ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ : ಮುಳುಗಿದ ರಸ್ತೆಗಳು, ಜನಜೀವನ ಅಸ್ತವ್ಯಸ್ತ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಕಾರವಾರ/ಚಾಮರಾಜನಗರ, ಸೆ.15-ರಾಯಚೂರು, ಕಾರವಾರ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆಗಳು ಕುಸಿದಿವೆ. ಭಾರೀ ಗಾತ್ರದ ಮರಗಳು ರಸ್ತೆಗುರುಳಿ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸ್ಥಗಿತಗೊಂಡು ಜನರು ಕತ್ತಲೆಯಲ್ಲಿ ಕಾಲಹಾಕಬೇಕಾಗಿದೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಮೇಯಲು ಹೋಗಿದ್ದ ನಾಲ್ಕಾರು ಎಮ್ಮೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕಾರವಾರದಲ್ಲಿ ಭಾರೀ ಸುರಿಯುತ್ತಿದ್ದು, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಮಳೆಯ ರಭಸಕ್ಕೆ ಭಾರೀ ಗಾತ್ರದ ಮರಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಗೋಡೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಭತ್ತದ ಗದ್ದೆಗಳಿಗೆ ನೀರು ಹರಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸತತ ಮಳೆ ಸುರಿಯುತ್ತಿರುವುದರಿಂದ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಬಳ್ಳಾರಿಯಲ್ಲಿ ಭಾರೀ ಮಳೆಯಿಂದ ಅಪಾರ ನಷ್ಟ ಉಂಟಾಗಿರುವುದಲ್ಲದೆ, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಗಾಳಿಗೆ ಮರ, ವಿದ್ಯುತ್ ಕಂಬಗಳು ಬಿದ್ದಿವೆ.  ಕೆರೆಕಟ್ಟೆಗಳು ಕೋಡಿ ಬಿದ್ದು ಹರಿಯುತ್ತಿದ್ದು, ತಗ್ಗಿನ ಪ್ರದೇಶ ಜನರನ್ನು ಬೇರೆಡೆ ಸ್ಥಳಾಂತರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ರಾಯಚೂರು ನಗರದಲ್ಲಿ ಭಾರೀಮಳೆಯಾಗುತ್ತಿರುವ ಪರಿಣಾಮ ಅಂಗಡಿ, ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರ ಹಾಕಲು ನಾಗರಿಕರು ಪ್ರಯಾಸ ಪಡುತ್ತಿದ್ದಾರೆ. ಇಡೀ ನಗರ ಸಂಪೂರ್ಣ ಜಲಮಯವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಚಿತ್ರದುರ್ಗದ ಹಲವೆಡೆಯೂ ಮಳೆ ಅಬ್ಬರಿಸಿದ್ದು, ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಒಳಹರಿವು ಹೆಚ್ಚಾಗಿದೆ. ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದ ನಾಗಮಲೈಗೆ ತೆರಳುವ ಮಾರ್ಗ ಮಧ್ಯೆ ಹಳಿಯೂರು ಸಮೀಪ ಜಲಕಂಠಪ್ಪ ಮತ್ತು ಪುಟ್ಟಪ್ಪ ಎಂಬುವರಿಗೆ ಸೇರಿದಂತೆ ನಾಲ್ಕು ಎಮ್ಮೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಕಾಡಿನಲ್ಲಿ ಮೇಯಿಸಲು ಬೆಟ್ಟಕ್ಕೆ ಎಮ್ಮೆಗಳನ್ನು ಕರೆದೊಯ್ದಿದ್ದ ಸಂದರ್ಭದಲ್ಲಿ ಹಳ್ಳದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದ ಪರಿಣಾಮ ಪುಟ್ಟಪ್ಪ ಅವರ ಒಂದು ಎಮ್ಮೆ ಹಾಗೂ ಜಲಕಂಠ ಎಂಬುವರಿಗೆ ಸೇರಿದ ಮೂರು ಎಮ್ಮೆಗಳು ಕೊಚ್ಚಿ ಹೋಗಿವೆ. ಉಳಿದ ಎಮ್ಮೆಗಳು ಪಾರಾಗಿವೆ. ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.

Facebook Comments

Sri Raghav

Admin