ಹಣಕ್ಕಾಗಿ ಎಟಿಎಂಗಳಿಗೆ ಹೋಗೋ ಮುನ್ನ ಈ ಖದೀಮರ ಕೈಚಳಕದ ಬಗ್ಗೆ ತಿಳಿದುಕೊಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ATM-Bengaluru

ಬೆಂಗಳೂರು, ಸೆ.15- ಎಟಿಎಂ ಕೇಂದ್ರಗಳಲ್ಲಿ ರಹಸ್ಯ ಕ್ಯಾಮೆರಾ ಮತ್ತು ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಗ್ರಾಹಕರ ಕಾರ್ಡ್ ಸಂಖ್ಯೆ ಮತ್ತು ಪಾಸ್‍ವರ್ಡ್‍ಗಳನ್ನು ಕದಿಯಲು ಯತ್ನಿಸುತ್ತಿದ್ದ ಭಾರೀ ಜಾಲವನ್ನು ಭೇದಿಸಿರುವ ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಕ್ರೆಡಿಟ್ ಮತ್ತು ಡೆಬಿಟ್‍ಗಳ ಮಾಹಿತಿಯನ್ನು ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದ ರೊಮಾನಿಯಾ ದೇಶದ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್ (40) ಮತ್ತು ಹಂಗೇರಿಯಾದ ಮಾರೆ ಜಾನೋಸ್ (44) ಎಂಬ ವಿದೇಶಿಗರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಸೆ.12ರಂದು ಕೋಟಕ್‍ಮಹೀಂದ್ರಾ ಬ್ಯಾಂಕ್‍ನ ಅಧಿಕಾರಿಗಳು ಸಿಐಡಿಯ ಸೈಬರ್ ಕ್ರೈಂ ಘಟಕಕ್ಕೆ ಒಂದು ದೂರು ನೀಡಿದ್ದು, ಆ ದೂರಿನಲ್ಲಿ ತಮ್ಮ ಕೆಲವು ಎಟಿಎಂ ಕೇಂದ್ರಗಳಲ್ಲಿ ಅಕ್ರಮವಾಗಿ ಕಾರ್ಡ್ ಸ್ಕಿಮ್ಮಿಂಗ್ ಉಪಕರಣಗಳನ್ನು ಅಳವಡಿಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಬ್ಯಾಂಕಿನ ತಾಂತ್ರಿಕ ತಂಡ ಎಂ.ಜಿ.ರಸ್ತೆಯಲ್ಲಿರುವ ಶಾಖೆಯಲ್ಲಿದ್ದ ಸ್ಕಿಮ್ಮಿಂಗ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದನ್ನು ಪೊಲೀಸರಿಗೆ ನೀಡಿದ್ದರು.

ವಂಚಕರ ಪತ್ತೆಗಾಗಿ ಸಿಐಡಿಯ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ತಾಂತ್ರಿಕ ವರ್ಗದವರನ್ನು ಒಳಗೊಂಡ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು.  ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೋಟಕ್ ಮಹೀಂದ್ರ ಬ್ಯಾಂಕ್‍ನ ಎಟಿಎಂ ಒಂದರಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ದಿನವೇ ಈ ತಂಡ ಮಾಹಿತಿ ಪಡೆದುಕೊಂಡಿದೆ.  ತಕ್ಷಣ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಅಧೀಕ್ಷಕರಾದ ಸಚಿನ್‍ಗೋರ್‍ಪಡೆ, ಪೊಲೀಸ್ ಉಪಾಧೀಕ್ಷಕರಾದ ಬದರಿನಾಥ್, ಇನ್ಸ್‍ಪೆಕ್ಟರ್‍ಗಳಾದ ಆನಂದ್, ಮಂಜುನಾಥ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಹಾಗೂ ಬ್ಯಾಂಕ್‍ನ ತಾಂತ್ರಿಕ ಸಿಬ್ಬಂದಿಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಅಂದು ಮಧ್ಯಾಹ್ನ 12 ಗಂಟೆಯಿಂದ ಅನುಮಾನ ಬಾರದಂತೆ ವಂಚಕರಿಗಾಗಿ ಮಫ್ತಿಯಲ್ಲಿ ಕಣ್ಗಾವಲು ಮಾಡುತ್ತಿದ್ದರು.

