ಬ್ಯಾಂಕ್ ಬಳಿ ಗಮನ ಸೆಳೆದು ಹಣ ದೋಚುತ್ತಿದ್ದ ಓಜಿ ಕುಪ್ಪಂ ಗ್ಯಾಂಗ್’ನ ಸದಸ್ಯರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಬೆಂಗಳೂರು, ಸೆ.16-ಬ್ಯಾಂಕ್‍ಗಳಿಂದ ಹಣ ಡ್ರಾ ಮಾಡಿಕೊಂಡು ಹೋಗುವವರ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುತ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯರಿಬ್ಬರನ್ನು ಈಶಾನ್ಯ ವಿಭಾಗದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರು ಬ್ಯಾಂಕ್‍ಗಳಿಂದ ಹಣ ಡ್ರಾ ಮಾಡಿ ಕೊಂಡೊಯ್ಯುವ ಸಮಯದಲ್ಲಿ ಬ್ಯಾಂಕ್‍ಗಳ ಬಳಿ ಸುತ್ತಾಡುತ್ತಾ ವಿಳಾಸ ಕೇಳಿ ಅಥವಾ ನೆಲದ ಮೇಲೆ ನೋಟನ್ನು ಹಾಕಿ ಅವರ ಗಮನ ಸೆಳೆದು ಹಣವಿದ್ದ ಬ್ಯಾಗನ್ನು ಲಪಟಾಯಿಸುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆಂಧ್ರಪ್ರದೇಶ ಮೂಲದ ಓಜಿಕುಪ್ಪಂನ ಸುರೇಶ್ ಹಾಗೂ ಶ್ರೀನಿವಾಸುಲು ಎಂಬುವರನ್ನು ಬಂಧಿಸಿ ನಗರದಲ್ಲಿ ನಡೆದಿದ್ದ 50ಕ್ಕೂ ಹೆಚ್ಚು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.  ಆಂಧ್ರಪ್ರದೇಶದ ಓಜಿಕುಪ್ಪಂನ ತಂಡದ ಸದಸ್ಯರು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಮನೆ ಮಾಡಿಕೊಂಡು ಅಪರಾಧ ಮಾಡುತ್ತಿದ್ದುದಲ್ಲದೆ, ಬ್ಯಾಂಕ್‍ಗಳ ಬಳಿ ಸುತ್ತಾಡುತ್ತಾ ಹಣ ಲಪಟಾಯಿಸುತ್ತಿದ್ದುದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿ ಸುರೇಶ ಹೆಗಡೆನಗರ, ಒಡ್ಡರಪಾಳ್ಯ, ಬೇಗೂರಿನಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಅಲ್ಲಿ ತನ್ನ ತಂಡದ ಸದಸ್ಯರನ್ನು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದನು.

ಮನೆ ಮಾಲೀಕರಿಗೆ ತಾನು ಗ್ರಾನೈಟ್ ಕೆಲಸ ಮತ್ತು ಮನೆ ಕಟ್ಟುವ ಕಂಟ್ರ್ಯಾಕ್ಟರ್ ಕೆಲಸ ಮಾಡುವುದಾಗಿ ತಿಳಿಸಿದ್ದು, ಆಗಾಗ ಮನೆ ಬದಲಿಸುತ್ತಿದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 4 ಬೈಕ್, 4 ಚಾಕುಗಳು, 30ಕ್ಕೂ ಹೆಚ್ಚು ಜೊತೆ ಬಟ್ಟೆಗಳು, ಹೆಲ್ಮೆಟ್‍ಗಳು, ಮೊಬೈಲ್‍ಗಳು, ಸಿಮ್ ಕಾರ್ಡ್‍ಗಳು, ಹಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ಓಜಿಕುಪ್ಪಂನ ಸುಮಾರು 30 ರಿಂದ 40 ಮಂದಿ ಬೆಂಗಳೂರಿನಲ್ಲಿ ನೆಲೆಸಿ ಕಳ್ಳತನ ನಡೆಸುತ್ತಿರುವ ಬಗ್ಗೆ ಸುಳಿವು ದೊರೆತಿದ್ದು, ತನಿಖೆ ಮುಂದುವರೆಸಲಾಗಿದೆ. ಈ ಗ್ಯಾಂಗ್ ಸದಸ್ಯರನ್ನು ಪತ್ತೆ ಮಾಡಿದ ಇನ್ಸ್‍ಪೆಕ್ಟರ್ ಶ್ರೀನಿವಾಸ್‍ರಾಜ್ ಅವರ ತಂಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.

Facebook Comments

Sri Raghav

Admin