ಚರ್ಚೆಗೆ ನೀವೇ ಸಮಯ ನಿಗದಿ ಮಾಡಿ : ಬಿಜೆಪಿಗೆ ವೇಣುಗೋಪಾಲ್ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Venugopal--01

ಬೆಂಗಳೂರು, ಸೆ.16- ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ವಿಷಯವಾಗಿ ಬಿಜೆಪಿ ಜೊತೆ ಬಹಿರಂಗ ಚರ್ಚೆಗೆ ಆ ಪಕ್ಷದ ನಾಯಕರೇ ಸಮಯ ಮತ್ತು ದಿನಾಂಕಗಳನ್ನು ನಿಗದಿಪಡಿಸಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಪ್ರತಿ ಸವಾಲು ಹಾಕಿದ್ದಾರೆ.  ಕಳೆದ ಬಾರಿ ಬೆಂಗಳೂರಿಗೆ ಆಗಮಿಸಿದ್ದಾಗ ವೇಣುಗೋಪಾಲ್ ಅವರು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಗಿಂತ ಕಾಂಗ್ರೆಸ್ ಸರ್ಕಾರದಲ್ಲಿ ಇದ್ದ ಅವಧಿಯಲ್ಲಿ ಹೆಚ್ಚು ಅಭಿವೃದ್ದಿ ಕಾರ್ಯಗಳು ನಡೆದಿವೆ.

ಈ ಬಗ್ಗೆ ಬಹಿರಂಗ  ವೇದಿಕೆಯಲ್ಲಿ ಚರ್ಚಿಸಲು ಸಿದ್ದರಾಗಿದ್ದೇವೆ. ಅಷ್ಟೇ ಅಲ್ಲ ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದ ಕರ್ಮಕಾಂಡಗಳ ಬಗ್ಗೆಯೂ ಚರ್ಚಿಸಲು ನಾವು ತಯಾರಾಗಿದ್ದೇವೆ ಎಂದು ಸವಾಲು ಹಾಕಿದ್ದರು.   ಈ ಸವಾಲನ್ನು ಸ್ವೀಕರಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಚರ್ಚೆಗೆ ನಾವು ಸಿದ್ಧವಿದ್ದು , ಕಾಂಗ್ರೆಸ್ ಸಮಯ ಮತ್ತು ದಿನಾಂಕ ನಿಗದಿಪಡಿಸಲಿ ಎಂದು ತಿರುಗೇಟು ನೀಡಿದ್ದರು.  ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್ ಅವರು, ಬಿಜೆಪಿಯವರೇ ಚರ್ಚೆಯ ಸ್ಥಳ ಮತ್ತು ದಿನಾಂಕಗಳನ್ನು ನಿಗದಿಪಡಿಸಲಿ ಎಂದು ಪ್ರತಿ ಸವಾಲು ಹಾಕಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಇಲ್ಲಿ ಕಾನೂನು -ಸುವ್ಯವಸ್ಥೆಗಳನ್ನು ಹಾಳು ಮಾಡಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.  ಕಾನೂನು ಸುವ್ಯವಸ್ಥೆ ಹಾಳುಗೆಡುವ ನಿಟ್ಟಿನಲ್ಲಿ ಬಿಜೆಪಿಯವರು ಕೋಮುಶಕ್ತಿ ಗುಂಪುಗಳು, ಸಂಘಟನೆಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಅಂತಹ ಕಡಿಗೇಡಿ ಕೆಲಸಗಳಿಗೆ ಅವಕಾಶ ಕೊಟ್ಟಿಲ್ಲ. ಇದರಿಂದ ಹತಾಶವಾಗಿರುವ ಬಿಜೆಪಿ ಅನಗತ್ಯ ಪ್ರತಿಭಟನೆಗಳನ್ನು ನಡೆಸಲು ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಏನೇ ಮಾಡಿದರೂ ಕಾನೂನು ಸುವ್ಯವಸ್ಥೆಗಳನ್ನು ಹಾಳು ಮಾಡಲು ರಾಜ್ಯ ಸರ್ಕಾರ ಬಿಡುವುದಿಲ್ಲ. ಅಂತಹವುಗಳಿಗೆ ಅವಕಾಶವನ್ನೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.  ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಟೀಕೆ ಮಾಡಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ. ಗೌರಿ ಲಂಕೇಶ್ ಅಂತ್ಯ ಸಂಸ್ಕಾರದ ಸಂದರ್ಭ ಬಿಜೆಪಿಯ ಯಾವೊಬ್ಬ ಪ್ರಮುಖ ನಾಯಕರೂ ಹಾಜರಾಗಿಲ್ಲ. ಹತ್ಯೆಗೆ ಸಂಬಂಧಿಸಿ ಪ್ರತಿಕ್ರಿಯಿಸಲು ಮತ್ತು ಟೀಕೆ ಮಾಡಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.   ಕೇವಲ ರಾಜಕಾರಣಕ್ಕಾಗಿ ರಾಜಕಾರಣ ಮಾಡುವುದು, ಅನಗತ್ಯ ಪ್ರತಿಭಟನೆಗಳನ್ನು ಮಾಡುವುದು, ಅಸಂಬದ್ಧ ಆರೋಪಗಳನ್ನು ಮಾಡುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

Facebook Comments

Sri Raghav

Admin