ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ, ಬಿಎಸ್‍ಎಫ್ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

BSF--041

ಜಮ್ಮು,ಸೆ.15-ಕಣಿವೆ ರಾಜ್ಯದ ಜಮ್ಮು ಜಿಲ್ಲೆ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಇಂದು ಕೂಡ ಮತ್ತೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಉಗ್ರರ ಗುಂಡಿಗೆ ಬಲಿಯಾದ ವೀರ ಯೋಧನನ್ನು 32 ವರ್ಷದ ಬ್ರಿಜೇಂದರ್ ಬಹದ್ದೂರ್ ಎಂದು ಗುರುತಿಸಲಾಗಿದೆ. ಬ್ರಿಜೇಂದರ್ ಬಹದ್ದೂರ್ ಉತ್ತರ ಪ್ರದೇಶದ ವಿದ್ಯಾಭವನ್ ನಾರಾಯ್‍ಪುರ್ ಗ್ರಾಮಕ್ಕೆ ಸೇರಿದವನಾಗಿದ್ದು , ಕಳೆದ ಕೆಲವು ವರ್ಷಗಳಿಂದ ಗಡಿ ಭದ್ರತೆಗೆ ನಿಯೋಜನೆಗೊಂಡಿದ್ದ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಮೋರ್ಟರ್ ಶೆಲ್ ದಾಳಿ ನಡೆಸಿರುವ ಪಾಕ್ ಸೇನೆ ಮಧ್ಯರಾತ್ರಿಯಿಂದ ಬೆಳಗಿನವರೆಗೆ ಗಡಿಯಲ್ಲಿ ಸುಮಾರು 12 ಸುತ್ತು ಗುಂಡು ಹಾರಿಸಿದೆ.  ರಾತ್ರಿ ಇಡೀ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಸೈನ್ಯಕ್ಕೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ ಕೂಡ ಪ್ರತಿ ಗುಂಡಿನ ದಾಳಿ ನಡೆಸಿತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‍ನ ಅವರ ಸಹವರ್ತಿ ಶಿಂಜೋ ಹಬೆ ಅವರು ಜಂಟಿ ಹೇಳಿಕೆ ನೀಡಿ ಪಾಕಿಸ್ತಾನ ಕೂಡಲೇ ತನ್ನ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಲಷ್ಕರ್-ಎ-ತೈಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವಂತೆ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆ ದೇಶದ ಸೈನಿಕರು ಈ ಕೃತ್ಯ ಎಸಗಿರುವುದು ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನ ತಳೆದಿರುವ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ.

Facebook Comments

Sri Raghav

Admin