ನವೆಂಬರ್ ಅಂತ್ಯಕ್ಕೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಇಂಟರ್‍ನೆಟ್ ಸೌಲಭ್ಯ

Internet--01

ಬೆಂಗಳೂರು,ಸೆ.15-ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಇಂಟರ್‍ನೆಟ್ ಸೌಲಭ್ಯ ಲಭ್ಯವಾಗಲಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ರಾಜ್ಯದ ಸುಮಾರು 6092 ಗ್ರಾಮ ಪಂಚಾಯ್ತಿಗಳಿಗೆ ಇಂಟರ್‍ನೆಟ್ ಸೌಲಭ್ಯ ಕಲ್ಪಿಸಲು ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.  ಸದ್ಯಕ್ಕೆ 643 ಗ್ರಾಪಂಗಳಿಗೆ ವೈಫೈ ಸೌಲಭ್ಯ ನೀಡಲಾಗಿದೆ. ಉಳಿದಿರುವ ಗ್ರಾಮ ಪಂಚಾಯ್ತಿಗಳಿಗೆ ನವೆಂಬರ್ ತಿಂಗಳೊಳಗೆ ಇಂಟರ್‍ನೆಟ್ ಸೇವೆ ನೀಡಲಾಗುವುದು ಎಂದು ಕೇಂದ್ರ ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣ ಸುಂದರರಾಜನ್ ಹೇಳಿದ್ದಾರೆ.

ಒಂದು ವೇಳೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೂ ಇಂಟರ್‍ನೆಟ್ ಸೌಲಭ್ಯ ಲಭ್ಯವಾದರೆ ದೇಶದಲ್ಲೇ ಈ ಸೌಲಭ್ಯ ಪಡೆದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಟ ಪಕ್ಷ 100 ಮಂದಿಗಾದರೂ ಇಂಟರ್‍ನೆಟ್ ಸೌಲಭ್ಯ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಕುಗ್ರಾಮಗಳ ಕಡೆ 700ರಿಂದ 800 ಎಂಬಿ ನೆಟ್ ಸೌಲಭ್ಯ ನೀಡಲಾಗುವುದು. ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ 3ಜಿ ಮತ್ತು 4ಜಿ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ.

ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ನೇರವಾಗಿ ಮನವರಿಕೆ ಮಾಡಿಕೊಡಬಹುದು. ಯಾವ ಯಾವ ಯೋಜನೆಗಳು ಜಾರಿಯಲ್ಲಿವೆ. ಫಲಾನುಭವಿಗಳಿಗೆ ಎಷ್ಟು ಪ್ರಮಾಣದಲ್ಲಿ ಸಿಗುತ್ತದೆ ಎಂಬುದನ್ನು ಮಾಹಿತಿ ನೀಡಬಹುದು.  ಹೀಗಾಗಿಯೇ ಇಂಟರ್‍ನೆಟ್ ಒದಗಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ದೇಶದಲ್ಲೇ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಪ್ರಶಂಸಿಸುತ್ತಿದ್ದಾರೆ.

3800 ಗ್ರಾಮ ಪಂಚಾಯ್ತಿಗಳಿಗೆ ಭಾರತ್ ನೆಟ್ ಹಾಗೂ ಉಳಿದ ಗ್ರಾಮ ಪಂಚಾಯ್ತಿಗಳಿಗೆ ಎನ್‍ಒಎಫ್‍ಎನ್ ಸಂಸ್ಥೆ ಮೂಲಕ ನೆಟ್ ಸೌಲಭ್ಯ ನೀಡಲಿದ್ದೇವೆ. ಈಗಾಗಲೇ ಮೈಸೂರು ಜಿಲ್ಲೆಯ 206 ಗ್ರಾಪಂಗಳಿಗೆ ಈ ಸೌಲಭ್ಯ ನೀಡಿರುವುದರಿಂದ ಜನರಿಗೆ ಹೆಚ್ಚಿನ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.
ಕೇಂದ್ರ ದೂರ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಇದು ಅನುಷ್ಠಾನವಾಗಲಿದ್ದು , ತ್ವರಿತ ಹಾಗೂ ಇತ್ತೀಚಿನ ತಂತ್ರಜ್ಞಾನವನ್ನೇ ಬಳಕೆ ಮಾಡಿಕೊಳ್ಳಲಿದ್ದೇವೆ. ರಾಜ್ಯ ಸರ್ಕಾರವೂ ಈ ಕಾರ್ಯಕ್ಕೆ ಕೈಜೋಡಿಸಲಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಹಂತ ಹಂತವಾಗಿ ಎಲ್ಲ ಕಡೆ ಇದರ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin