ಕಾಂಗ್ರೆಸ್‍ನಲ್ಲಿನ ಬಿಕ್ಕಟ್ಟು ಬಗೆಹರಿಸಲು ಸೋನಿಯಾ ಮಧ್ಯಪ್ರವೇಶಕ್ಕೆ ಸಿಎಂ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Sonia--Siddaramaiah

ಬೆಂಗಳೂರು, ಸೆ.16-ಸಚಿವ ಸಂಪುಟ ಪುನಾರಚನೆ ನಂತರ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಬಿಗುವಿನ ವಾತಾವರಣ ತಿಳಿಗೊಳಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಲು ಮುಂದಾಗಿದ್ದಾರೆ.  ಇಂದು ಮಧ್ಯಾಹ್ನ ಮುಖ್ಯಮಂತ್ರಿ ಅವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ವೇಣುಗೋಪಾಲ್ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಕೂಡ ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಸಂದರ್ಭದಲ್ಲಿ ದೆಹಲಿಗೆ ತೆರಳುತ್ತಿರುವ ಸಿದ್ದರಾಮಯ್ಯನವರು ಪರಮೇಶ್ವರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕರ ನಡುವಳಿಕೆಗಳ ವಿರುದ್ದ ದೂರ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ಪುನಾರಚನೆ ನಂತರ ಪರಮೇಶ್ವರ್ ಅವರು ಮುಖ್ಯಮಂತ್ರಿ ವಿರುದ್ಧ ಮುನಿಸಿಕೊಂಡಿದ್ದು ಅವರ ಜೊತೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಮುಖ ತಿರುಗಿಸಿದ್ದಾರೆ. ಅವರ ಈ ಮೌನ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದ್ದು , ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುವುದರ ಜೊತೆಗೆ ಪರಮೇಶ್ವರ್ ಅವರ ಬಣದಿಂದ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಗಳು ಬರುತ್ತಿವೆ.

ಇದು ಚುನಾವಣಾ ವರ್ಷವಾಗಿದ್ದು , ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಒಗ್ಗಟ್ಟು ಕಾಯ್ದುಕೊಂಡು ಚುನಾವಣೆ ಎದುರಿಸಲು ಸಜ್ಜಾಗಬೇಕೆ ವಿನಃ ನಮ್ಮ ನಮ್ಮಲ್ಲೇ ವೈಮನಸ್ಸು ಮೂಡಿಸುವುದು ಸರಿಯಲ್ಲ. ಸ್ವಾರ್ಥ ಸಾಧನೆಗಾಗಿ ನೀಡುವ ಹೇಳಿಕೆಗಳು ಹಾಗೂ ಧಕ್ಕೆ ಉಂಟಾಗುವಂತಹ ನಡವಳಿಕೆಗಳಿಗೆ ಕಡಿವಾಣ ಹಾಕಲು ಸೋನಿಯಾ ಅವರಲ್ಲಿ ಸಿಎಂ ಮನವಿ ಮಾಡಲಿದ್ದಾರೆ. ಹಿರಿಯ ಮುಖಂಡ ಜನಾರ್ದನ ಪೂಜಾರಿ ಸೇರಿದಂತೆ ಇನ್ನು ಕೆಲವರು ಬಹಿರಂಗ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕುವಂತೆ ಸೋನಿಯಾ ಅವರಿಗೆ ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2ನೇ ಪಟ್ಟಿಗೆ ಲಾಬಿ:

ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಷಯದಲ್ಲಿ ಸಾಕಷ್ಟು ಅಪಸ್ವರಗಳು ಕೇಳಿಬಂದಿವೆ. ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್‍ನ ಬಹುತೇಕ ಮುಖಂಡರನ್ನು ಸಿದ್ದರಾಮಯ್ಯ ಅವರ ಬೆಂಬಲಿಗರು ಎಂಬ ಕಾರಣಕ್ಕಾಗಿ ಪದಾಧಿಕಾರಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಈ ವಿಷಯವಾಗಿ ಸಾಕಷ್ಟು ಚರ್ಚೆಗಳು ನಡೆದಿವೆ. ಮತ್ತೊಂದು ಪಟ್ಟಿಯಲ್ಲಿ ಇನ್ನಷ್ಟು ಪದಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ಆ ಪಟ್ಟಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನಾಯಕರಿಗೆ ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.   ಈ ಎಲ್ಲ ವಿಷಯಗಳ ಬಗ್ಗೆ ಸೋನಿಯಾ ಗಾಂಧಿ ಭೇಟಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಲಿದ್ದು , 2ನೇ ಪಟ್ಟಿಯ ಪದಾಧಿಕಾರಿಗಳ ಹೆಸರನ್ನು ಸೂಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin