ರವಿವರ್ಮನ ಚಿತ್ರಕಲೆಯನ್ನು ನಾಚಿಸುವಂತೆ ಬಿತ್ತರಗೊಂಡಿದೆ. ಮಕ್ಕಳು, ಶಿಕ್ಷಕರು ಯಾವಾಗ ಅವಘಡ ಸಂಭವಿಸುವುದೋ ಎಂಬ ಅಂಶ ಅಂಜಿಕೆಯಿಂದಲೇ ಪಾಠ, ಪ್ರವಚನಗಳನ್ನು ನಡೆಸುತ್ತಿದ್ದಾರೆ.

School--03

ಇಷ್ಟೆಲ್ಲಾ ಅವ್ಯವಸ್ಥೆಗಳ ಕೂಪವಾಗಿರುವ ಶಾಲೆಯ ದುಃಸ್ಥಿತಿಯನ್ನು ಕಂಡು ಕಾಣದಂತೆ ಕೂತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಜಾಣ ಕುರುಡನ್ನು ಪ್ರದರ್ಶಿಸುತ್ತ ಅಮಾಯಕ ಮಕ್ಕಳ ಬಾಳಲ್ಲಿ ಹುಡುಗಾಟವಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳು ಉನ್ನತಿಯಾಗಬೇಕು, ಗ್ರಾಮೀಣ ಮಕ್ಕಳ ಬೆಳವಣಿಗೆ ಪ್ರೋತ್ಸಾಹ ದೊರೆಯಬೇಕು ಎಂಬಿತ್ಯಾದಿ ಬಣ್ಣದ ಮಾತುಗಳನ್ನಾಡುವ ಜನಪ್ರತಿನಿಧಿಗಳು ಈ ಕಡೆ ಮುಖ ಮಾಡಿ ಸಮಸ್ಯೆ ಬಗೆಹರಿಸಿದರೆ ಒಳಿತು.

School--04

ಇಲ್ಲವಾದಲ್ಲಿ ಸರ್ಕಾರದಿಂದಲೇ ಸರ್ಕಾರಿ ಶಾಲೆಗಳು ಮುಚ್ಚಲು ಹುನ್ನಾರ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಸಿದ್ದವಾಗಬೇಕು.ಆದ್ದರಿಂದ ಇನ್ನಾದರೂ ಎಚ್ಚೆತ್ತು ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಲು ಸಜ್ಜಾದರೆ ಅಮಾಯಕ ಗ್ರಾಮೀಣ ಪ್ರದೇಶದ ಮಕ್ಕಳ ಉಳಿವಿಗಾಗಿ, ಅಭಿವೃದ್ದಿಗಾಗಿ ಶ್ರಮಿಸುವ ಕೆಲಸವಾಗಬೇಕು ಎಂಬುದೇ ನಮ್ಮೆಲ್ಲರ ಆಶಯ.

Facebook Comments

Sri Raghav

Admin