ಬುಲೆಟ್ ರೈಲು ಬಿಟ್ಟು ಸಾರಿಗೆ ವ್ಯವಸ್ಥೆಗೆ ಒತ್ತು ಕೊಡಿ : ರಾಮಲಿಂಗಾರೆಡ್ಡಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ramalinga

ಬೆಂಗಳೂರು, ಸೆ.17- ಕೋಟ್ಯಂತರ ರೂ. ದುಂದು ವೆಚ್ಚದ ಯೋಜನೆಗಳ ಬದಲಾಗಿ ಜನಸಾಮಾನ್ಯರ ಕೈಗೆಟಕುವ ಬಸ್ ಸಂಚಾರದಂತಹ ಸಾರಿಗೆ ವ್ಯವಸ್ಥೆಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ. ರಾಜ್ಯ ಒಕ್ಕಲಿಗ ಸಂಘದ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ನೌಕರರ ಕ್ರೆಡಿಟ್ ಸಹಕಾರ ಸಂಘ ಜತೆಯಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಬುಲೆಟ್ ಟ್ರೈನ್ ಯೋಜನೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿ ಮೆಟ್ರೋ ಯೋಜನೆ ಜಾರಿಗೆ ತರಲಾಗಿದೆ. ಆದರೂ ಸಂಚಾರ ದಟ್ಟಣೆಗೆ ಮುಕ್ತಿ ಸಿಕ್ಕಿಲ್ಲ. ಈಗಲೂ ಹೆಚ್ಚು ಜನ ಬಸ್ ಸಂಚಾರವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ರೂಪಿಸಲು ಹೆಚ್ಚು ಹಣ ಖರ್ಚು ಮಾಡಬೇಕು. ಸಾಮೂಹಿಕ ಸಾರಿಗೆ ವ್ಯವಸ್ಥೆ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕೆಂದು ಅಭಿಪ್ರಾಯಪಟ್ಟರು.

ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಟೀಕೆ ಮಾಡುವವರು ನೆರೆ ರಾಜ್ಯದಲ್ಲಿರುವ ಬಸ್ ಸೌಕರ್ಯಗಳನ್ನು ಒಮ್ಮೆ ನೋಡಿಕೊಂಡು ಬರಲಿ. ನಮ್ಮಲ್ಲಿನ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್‍ಗಳು ಉತ್ತಮವಾಗಿವೆ. ಬಸ್‍ಗಳ ಗುಣಮಟ್ಟವೂ ಚೆನ್ನಾಗಿದೆ. ದೇಶದಲ್ಲೇ ಉತ್ತಮ ಸೇವೆ ಒದಗಿಸುತ್ತಿರುವುದಕ್ಕೆ ಹಲವು ಬಾರಿ ಪ್ರಶಸ್ತಿಗಳನ್ನೂ ಪಡೆದಿದ್ದೇವೆ ಎಂದರು. ನಾನು ಸಾರಿಗೆ ಸಚಿವನಾಗಿದ್ದಾಗ 40 ಹೊಸ ಘಟಕಗಳನ್ನು ಆರಂಭಿಸಿದ್ದೇನೆ. 70 ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದೇನೆ. ಯಾವುದೇ ದೂರುಗಳಿಲ್ಲದೆ ಸಾರಿಗೆ ಇಲಾಖೆ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಚೆನ್ನಾಗಿ ಓದಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರ ಕನಸ್ಸನ್ನು ನನಸು ಮಾಡಬೇಕು ಎಂದು ಕಿವಿಮಾತು ಹೇಳಿದರು. ಕೆಎಸ್‍ಆರ್‍ಟಿಸಿ ಅಧ್ಯಕ್ಷ ಗೋವಿಂದ ಪೂಜಾರಿ ಮಾತನಾಡಿ, ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಎಡವುತ್ತಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡುವುದರಲ್ಲೇ ಎಲ್ಲರೂ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಿ, ಮೌಲ್ಯಗಳನ್ನು ಕಲಿಸಿ. ಭವಿಷ್ಯದಲ್ಲಿ ತಮ್ಮಷ್ಟಕ್ಕೆ ತಾವೇ ಬದುಕು ರೂಪಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇನ್ನು ಹೆಚ್ಚಿನ ಒತ್ತು ನೀಡಬೇಕಿದೆ. ಹೆಚ್ಚು ಓದಿಸಿದರೆ ಮದುವೆ ಮಾಡುವುದು ಕಷ್ಟ ಎಂಬ ಧೋರಣೆ ಕೆಲವು ಪೋಷಕರಲ್ಲಿದೆ. ಇಂತಹ ಮನೋಭಾವವನ್ನು ಬಿಟ್ಟು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ಕೆಎಸ್‍ಆರ್‍ಟಿಸಿ ಸಿಬ್ಬಂದಿಯ ಬಹಳಷ್ಟು ಮಕ್ಕಳು ಉತ್ತಮ ಅಂಕ ಪಡೆದಿದ್ದಾರೆ. ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವುದೇ ಒಂದು ಗೌರವ ಎಂದು ಹೇಳಿದರು.
ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ಎಐಟಿಯುಸಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಅಧ್ಯಕ್ಷ ಪೋ.ಕೆ.ಎಸ್.ಶರ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

Facebook Comments

Sri Raghav

Admin