ಈ ವೇಳೆ ಮತ್ತೊಂದು ತಂಡ ವಿದೇಶಿಗರು ಹೆಚ್ಚಾಗಿ ತಂಗುವ ಹೋಟೆಲ್‍ಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿತು.
ಅಂದು ರಾತ್ರಿ 10ಗಂಟೆ ವೇಳೆಗೆ ವ್ಯಕ್ತಿಯೊಬ್ಬ ತನ್ನ ಸಹಚರನೊಂದಿಗೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿದ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಟಿಎಂ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು. ಕಣ್ಗಾವಲಿನಲ್ಲಿದ್ದ ಪೊಲೀಸರು ಈತನ ಚಲನವಲನ ಗಮನಿಸುತ್ತಲೇ ಇದ್ದರು.
ಈತನಿಗೆ ಇವರು ಪೊಲೀಸರಿರಬಹುದು ಎಂದು ಅನುಮಾನಗೊಂಡು ಎಟಿಎಂನಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್ ಉಪಕರಣ ತೆಗೆದುಕೊಳ್ಳದೆ ಟ್ಯಾಕ್ಸಿಯಲ್ಲಿ ಪರಾರಿಯಾಗಲು ಯತ್ನಿಸಿದಾಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ವೇಳೆ ತಾವು ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಾಗಿ ತಿಳಿಸಿದ್ದು, ತಾವು ಯುಕೆನಲ್ಲಿ ವಾಸವಿರುವ ತಮ್ಮ ಸಹಚರರ ನಿರ್ದೇಶನದಂತೆ ಅಪರಾಧ ಕೃತ್ಯಗಳನ್ನು ಮಾಡುತ್ತಿದುದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್ ಮತ್ತು ಸಹಚರ ಮಾರೆ ಜಾನೋಸ್ ಭಾರತದಲ್ಲಿ ಕ್ರಿಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಕಳ್ಳತನ ಮಾಡುವ ಉದ್ದೇಶದಿಂದ ಬಂದಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾರೆ.
ಇವರಿಬ್ಬರು ಸೆ.1ರಂದು ಬೆಂಗಳೂರಿಗೆ ಬಂದು ಎಂ.ಸಿ.ರಸ್ತೆಯ ಕರ್ಜನ್‍ಕೋರ್ಟ್ ಹೋಟೆಲ್‍ನಲ್ಲಿ ಉಳಿದುಕೊಂಡು ಎಟಿಎಂಗಳಿಗೆ ಸ್ಕಿಮ್ಮಿಂಗ್ ಅಳವಡಿಸಿ ಕಾರ್ಡ್‍ಗಳ ಮಾಹಿತಿಯನ್ನು ಪಡೆದುಕೊಳ್ಳುತ್ತಿದುದ್ದಾಗಿ ಹಾಗೂ ಇತ್ತೀಚೆಗೆ ಮಹಾಲಕ್ಷ್ಮಿಲೇಔಟ್‍ನ ಆರ್.ಜಿ.ರಾಯಿಲ್ ಹೋಟೆಲ್‍ಗೆ ವಾಸ್ತವ್ಯ ಬದಲಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋಟಕ್ ಮಹೀಂದ್ರ ಬ್ಯಾಂಕ್‍ನ ಎಟಿಎಂ, ಗರುಡಾ ಮಾಲ್‍ನಲ್ಲಿರುವ ಸಿಟಿ ಬ್ಯಾಂಕ್ ಎಟಿಎಂನಲ್ಲಿ ಎರಡು ಬಾರಿ, ಎಂ.ಜಿ.ರಸ್ತೆಯ ಕೆನರಾಬ್ಯಾಂಕ್‍ನ ಎಟಿಎಂನಲ್ಲಿ ಎರಡು ಬಾರಿ, ಟ್ರಿನಿಟಿ ಮೆಟ್ರೋ ಬಳಿಯ ಕೋಟಕ್ ಮಹೀಂದ್ರ ಬ್ಯಾಂಕ್‍ನ ಎಟಿಎಂ ಹಾಗೂ ಬ್ರಿಗೆಡ್ ರಸ್ತೆ ಜಂಕ್ಷನ್‍ನಲ್ಲಿನ ಕೋಟಕ್ ಬ್ಯಾಂಕ್‍ನ ಎಟಿಎಂನಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್ ಉಪಕರಣಗಳನ್ನು ವಾಪಸ್ ತೆಗೆದುಕೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಸ್ಕಿಮ್ಮಿಂಗ್ ಉಪಕರಣಗಳು, ಕಂಪ್ಯೂಟರ್‍ಗಳು, ಮೆಮೋರಿಕಾರ್ಡ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಪರಾಧದ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‍ಗಳು ಹಾಗೂ ಆರ್‍ಬಿಐಗೆ ಮಾಹಿತಿ ನೀಡಿದ್ದು, ಎಟಿಎಂ ಬಳಕೆದಾರರ ಕಾರ್ಡ್‍ನ ಮಾಹಿತಿಗಳು ಕಳ್ಳತನವಾಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

Facebook Comments

Sri Raghav

Admin