ಉತ್ತರ ಕರ್ನಾಟಕದಲ್ಲಿ ಸ್ಪರ್ದಿಸುವ ಕುರಿತು ಆಲೋಚಿಸಿ ತೀರ್ಮಾನಿಸುತ್ತೇನೆ : ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurap

ಬೆಂಗಳೂರು, ಸೆ.17- ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ವರಿಷ್ಠರಿಂದ ಬಂದಿರುವುದು ನಿಜ. ಈ ಬಗ್ಗೆ ಆಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇನೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ರಾಜ್ಯ ರೈತ ಕಾರ್ಯಕಾರಿಣಿ ಸಭೆಯ ಬಳಿಕ ಸುದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಗಾಲಕೋಟೆ, ವಿಜಯಪುರ, ಹಾವೇರಿ ಸೇರಿದಂತೆ ಮತ್ತಿತರ ಕಡೆ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ ಎಂದರು.ಕೇಂದ್ರ ವರಿಷ್ಠರು ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಈ ಹಿಂದೆಯೇ ಸೂಚಿಸಿದ್ದರು. ನಾನು ಈವರೆಗೂ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಅದನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ ಎಂದು ತಿಳಿಸಿದರು.

ನನಗೆ ರಾಜಕೀಯ ಪುನರ್‍ಜನ್ಮ ನೀಡಿದ ಶಿವಮೊಗ್ಗ ಹಾಗೂ ಶಿಕಾರಿಪುರವನ್ನು ಎಂದಿಗೂ ಮರೆಯುವುದಿಲ್ಲ. ನಾನು ಈ ಮಟ್ಟಕ್ಕೆ ಬೆಳೆದಿದ್ದರೆ ಅದು ನನ್ನ ಜಿಲ್ಲೆಯ ಕಾರ್ಯಕರ್ತರ ಪರಿಶ್ರಮದ ಫಲ. ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ನಾನು ಕನಸಿನಲ್ಲಿಯೂ ನಿರೀಕ್ಷೆ ಮಾಡಿರಲಿಲ್ಲ ಎಂದರು. ವರಿಷ್ಠರು ಏಕಾಏಕಿ ಸೂಚಿಸಿರುವುದರಿಂದ ನಾನೂ ಕೂಡ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದರ ಬಗ್ಗೆ ಗೊಂದಲದಲ್ಲಿ ಸಿಲುಕಿದ್ದೇನೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಕೆಲವು ಸಂದರ್ಭಗಳಲ್ಲಿ ನಾವು ನಮ್ಮ ಸ್ವಂತ ಹಿತಾಸಕ್ತಿ ಮರೆತು ಕೆಲವೊಂದು ತ್ಯಾಗ ಮಾಡಲೇಬೇಕಾಗುತ್ತದೆ. ಚುನಾವಣೆಗೆ 7-8 ತಿಂಗಳು ಇರುವುದರಿಂದ ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಎಲ್ಲರ ಜತೆ ಚರ್ಚಿಸಿ ಸರಿಯಾದ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಪುತ್ರ ರಾಘವೇಂದ್ರ ಶಿಕಾರಿಪುರ ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ರೈತ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಅನ್ನದಾತ ಕಂಗಾಲಾಗಿದ್ದಾನೆ. ಅವರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು.
ಒಂದೆಡೆ ಬರಗಾಲ, ಮತ್ತೊಂದಡೆ ಅಷ್ಟೋಇಷ್ಟೋ ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ರೈತರು ತೊಂದರಗೊಳಗಾಗಿದ್ದಾರೆ. ಸರ್ಕಾರ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ನಾವು 150 ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲಲೇಬೇಕು. ರಾಜ್ಯ ಉಸ್ತುವಾರಿ ಮುರಳೀಧರರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್‍ಜಾವ್ಡೆಕರ್, ಸಹ ಉಸ್ತುವಾರಿ ಪಿಯೂಸ್ ಗೋಯೆಲ್ ಸೇರಿದಂತೆ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ನೀವು ಕೂಡ ನಿಮ್ಮ ನಿಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾವುದೇ ಇಲಾಖೆಗೆ ಹೋದರೂ ಹಣ ಕೊಡದೆ ಯಾವುದೇ ಕೆಲಸವಾಗುವುದಿಲ್ಲ. ಬಹುತೇಕ ಎಲ್ಲಾ ಸಚಿವರು ಹಗಲು ದರೋಡೆಯಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ಸಚಿವರ ಬಂಡವಾಳವನ್ನು ಬಯಲು ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ರೈತ ಮೋರ್ಚಾ ಅಧ್ಯಕ್ಷ ಟಿ.ಎಚ್.ವಿಜಯಶಂಕರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರೈತ ಮೋರ್ಚಾ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin