23ರಂದು ಸಿದ್ದು ಜನ್ಮ ಜಾಲಾಡ್ತೀನಿ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

BS-Yadiyurappa
ಬೆಂಗಳೂರು, ಸೆ.15- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಕಾಂಗ್ರೆಸ್ ಸಚಿವರು, ಶಾಸಕರು ನಡೆಸಿದ ಭ್ರಷ್ಟಾಚಾರ ಹಗರಣಗಳನ್ನು ಇದೇ 23ರಂದು ದಾಖಲೆ ಸಮೇತ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧ- ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಿರತರಾಗಿರುವ ವಿಧಾನ ಪರಿಷತ್ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇವರು ನಡೆಸಿರುವ ಹಗಲು ದರೋಡೆಯನ್ನು ಅಧಿಕೃತ ದಾಖಲೆಗಳ ಮೂಲಕ ಬಯಲು ಮಾಡುವುದಾಗಿ ಗುಡುಗಿದರು. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರಕ್ಕೆಹೊರತಾಗಿಲ್ಲ. ತನಿಖೆ ನಡೆಸಬೇಕಾದ ಸಂಸ್ಥೆಗಳೇ ಮುಚ್ಚಿ ಹೋಗಿವೆ. ಕೆಲವು ಅವರ ಅಧೀನದಲ್ಲಿವೆ. ಹಾಗಾಗಿ ಯಾವುದೇ ಭ್ರಷ್ಟಾಚಾರದ ಆರೋಪಗಳು ಹೊರಬರಲು ಸಾಧ್ಯವಾಗಿಲ್ಲ ಎಂದು ಹೇಳಿದರು. ನಾನು ಪುಕ್ಕಟೆ ಪ್ರಚಾರಕ್ಕಾಗಿ ಆಧಾರ ರಹಿತವಾಗಿ ಇಂತಹ ಆರೋಪ ಮಾಡುತ್ತಿಲ್ಲ. ಅಧಿಕೃತ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ ಈ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡುವುದೇ ನನ್ನ ಗುರಿ ಎಂದರು.

ಕಡತಗಳು ನಾಪತ್ತೆ:

ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಹಾಕಲು ಹಲವು ಸರ್ಕಾರಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಕೆಲವು ಭ್ರಷ್ಟಾಚಾರ ಎಸಗಿರುವ ಕಡತಗಳನ್ನು ರಾತ್ರೋರಾತ್ರಿ ನಾಪತ್ತೆ ಮಾಡುವ ಕೆಲಸದಲ್ಲಿ ನಿರತವಾಗಿದೆ. ಯಾವುದೇ ಮಾಹಿತಿ ಸಿಗದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಪ್ರಮುಖ ಕಡತಗಳು ಮಂಗಮಾಯವಾಗಲು ಮುಖ್ಯಮಂತ್ರಿಯವರ ಕುಮ್ಮಕ್ಕು ಕಾರಣ ಎಂದು ಅವರು ಆರೋಪಿಸಿದರು.

ಕಳೆದ 10 ದಿನಗಳಿಂದ ವಿಧಾನ ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇದು ಕೂಗಳತೆ ದೂರದಲ್ಲಿದ್ದರೂ ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಅವರನ್ನು ಭೇಟಿ ಮಾಡಿ ಬೇಡಿಕೆ ಬಗ್ಗೆ ಮಾತುಕತೆ ನಡೆಸದಿರುವುದು ಅವರ ಸರ್ವಾಧಿಕಾರಿ ಧೋರಣೆಗೆ ಹಿಡಿತ ಕೈಗನ್ನಡಿಯಾಗಿದೆ ಎಂದು ಟೀಕಿಸಿದ ಯಡಿಯೂರಪ್ಪ ಪರಿಷತ್ ಸದಸ್ಯರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.

Facebook Comments

Sri Raghav

Admin