ಹೂಳು ತೆಗೆಯಲು 8 ರೋಬೊಟಿಕ್ ಯಂತ್ರಗಳ ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

Mayort-0

ಬೆಂಗಳೂರು, ಸೆ.16- ರಾಜಕಾಲುವೆಗಳಲ್ಲಿರುವ ಹೂಳು ಹೊರತೆಯಲು ಎಂಟು ರೋಬೊಟಿಕ್ ಯಂತ್ರ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು.  ಮೈಸೂರು ರಸ್ತೆ-ಸಿಲ್ಕ್‍ಬೋರ್ಡ್ ಜಂಕ್ಷನ್ ಸಂಪರ್ಕಿಸುವ ಮಾರ್ಗಮಧ್ಯೆ ನಿರ್ಮಿಸಲಾಗಿರುವ ಹೊಸಕೆರೆಹಳ್ಳಿ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.  ರಾಜಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲಾಗದೆ ನಗರದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹಾಗಾಗಿ ತ್ವರಿತವಾಗಿ ಹೂಳು ತೆಗೆಯಲು ರೋಬೊಟಿಕ್ ಯಂತ್ರ ಖರೀದಿಸಲು ತೀರ್ಮಾನಿಸಿದ್ದೇವೆ ಎಂದರು.

ಒಟ್ಟು ಎಂಟು ರೋಬೊಟಿಕ್ ಯಂತ್ರ ಖರೀದಿಸಿ ಒಂದೊಂದು ವಲಯದಲ್ಲಿ ಹೂಳು ತೆಗೆಸಲಾಗುವುದು ಎಂದು ಹೇಳಿದರು.  ಕಳೆದ ಆಗಸ್ಟ್‍ನಲ್ಲಿ ದಾಖಲೆ ಮಳೆ ಆಗಿತ್ತು. ಹೀಗಾಗಿ ಜನ ಸಾಕಷ್ಟು ತೊಂದರೆ ಅನುಭವಿಸಿದರು. ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ನೂರಾರು ಕೋಟಿ ಹಣ ವೆಚ್ಚ ಮಾಡಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವಿಷ್ಯದ ಬೆಂಗಳೂರು ಅಭಿವೃದ್ಧಿಗಾಗಿ ಒಂದು ಬ್ಲೂಪ್ರಿಂಟ್ ಸಿದ್ದಪಡಿಸಿದ್ದಾರೆ. ಅದಕ್ಕೆ ತಕ್ಕನಾದ ದೂರದೃಷ್ಟಿ ಅಭಿವೃದ್ಧಿ ಕಾಮಗಾರಿಯನ್ನು ನಾವು ಹಮ್ಮಿಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ಮುಖ್ಯಮಂತ್ರಿಗಳು ಅನುದಾನ ಕೂಡಾ ಬಿಡುಗಡೆ ಮಾಡಿದ್ದಾರೆ. ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
2020ರ ವೇಳೆಗೆ ನಗರದ ತ್ಯಾಜ್ಯ ನೀರನ್ನು ಸಂಪೂರ್ಣ ಸಂಸ್ಕರಣೆ ಮಾಡಲಾಗುವುದು. ಜತೆಗೆ 400 ಕಿ.ಮೀ.ನಷ್ಟು ರಾಜಕಾಲುವೆಯನ್ನು ಕಾಂಕ್ರೀಟ್‍ಕರಣ ಮಾಡಲಾಗುವುದು ಎಂದು ಜಾರ್ಜ್ ಹೇಳಿದರು.

ನಗರದ ಅಭಿವೃದ್ಧಿ ದೃಷ್ಟಿಯಿಂದ ಕೋಟ್ಯಂತರ ರೂ.ಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ. ಆದರೆ, ಕೆಲವರು ಕಿಕ್‍ಬ್ಯಾಕ್ ಆರೋಪ ಮಾಡುತ್ತಿದ್ದಾರೆ. ಇದೆಲ್ಲ ಸುಳ್ಳು. ಯಾವ ಕಿಕ್ಕೂ ಇಲ್ಲ, ಬ್ಯಾಕೂ ಇಲ್ಲ ಎಂದು ಬಿಜೆಪಿಯವರಿಗೆ ಅವರು ಸೂಕ್ಷ್ಮವಾಗಿ ಟಾಂಗ್ ನೀಡಿದರು. ಮೇಲ್ಸೇತುವೆ ವಿವಾದ: ಹೊಸಕೆರೆಹಳ್ಳಿಯ ಕೆಇಬಿ ವೃತ್ತದಲ್ಲಿ ನಿರ್ಮಿಸಿರುವ ಈ ಹೊಸ ಮೇಲ್ಸೇತುವೆಗೆ ಪಟೇಲ್ ಚಿನ್ನಪ್ಪ ವೃತ್ತ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂಬ ಮೇಯರ್ ಜಿ.ಪದ್ಮಾವತಿ ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಮೇಲ್ಸೇತುವೆ ಇರುವ ಜಾಗ ನನ್ನ ಪತಿ ರಂಗಸ್ವಾಮಿ ಎಂಬುವರಿಗೆ ಸೇರಿದ್ದು, ನನ್ನ ಪತಿ 4.20 ಎಕರೆ ಭೂಮಿ ಖರೀದಿಸಿ ಬಡಾವಣೆ ನಿರ್ಮಿಸಿದ್ದರು.

ಆ ನಂತರ ಬಿಡಿಎಗೆ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟಿದ್ದು ನನ್ನ ಪತಿ. ಹಾಗಾಗಿ ಈ ವೃತ್ತಕ್ಕೆ ರಂಗಸ್ವಾಮಿ ವೃತ್ತ ಎಂದು ಹೆಸರಿಡಬೇಕೆಂದು ರಂಗಸ್ವಾಮಿ ಅವರ ಪತ್ನಿ ಚಂಪಕಾವತಿ ಆಗ್ರಹಿಸಿದ್ದಾರೆ. ಹಾಗಾಗಿ ಈ ವೃತ್ತಕ್ಕೆ ಪಟೇಲ್ ಚಿನ್ನಪ್ಪ ಹೆಸರಿಡಬೇಕೋ ಅಥವಾ ರಂಗಸ್ವಾಮಿ ವೃತ್ತ ಎಂದು ನಾಮಕರಣ ಮಾಡಬೇಕೋ ಎಂಬುದು ತೀರ್ಮಾನವಾಗದೆ ವಿವಾದ ಉಂಟಾಗದೆ. ವಸತಿ ಸಚಿವ ಎಂ.ಕೃಷ್ಣಪ್ಪ, ಶಾಸಕರಾದ ರವಿಸುಬ್ರಹ್ಮಣ್ಯ, ಟಿ.ಎ.ಶರವಣ, ಮೇಯರ್ ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin